Greater Bengaluru News9 : ರಾಜಧಾನಿ ಬೆಂಗಳೂರಿನಲ್ಲಿ ವಿಐಪಿ ಸಂಸ್ಕೃತಿ ಹಾಗೂ ಭದ್ರತಾ ವ್ಯವಸ್ಥೆಯ ಹೆಸರಿನಲ್ಲಿ ಸಾಮಾನ್ಯ ಜನರ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿರುವ ಘಟನೆ ಮತ್ತೊಮ್ಮೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ (Old Airport Road) ಅಂಡರ್ಪಾಸ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ನಡುವೆಯೇ, ರಾಜ್ಯಪಾಲರ ಸಂಚಾರದ ಹಿನ್ನೆಲೆಯಲ್ಲಿ ನಿನ್ನೆ ಸುಮಾರು 30 ನಿಮಿಷಗಳ ಕಾಲ ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ಪ್ರದೇಶದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.
ಈ ಗೊಂದಲದ ನಡುವೆ ಗರ್ಭಿಣಿ ಪತ್ನಿಯನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಟ್ರಾಫಿಕ್ನಲ್ಲಿ ಸಿಲುಕಿಕೊಂಡ ಘಟನೆ ಸಾರ್ವಜನಿಕರ ಮನಸ್ಸನ್ನು ಕಲುಕಿದೆ. ತೀವ್ರ ದಟ್ಟಣೆ ಹಾಗೂ ಪರ್ಯಾಯ ಮಾರ್ಗಗಳ ಕೊರತೆಯಿಂದಾಗಿ ಅವರು ನಡುರಸ್ತೆಯಲ್ಲೇ ಸಂಕಷ್ಟಕ್ಕೆ ಒಳಗಾದ ದೃಶ್ಯಗಳು ಆತಂಕ ಮೂಡಿಸಿವೆ.
ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಸಾಮಾನ್ಯ ಜನರ ಜೀವ ಮತ್ತು ಅಗತ್ಯತೆಗಳು ವಿಐಪಿ ಸಂಚಾರಕ್ಕಿಂತ ಕಡಿಮೆಯೇ?” ಎಂದು ಪ್ರಶ್ನಿಸಿದ್ದಾರೆ.
ಅಂಡರ್ಪಾಸ್ ಕಾಮಗಾರಿಯಿಂದಲೇ ಈಗಾಗಲೇ ಕಿರಿದಾಗಿರುವ ರಸ್ತೆಯಲ್ಲಿ ಸೂಕ್ತ ವ್ಯವಸ್ಥೆ ಮಾಡದೇ ಗಣ್ಯರ ಸಂಚಾರಕ್ಕೆ ರಸ್ತೆ ಬಂದ್ ಮಾಡಿರುವುದು ಸರಿಯೇ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಚರ್ಚೆ ಜೋರಾಗಿದೆ. ಬೆಂಗಳೂರು ಟ್ರಾಫಿಕ್ ಪೊಲೀಸರು (BTP) ವಿರುದ್ಧ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾಗುತ್ತಿವೆ.


