ನವದೆಹಲಿ: ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸರ್ಕಾರಿ ನೌಕರನೊಬ್ಬ ಅಪರಾಧಿ ಎಂದು ಸಾಬೀತುಪಡಿಸಲು ಆತನೇ ನೇರವಾಗಿ ಲಂಚದ ಹಣವನ್ನು ಕೈಯಾರೆ ಸ್ವೀಕರಿಸಿರಬೇಕು ಎಂಬ ನಿಯಮವಿಲ್ಲ. ಆತನ ಪರವಾಗಿ ಮಧ್ಯವರ್ತಿಗಳು ಲಂಚ ಪಡೆದಿದ್ದರೂ ಆ ಸರ್ಕಾರಿ ನೌಕರನನ್ನು ಹೊಣೆಗಾರನನ್ನಾಗಿ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಮೂಲಕ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪೊಲೀಸ್ ಠಾಣೆಯ ಪಿಎಸ್‌ಐ ಕೆ. ರಂಗಯ್ಯ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ಈ ತೀರ್ಪು ನೀಡಿದೆ. ಪಿಎಸ್‌ಐ ರಂಗಯ್ಯ ನೇರವಾಗಿ ಲಂಚಕ್ಕೆ ಬೇಡಿಕೆ ಇಟ್ಟಿಲ್ಲ ಅಥವಾ ಹಣವನ್ನು ವೈಯಕ್ತಿಕವಾಗಿ ಪಡೆದುಕೊಂಡಿಲ್ಲ ಎಂದು ಹೇಳಿ ಹೈಕೋರ್ಟ್, 2023ರ ಜೂನ್‌ನಲ್ಲಿ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಿತ್ತು.
ಲಂಚದ ಬೇಡಿಕೆ ಮತ್ತು ಹಣ ಸ್ವೀಕಾರ ಎರಡನ್ನೂ ಸಾಂದರ್ಭಿಕ ಸಾಕ್ಷ್ಯಗಳ ಮೂಲಕವೂ ನ್ಯಾಯಾಲಯದಲ್ಲಿ ಸಾಬೀತುಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ತಮ್ಮ ಪರವಾಗಿ ಕಚೇರಿಯ ಸಹೋದ್ಯೋಗಿಗಳು ಅಥವಾ ಖಾಸಗಿ ಮಧ್ಯವರ್ತಿಗಳ ಮೂಲಕ ಲಂಚದ ಹಣವನ್ನು ಸ್ವೀಕರಿಸುವ ತಂತ್ರವನ್ನು ಅನುಸರಿಸುತ್ತಿದ್ದಾರೆ. ಆದರೆ, ಕಾನೂನಿನ ಪ್ರಕಾರ ಇದು ಅಧಿಕಾರಿಯದೇ ಬೇಡಿಕೆ ಮತ್ತು ಸ್ವೀಕಾರ ಎಂದು ಪರಿಗಣಿತವಾಗುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಅಧಿಕಾರಿಯು ಲಂಚದ ಹಣವನ್ನು ದೈಹಿಕವಾಗಿ ತಾನೇ ಮುಟ್ಟಿರಬೇಕೆಂದೇನೂ ಇಲ್ಲ. ಆತನ ಅರಿವಿಗೆ ಬಂದು, ಆತನ ಪರವಾಗಿ ಬೇರೊಬ್ಬರು ಹಣ ಪಡೆದಿದ್ದರೂ ಅದು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವೇ ಆಗುತ್ತದೆ ಎಂದು ನ್ಯಾಯಾಲಯ ದೃಢಪಡಿಸಿದೆ. ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಭ್ರಷ್ಟ ಅಧಿಕಾರಿಗಳು ಕಾನೂನಿನಿಂದ ತಪ್ಪಿಸಿಕೊಳ್ಳುವುದಕ್ಕೆ ಬ್ರೇಕ್ ಹಾಕಲು ಈ ತೀರ್ಪು ಮಹತ್ವದ್ದಾಗಿದೆ.


