BBMP
Loading ...

Police

Greater Bengaluru news9: ಆಸ್ತಿ ವಿಲ್‌​ ಸಾಕ್ಷಿಯೊಬ್ಬರನ್ನು ಸಕಾರಣಗಳಿಲ್ಲದೆ ಬಂಧಿಸಿದ್ದ ನಗರದ ವೈಟ್‌​ಫೀಲ್ಡ್‌​ ಪೊಲೀಸರ ಕ್ರಮವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್‌​, ಠಾಣೆಯ ತನಿಖಾಧಿಕಾರಿಗೆ 3 ಲಕ್ಷ ರೂ. ದಂಡ ವಿಧಿಸಿದೆ.

ಅಲ್ಲದೆ, ”ಯಾವುದೇ ಕಾರಣಗಳಿಲ್ಲದಿದ್ದರೂ ಬಂಧಿಸುವ ಚಾಳಿ ಶುರುವಾಗಿದೆ. ಬಂಧಿಸುವುದು ಪೊಲೀಸರಿಗೆ ತಮಾಷೆಯಾಗಿದೆಯಾ? ದೂರುದಾರರು ಪ್ರಭಾವಿಯಾಗಿದ್ದರೆ ಸಾಕು ಬಂಧಿಸುತ್ತೀರಾ? ಕೊಲೆಯಂತಹ ಪ್ರಕರಣದ ತನಿಖೆ ಬಿಟ್ಟು ಸಿವಿಲ್‌ ವ್ಯಾಜ್ಯಗಳ ಹಿಂದೆ ಬಿದ್ದಿದ್ದೀರಾ? ಇಲ್ಲಿ ಕಾನೂನಿನ ಆಡಳಿತವಿಲ್ಲ, ಪೊಲೀಸ್‌ ರಾಜ್ಯವಾಗುವುದನ್ನು ತಪ್ಪಿಸಿ. ಇಲ್ಲವಾದರೆ ಉಕ್ಕಿನ ಕೈಗಳಿಂದ ನಿಲ್ಲಿಸಬೇಕಾಗುತ್ತದೆ” ಎಂದು ತಾಕೀತು ಮಾಡಿದೆ.

ಉಯಿಲಿಗೆ ಸಾಕ್ಷಿಯಾಗಿ ಸಹಿ ಮಾಡಿದ್ದರ ಪರಿಣಾಮ ಬಂಧನ ಮಾಡಿರುವುದನ್ನು ಅಕ್ರಮ ಎಂದು ಘೋಷಣೆ ಮಾಡುವಂತೆ ಕೋರಿ ವರ್ತೂರಿನ ನಿವಾಸಿ ಕೆ.ಎನ್‌.ಮೋಹನ್‌​ ರೆಡ್ಡಿ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.

ಸಿವಿಲ್‌ ಕೇಸ್‌ಗೆ ಪೊಲೀಸ್‌ ಎಂಟ್ರಿ ಒಪ್ಪಲ್ಲ ಎಂದ ಕೋರ್ಟ್‌
”ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಅರ್ಜಿದಾರರಿಗೆ ಸೂಚನೆ ನೀಡಿದ್ದ ಪೊಲೀಸರು, ಆ.25ರಂದೇ ಅಂದರೆ ಎರಡು ದಿನಗಳ ಮುನ್ನವೇ ಬಂಧಿಸಿದ್ದಾರೆ. ಪ್ರಕರಣವು ಸಂಪೂರ್ಣವಾಗಿ ಸಿವಿಲ್‌​ ಸ್ವಭಾವದ್ದಾಗಿದೆ. ಇಂತಹ ಪ್ರಕರಣದಲ್ಲಿ ಪೊಲೀಸರ ಮಧ್ಯಪ್ರವೇಶಕ್ಕೆ ಅವಕಾಶವೇ ಇಲ್ಲ. ಆದರೂ, ವಿನಾಕಾರಣ ಬಂಧಿಸಿರುವುದನ್ನು ಒಪ್ಪಲಾಗುವುದಿಲ್ಲ,” ಎಂದು ನ್ಯಾಯಪೀಠ ತಿಳಿಸಿದೆ.

ರಾಜ್ಯ ಪೊಲೀಸರು ಅಲ್ಲೊಂದು ಇಲ್ಲೊಂದು ಒಳ್ಳೆಯ ಕೆಲಸ ಮಾಡುತ್ತಾರೆಂದು ಸುಮ್ಮನಾದರೆ ಸಿವಿಲ್‌ ಪ್ರಕರಣಗಳಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಉನ್ನತ ಅಧಿಕಾರಿಗಳ ಒತ್ತಡದಿಂದ ಬಂಧಿಸಿದ್ದಾರಾ? ಇಲ್ಲವೇ ಎಸಿಪಿ, ಡಿಸಿಪಿ ಏನು ಮಾಡುತ್ತಿದ್ದಾರೆ, ನಿರ್ಲಕ್ಷ್ಯಕ್ಕೆ ಅವರೂ ಹೊಣೆಯಾಗಲಿದ್ದಾರೆ. ಅಷ್ಟೇ ಅಲ್ಲದೆ, ವಿಚಾರಣಾ ನ್ಯಾಯಾಲಯವು ಪೊಲೀಸರು ಹೇಳಿದ್ದನ್ನು ಕೇಳಿ ಆದೇಶಗಳನ್ನು ಮಾಡುವುದಕ್ಕೆ ಮುಂದಾಗುತ್ತಿವೆ,” ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.

ನ್ಯಾಯಾಲಯ ಪೊಲೀಸರಿಗೆ ತೀವ್ರ ತರಾಟೆ
ಇದೇ ವೇಳೆ ಕಳೆದ ಬಾರಿಯ ನಿರ್ದೇಶನದಂತೆ ನ್ಯಾಯಾಲಯದ ಮುಂದೆ ವಿಚಾರಣೆಗೆ ಖುದ್ದು ಹಾಜರಾಗಿದ್ದ ವೈಟ್‌ಫೀಲ್ಡ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಸುನಿಲ್‌ ಕುಮಾರ್‌ ಅವರನ್ನು ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿತು. ”ಮೋಹನ್‌ ರೆಡ್ಡಿಯನ್ನು ಬಂಧಿಸಿದ್ದೇಕೆ? ಹೇಗೆ? ಆರೋಪಿ ತನಿಖೆಗೆ ಸಹಕರಿಸದಿದ್ದರೆ ಬಂಧಿಸಬಹುದು. ಆದರೆ, ನೋಟಿಸ್‌ ನೀಡಿದ ದಿನವೇ ಬಂಧಿಸಿದ್ದೇಕೆ? ಮೇಲಧಿಕಾರಿಗಳು ಬಂಧಿಸಲು ಸೂಚಿಸಿದ್ದರೆ? ಯಾರ ಒತ್ತಡಕ್ಕೆ ಮಣಿದು ಬಂಧಿಸಿದ್ದೀರಿ?” ಎಂದು ಪ್ರಶ್ನಿಸಿತು. ನ್ಯಾಯಪೀಠದ ಯಾವೊಂದು ಪ್ರಶ್ನೆಗೂ ಸುನಿಲ್‌ ಕುಮಾರ್‌ ಉತ್ತರಿಸದೇ ಮೌನವಾಗಿದ್ದರು.

”ಅರ್ಜಿದಾರರನ್ನು ಬಂಧಿಸುವ ಮೂಲಕ ಅವರ ಸ್ವಾತಂತ್ರ್ಯ ಕಸಿದಿರುವ ಕುಕೃತ್ಯಕ್ಕೆ ತನಿಖಾಧಿಕಾರಿ ಮಾತ್ರವಲ್ಲ, ಇಡೀ ಠಾಣೆ ಸಮಾನವಾಗಿ ಹೊಣೆಯಾಗಿದೆ. ಸಕಾರಣವಿಲ್ಲದೆ ವ್ಯಕ್ತಿಯೊಬ್ಬರನ್ನು ಬಂಧಿಸುತ್ತಿರಬೇಕಾದರೆ ಡಿಸಿಪಿ ಮತ್ತು ಎಸಿಪಿ ಏನು ಮಾಡುತ್ತಿದ್ದರು? ವಿಧಿಸಲಾಗುವ ದಂಡವನ್ನು ಅವರೂ ಪಾವತಿಸಬೇಕು,” ಎಂದು ಹೇಳಿತು.

ರಾಜ್ಯ ಸರಕಾರಿ ಅಭಿಯೋಜಕ ಬಿ.ಎನ್‌.ಜಗದೀಶ್‌, ”ಪ್ರಮಾದ ಆಗಿ ಹೋಗಿದೆ. ತನಿಖಾಧಿಕಾರಿಯು ಯುವಕನಾಗಿದ್ದು, ಒಂದು ಅವಕಾಶ ನೀಡಬೇಕು,” ಎಂದು ಕೋರಿದರು. ಆದರೆ, ನ್ಯಾಯಪೀಠವು ಅದಕ್ಕೆ ಕಿವಿಗೊಡಲಿಲ್ಲ. ಅರ್ಜಿದಾರರ ಪರ ವಕೀಲ ಅಗಂದ್‌ ಕಾಮತ್‌, ”ಇದೊಂದು ಸಿವಿಲ್‌ ಪ್ರಕರಣವಾಗಿದ್ದು, ವಿಲ್‌ ತಿರುಚಲಾಗಿದೆ ಎಂದು ವಿಲ್‌ಗೆ ಸಾಕ್ಷಿಯಾಗಿ ಸಹಿ ಹಾಕಿರುವ ಎರಡನೇ ಆರೋಪಿ ಮೋಹನ್‌ ರೆಡ್ಡಿಗೆ ನೋಟಿಸ್‌ ನೀಡಿದ ದಿನವೇ ತರಾತುರಿಯಲ್ಲಿ ಬಂಧಿಸಲಾಗಿದೆ,’ ಎಂದು ಹೇಳಿದರು.

Leave a Reply

Your email address will not be published. Required fields are marked *