ಇಡೀ ಭಾರತ ಗಾಢ ನಿದ್ರೆಯಲ್ಲಿರುವಾಗ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ. ರಾತ್ರಿ ಮಲಗಿ ಬೆಳಗ್ಗೆ ಎಚ್ಚರಗೊಂಡ ಜನರು ಅನಿರೀಕ್ಷಿತ ಬೆಳವಣಿಗೆ ಕಂಡು ಅಚ್ಚರಿಕೊಂಡಿದ್ದಾರೆ. ಅಲ್ಲದೆ, ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಪ್ರವಾಸಿಗರನ್ನು ಬಲಿ ಪಡೆದುಕೊಂಡ ಭಯೋತ್ಪಾದಕ ದಾಳಿಗೆ ಭಾರತ ಸೇಡು ತೀರಿಸಿಕೊಂಡಿರುವ ಸುದ್ದಿ ಕೇಳಿ ಸಂಭ್ರಮಿಸುತ್ತಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಬಲಿಯಾಗಿದ್ದಕ್ಕೆ ಪ್ರತೀಕಾರವಾಗಿ, ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಇ-ಮೊಹಮ್ಮದ್ (ಜೆಇಎಂ), ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ಗೆ ಸಂಬಂಧಿಸಿದ ಒಂಬತ್ತು ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ಗಡಿಯಾಚೆಗಿನ ಕಾರ್ಯಾಚರಣೆ ನಡೆಸಿದೆ.
ಆಪರೇಷನ್ ಸಿಂಧೂರ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಪಹಲ್ಗಾಮ್ನಲ್ಲಿ ಪುರುಷ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ಮಾಡುವ ಮೂಲಕ ಅನೇಕ ಭಾರತೀಯ ಮಹಿಳೆಯರ ಹಣೆಯ ಸಿಂಧೂರವನ್ನು ಅಳಿಸಿ ಹಾಕಿದ್ದಕ್ಕೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಈ ಕಾರ್ಯಾಚರಣೆ ಮಾಡಲಾಗಿದೆ.
ಆಪರೇಷನ್ ಸಿಂಧೂರ್: ನಡೆದಿದ್ದೇನು?
1. ಭಾರತ ಪಾಕಿಸ್ತಾನದ ಮೇಲೆ ಮಿಲಿಟರಿ ದಾಳಿ ನಡೆಸಿದೆ ಎಂಬ ಮೊದಲ ಸೂಚನೆಯನ್ನು ಸೇನೆಯು ಎಕ್ಸ್ ಖಾತೆಯಲ್ಲಿ ಐದು ಪದಗಳ ಪೋಸ್ಟ್ನಲ್ಲಿ ನೀಡಿತು. ನ್ಯಾಯವು ಸಿಕ್ಕಿದೆ. ಜೈ ಹಿಂದ್! ಎಂದು ಪೋಸ್ಟ್ನಲ್ಲಿ ಹಂಚಿಕೊಂಡಿದೆ. ಅದೇ ಸಮಯದಲ್ಲಿ, “ಹೊಡೆಯಲು ಸಿದ್ಧ, ಗೆಲ್ಲಲು ತರಬೇತಿ ಪಡೆದ” ಎಂಬ ಶೀರ್ಷಿಕೆಯೊಂದಿಗೆ ಸೇನೆಯು ಮಿಲಿಟರಿ ಕವಾಯತುಗಳನ್ನು ನಡೆಸುತ್ತಿರುವ ವಿಡಿಯೋವನ್ನು ಬಿಡುಗಡೆ ಮಾಡಿದೆ.
2. ಈ ದಾಳಿ ನಡೆದ ಕೆಲವು ನಿಮಿಷಗಳ ನಂತರ, ಸರ್ಕಾರವು ಒಂದು ಸಂಕ್ಷಿಪ್ತ ಹೇಳಿಕೆಯನ್ನು ನೀಡಿತು. ಅದರಲ್ಲಿ ಪಾಕಿಸ್ತಾನದ ಯಾವುದೇ ಮಿಲಿಟರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹೇಳಿತು. ನಾವು ತೆಗೆದುಕೊಂಡ ಈ ಕ್ರಮಗಳು ಕೇಂದ್ರೀಕೃತವಾಗಿತ್ತು, ನಿರ್ದಿಷ್ಟ ಮಾನದಂಡ ಹಾಗೂ ಯಾವುದೇ ಉಲ್ಬಣಗೊಳ್ಳದ ಸ್ವಭಾವ ಹೊಂದಿತ್ತು. ದಾಳಿಯ ವೇಳೆ ಗುರಿಗಳ ನಿಖರ ಆಯ್ಕೆ ಮತ್ತು ದಾಳಿಯ ವಿಧಾನದಲ್ಲಿ ಭಾರತ ಗಣನೀಯ ಸಂಯಮವನ್ನು ಪ್ರದರ್ಶಿಸಿದೆ ಎಂದು ಸರ್ಕಾರ ಹೇಳಿಕೆ ನೀಡಿದೆ.
3. ವಾಸ್ತವವಾಗಿ, ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕರ ಭಾಗಿಯಾಗಿರುವ ಬಗ್ಗೆ “ವಿಶ್ವಾಸಾರ್ಹ ಸುಳಿವುಗಳನ್ನು” ಸೂಚಿಸುವ ವಿವರವಾದ ಹೇಳಿಕೆಯನ್ನು ವಾಷಿಂಗ್ಟನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಬಿಡುಗಡೆ ಮಾಡಿದೆ.
4. ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಭದ್ರಕೋಟೆಯಾದ ಬಹವಾಲ್ಪುರ ಸೇರಿದಂತೆ ಒಟ್ಟಾರೆಯಾಗಿ ಒಂಬತ್ತು ಸ್ಥಳಗಳನ್ನು ಭಾರತೀಯ ಸೇನೆ ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಲಷ್ಕರ್-ಇ-ತೊಯ್ಬಾದ ಪ್ರಧಾನ ಕಚೇರಿಯಾದ ಮುರಿಡ್ಕೆ, ಗುಲ್ಪುರ್, ಭಿಂಬರ್, ಚಕ್ ಅಮ್ರು, ಬಾಗ್, ಕೋಟ್ಲಿ, ಸಿಯಾಲ್ಕೋಟ್ ಮತ್ತು ಮುಜಫರಾಬಾದ್ ಅನ್ನು ಸಹ ಸೇನೆ ಗುರಿಯಾಗಿಸಿಕೊಂಡು ದಾಳಿ ಮಾಡಿದೆ.
5. ಪಾಕಿಸ್ತಾನದ ಪ್ರದೇಶದೊಳಗೆ ವೈಮಾನಿಕ ದಾಳಿ ನಡೆಸಲು, ದಾಳಿಗಾಗಿ ವಿನ್ಯಾಸಗೊಳಿಸಲಾದ SCALP ಕ್ರೂಸ್ ಕ್ಷಿಪಣಿಗಳನ್ನು ಹೊಂದಿರುವ ರಫೇಲ್ ಫೈಟರ್ ಜೆಟ್ಗಳು ಮತ್ತು ಗಾಳಿಯಿಂದ ನೆಲಕ್ಕೆ ನಿಖರತೆ-ನಿರ್ದೇಶಿತ ಯುದ್ಧಸಾಮಗ್ರಿಗಳಾದ ಹ್ಯಾಮರ್ ಬಾಂಬ್ಗಳನ್ನು ದಾಳಿಗೆ ಬಳಸಲಾಯಿತು.
6. ಪಹಲ್ಗಾಮ್ ದಾಳಿಯ ನಂತರ ಹಲವಾರು ಸಭೆಗಳನ್ನು ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ರಾತ್ರಿಯಿಡೀ ಆಪರೇಷನ್ ಸಿಂಧೂರ ಅನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿದ್ದಾರೆ. ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು “ಗುರುತಿಸುತ್ತದೆ, ಟ್ರ್ಯಾಕ್ ಮಾಡುತ್ತದೆ ಮತ್ತು ಶಿಕ್ಷಿಸುತ್ತದೆ” ಎಂದು ಈ ಹಿಂದೆಯೇ ಪ್ರಧಾನಿ ಮೋದಿ ಪ್ರತಿಜ್ಞೆ ಮಾಡಿದ್ದರು.
7. ದಾಳಿಗೆ ಪ್ರತಿಯಾಗಿ, ಪಾಕಿಸ್ತಾನ ಸೇನೆಯು ಪೂಂಚ್-ರಾಜೌರಿ ಪ್ರದೇಶದ ನಿಯಂತ್ರಣ ರೇಖೆಯ ಉದ್ದಕ್ಕೂ ಫಿರಂಗಿ ಗುಂಡಿನ ದಾಳಿ ನಡೆಸಿತು, ಇದರಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಪಾಕಿಸ್ತಾನವು ಕದನ ವಿರಾಮವನ್ನು ಉಲ್ಲಂಘಿಸುತ್ತಿರುವುದು ಇದು ಸತತ 13 ನೇ ದಿನವಾಗಿದೆ.
8. ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಭಾರತದ ದಾಳಿಯನ್ನು “ಯುದ್ಧದ ಕೃತ್ಯ” ಎಂದು ಕರೆದಿದ್ದು, ಸೂಕ್ತ ಪ್ರತ್ಯುತ್ತರ ನೀಡಲಾಗುವುದು ಎಂದು ಹೇಳಿದ್ದಾರೆ. ಈ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಪಾಕಿಸ್ತಾನ ಆರೋಪ ಮಾಡಿದೆ. ದಾಳಿಯಲ್ಲಿ ಎಂಟು ಮಂದಿ ಮೃತಪಟ್ಟಿದ್ದು, 33 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕ್ ಹೇಳಿಕೊಂಡಿದೆ.
9. ಧರ್ಮಶಾಲ, ಲೇಹ್, ಜಮ್ಮು, ಶ್ರೀನಗರ ಮತ್ತು ಅಮೃತಸರ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಇದಲ್ಲದೆ, ಇಂದು ಶ್ರೀನಗರ ವಿಮಾನ ನಿಲ್ದಾಣದಿಂದ ಯಾವುದೇ ನಾಗರಿಕ ವಿಮಾನಗಳು ಕಾರ್ಯನಿರ್ವಹಿಸುವುದಿಲ್ಲ. ಕಾಶ್ಮೀರದ ಕೆಲವು ಭಾಗಗಳಲ್ಲಿ ಇಂದು ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಲ್ಪಡುತ್ತವೆ.
10. ದಾಳಿಗಳ ನಂತರ, ಭಾರತವು ಅಮೆರಿಕ, ರಷ್ಯಾ, ಯುಕೆ ಮತ್ತು ಸೌದಿ ಅರೇಬಿಯಾ ಸೇರಿದಂತೆ ಹಲವಾರು ಪ್ರಮುಖ ದೇಶಗಳಿಗೆ ಮಾಹಿತಿ ನೀಡಿದೆ. ತಮ್ಮ ಮೊದಲ ಹೇಳಿಕೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಘಟನೆಯನ್ನು “ನಾಚಿಕೆಗೇಡು” ಎಂದು ಕರೆದಿದ್ದಾರೆ. ಏನೋ ಸಂಭವಿಸಲಿದೆ ಎಂದು ಮೊದಲೇ ನನನಗೆ ತಿಳಿದಿತ್ತು ಎಂದು ಟ್ರಂಪ್ ಹೇಳಿದ್ದಾರೆ.
ಪಹಲ್ಗಾಮ್ ದಾಳಿಗೆ ಸೇಡು: ರಾತ್ರೋರಾತ್ರಿ ಪಾಕ್ ಉಗ್ರ ನೆಲೆಗಳನ್ನು ಉಡೀಸ್ ಮಾಡಿದ ಭಾರತೀಯ ಸೇನೆ! 30 ಉಗ್ರರ ಸಾವು


