BBMP
Loading ...

Operation Sindoor

ಭಾರತೀಯ ಸೇನೆಯು ಇಂದು ಬೆಳಗಿನ ಜಾವ “ಆಪರೇಷನ್ ಸಿಂಧೂರ್” ಎಂಬ ದಿಟ್ಟ ಕಾರ್ಯಾಚರಣೆಯನ್ನು ಪಾಕ್​ನ ಉಗ್ರರ ತಾಣಗಳ ಮೇಲೆ ನಡೆಸಿದೆ. ಆದರಂತೆ ಇಂದು ಮುಂಜಾನೆ ಅಂದರೆ, ಬೆಳಗಿನ 1:28 ರಿಂದ 1:51 ರವರೆಗೆ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ವಾಯುಪಡೆಯು ಪಾಕ್​ನ ಉಗ್ರರ ಅಡುಗುತಾಣಗಳನ್ನು ನಾಶ ಮಾಡಿದ್ದು, ಬರೋಬ್ಬರಿ 23 ನಿಮಿಷಗಳಲ್ಲಿ ಉಗ್ರರನ್ನು ಮಟ್ಟ ಹಾಕಿದೆ. ಈ ಮೂಲಕ ಪಹಲ್ಗಾಮ್ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ.

ಪಿಒಕೆ ಜೊತೆಗೆ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ವಾಯುದಾಳಿ ನಡೆಸಿದೆ. ಇದರಲ್ಲಿ ಒಟ್ಟು 9 ಭಯೋತ್ಪಾದಕ ಶಿಬಿರಗಳನ್ನು ನಾಶವಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ. ಈ ದಾಳಿಯಲ್ಲಿ ಸುಮಾರು 30 ಭಯೋತ್ಪಾದಕರು ಸಾವಿಗೀಡಾಗಿದ್ದಾರೆ ಎಂದು ಭಾರತೀಯ ಸೇನೆ ಹೇಳಿದೆ. ಆದರೆ ಪಾಕಿಸ್ತಾನವು ಕೇವಲ 8 ಜನರು ಮಾತ್ರ ಮೃತಪಟ್ಟಿದ್ದಾರೆ ಎಂದು ವಾದಿಸಿದೆದೆ.

ಭಾರತವು ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಮತ್ತು ಮುಜಫರಾಬಾದ್, ಪಂಜಾಬ್‌ನ ಬಹವಾಲ್ಪುರ್ ಮತ್ತು ಲಾಹೋರ್‌ನ ಒಂದು ಸ್ಥಳದ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಈ ಸಂದರ್ಭದಲ್ಲಿ, ‘ಆಕಾಶದಿಂದ ನೆಲಕ್ಕೆ’ ಕ್ಷಿಪಣಿಗಳನ್ನು ಹಾರಿಸಲಾಯಿತು. ದಾಳಿಯ ನಂತರ, ಭಾರತೀಯ ಸೇನೆಯು ಎಕ್ಸ್​ ಖಾತೆಯಲ್ಲಿ ‘ನ್ಯಾಯ ಸಿಕ್ಕಿದೆ.. ಜೈ ಹಿಂದ್’ ಎಂದು ಪೋಸ್ಟ್ ಮಾಡಿದೆ. ಇವು ಸರ್ಜಿಕಲ್ ಸ್ಟ್ರೈಕ್‌ಗಳಲ್ಲ. ದಾಳಿಗಳನ್ನು ಭಾರತೀಯ ಪ್ರದೇಶದಿಂದ ಅತ್ಯಂತ ನಿಖರವಾಗಿ ನಡೆಸಲಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಪಹಲ್ಗಾಮ್​ನಲ್ಲಿ ಭಯೋತ್ಪಾದಕರು ಪುರುಷರ ಮೇಲೆ ಮಾತ್ರ ಗುಂಡು ಹಾರಿಸಿ ಕೊಲ್ಲುವ ಮೂಲಕ ಅನೇಕ ಭಾರತೀಯ ಮಹಿಳೆಯರ ಹಣೆಯ ಸಿಂಧೂರವನ್ನು ಒರೆಸಿದ್ದರಿಂದ ಈ ಕಾರ್ಯಾಚರಣೆಗೆ ‘ಸಿಂಧೂರ್’ ಎಂದು ಹೆಸರಿಡಲಾಗಿದೆ. ಮಸೂದ್ ಅಜರ್ ಮತ್ತು ಹಫೀಜ್ ಸಯೀದ್‌ನ ಪ್ರಮುಖ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿದುಬಂದಿದೆ. ಭಾರತದ ದಾಳಿಯ ನಂತರ, ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ.

ಭಾರತೀಯ ದಾಳಿಗಳನ್ನು ದೃಢಪಡಿಸಿದ ಪಾಕಿಸ್ತಾನ, ಪ್ರತೀಕಾರದ ದಾಳಿಗಳನ್ನು ನಡೆಸುವುದಾಗಿ ಘೋಷಿಸಿದೆ. ಭಾರತೀಯ ಸೇನೆಯು ದಾಳಿಗಳು ಬೆಳಗಿನ ಜಾವ 1:44 ಕ್ಕೆ ನಡೆದಿವೆ ಎಂದು ಅಧಿಕೃತವಾಗಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ದಾಳಿಯ ನಂತರ ರಾಜನಾಥ್ ಸಿಂಗ್ ಟ್ವಿಟರ್‌ನಲ್ಲಿ ಭಾರತ್ ಮಾತಾ ಕಿ ಜೈ ಎಂದು ಬರೆದುಕೊಂಡಿದ್ದಾರೆ. ಆದಾಗ್ಯೂ, ದಾಳಿಗಳ ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಈ ದಾಳಿಗಳನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *