BBMP
Loading ...

Loka_Sabha.max-1280x720.format-webp

Greater Bengaluru News9 : ಹೊಸ ಜನಗಣತಿ ನಡೆಸದೆಯೇ ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸಲು ಮತ್ತು ಕ್ಷೇತ್ರ ಪುನರ್ವಿಂಗಡಣೆಯನ್ನು ಕೈಗೊಳ್ಳಲು ಪ್ರಯತ್ನಿಸುವ ಮಸೂದೆಯನ್ನು ಲೋಕಸಭೆ ಶುಕ್ರವಾರ ತಿರಸ್ಕರಿಸಿದೆ. ಕೇಂದ್ರ ಸರ್ಕಾರ ಮಸೂದೆ ಅಂಗೀಕಾರಕ್ಕೆ ಅಗತ್ಯವಾಗಿದ್ದ ಮೂರನೇ ಎರಡು ಭಾಗದಷ್ಟು ಮತಗಳನ್ನು ಪಡೆಯಲು ವಿಫಲವಾಗಿದೆ. ಒಟ್ಟು 489 ಸಂಸದರು ಮತದಾನದಲ್ಲಿ ಭಾಗವಹಿಸಿದ್ದು, ಸಂಪೂರ್ಣ ಬಹುಮತಕ್ಕೆ 326 ಮತಗಳ ಅವಶ್ಯಕತೆ ಇತ್ತು. 278 ಸದಸ್ಯರು ಎನ್‌ಡಿಎ ಪರ ಮತ ಚಲಾಯಿಸಿದ್ದರೆ 211 ಸದಸ್ಯರು ಮಸೂದೆ ವಿರುದ್ಧ ಮತ ಚಲಾವಣೆ ಮಾಡಿದ್ದರು. 131 ನೇ ಸಂವಿಧಾನ ತಿದ್ದುಪಡಿಯ ಸೋಲಿನ ನಂತರ ಸ್ಪೀಕರ್‌ ಓಂ ಬಿರ್ಲಾ ಕಲಾಪವನ್ನು ನಾಳೆಗೆ ಮುಂದೂಡಿದ್ದಾರೆ.

ಮಸೂದೆಯನ್ನು ತಿರಸ್ಕರಿಸಿದ ಕುರಿತು ಮಾತನಾಡಿದ ಕೇಂದ್ರ ಸಚಿವ ಕಿರಣ್‌ ರಿಜುಜು ಫಲಿತಾಂಶವನ್ನು ದುರದೃಷ್ಟಕರ ಎಂದು ಕರೆದಿದ್ದಾರೆ. ಸಾಂವಿಧಾನಿಕ ತಿದ್ದುಪಡಿಗೆ ಅಂತರ್ಗತವಾಗಿ ಸಂಬಂಧಿಸಿರುವ ಕೇಂದ್ರಾಡಳಿತ ಪ್ರದೇಶಗಳು ಮತ್ತು ಗಡಿನಿರ್ಣಯದ ಎರಡು ಸಂಬಂಧಿತ ಮಸೂದೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಏನಿದು ಮಹಿಳಾ ಮೀಸಲಾತಿ ಕಾಯಿದೆ?
ಭಾರತದ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಉದ್ದೇಶವನ್ನು ಹೊಂದಿತ್ತು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು (33%) ಸ್ಥಾನಗಳನ್ನು ಮೀಸಲಿಡುವುದು ಇದರ ಮುಖ್ಯ ಗುರಿ.

ಈ ಮಸೂದೆಯನ್ನು ಮೊದಲು 2023 ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. ವಿಶೇಷ ಅಧಿವೇಶನದಲ್ಲಿ, ಇದನ್ನು 2029 ರ ಸಾರ್ವತ್ರಿಕ ಚುನಾವಣೆಗಳಿಂದಲೇ ಜಾರಿಗೆ ತರಲು ಅಗತ್ಯವಿರುವ ತಿದ್ದುಪಡಿಗಳ ಕುರಿತು ಚರ್ಚೆಗಳು ನಡೆದಿದ್ದವು.

ಮಹಿಳಾ ಮೀಸಲಾತಿ ಮಸೂದೆಯನ್ನು 1996 ರಲ್ಲಿಯೇ ಸದನದಲ್ಲಿ ಪರಿಚಯಿಸಲಾಗಿತ್ತು.1998ರಿಂದ 2003ರ ನಡುವೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮೀಸಲಾತಿ ಮಸೂದೆಯನ್ನು 4 ಬಾರಿ ಸಂಸತ್‌ನಲ್ಲಿ ಮಂಡಿಸಿತ್ತು. ಪಕ್ಷಗಳಲ್ಲಿ ಒಮ್ಮತ ಇಲ್ಲದ್ದರಿಂದ ಮಸೂದೆ ಅಂಗೀಕಾರ ಆಗಲಿಲ್ಲ. ಇನ್ನು ಯುಪಿಎ ಸರ್ಕಾರದ ಅವಧಿಯಲ್ಲಿ 2008ರಲ್ಲಿ ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಮಂಡನೆ ಮಾಡಲಾಯಿತು. ಆದರೆ ಅಲ್ಲಿಯೂ ಅದು ವಿಫಲವಾಗಿತ್ತು. 2023ರ ಸೆಪ್ಟೆಂಬರ್‌ನಲ್ಲಿ ಇದನ್ನು ‘ನಾರಿ ಶಕ್ತಿ ವಂದನ್ ಅಧಿನಿಯಮ’ ಎಂದು ಅಂಗೀಕರಿಸಲಾಯಿತು.

2027ರಲ್ಲಿ ನಡೆಯಲಿರುವ ಜನಗಣತಿ ಆಧಾರದಲ್ಲಿ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿತ್ತು. ಗಣತಿ ಮುಗಿದರೂ ಅದರ ಸಂಪೂರ್ಣ ವರದಿ ಕೈ ಸೇರುವುದು ಸುಮಾರು 2030 ಕ್ಕೆ. 2029 ಕ್ಕೆ ಲೋಕಸಭಾ ಚುನಾವಣೆ ನಡೆಯಲಿದೆ. 2011ರ ಜನಗಣತಿಯ ದತ್ತಾಂಶದ ಆಧಾರದಲ್ಲಿಯೇ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ತರಲು ಸರ್ಕಾರ ಸಜ್ಜಾಗಿತ್ತು. ವಿಪಕ್ಷಗಳು ಈ ಕ್ರಮವನ್ನು ವಿರೋಧಿಸಿದ್ದವು. ಇದೀಗ ಲೋಕಸಭೆಯಲ್ಲಿ ಈ ಮಸೂದೆ ತಿರಸ್ಕಾರಗೊಂಡಿದೆ.

Leave a Reply

Your email address will not be published. Required fields are marked *