Greater Bengaluru News9 : ಕರ್ನಾಟಕ ಸಚಿವ ಸಂಪುಟ (ಕ್ಯಾಬಿನೆಟ್) ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ಹಲವು ಮಹತ್ವದ ಯೋಜನೆಗಳು ಹಾಗೂ ಪ್ರಮುಖ ನಿರ್ಧಾರಗಳ ಕುರಿತು ಸುದೀರ್ಘ ಮಾಹಿತಿ ಹಂಚಿಕೊಂಡಿದ್ದಾರೆ. ಸಂಪುಟ ಸಭೆಯಲ್ಲಿ ಚರ್ಚೆಯಾದ ಎಲ್ಲಾ ಪ್ರಮುಖ ವಿಷಯಗಳ ಮಾಹಿತಿ ಈ ಕೆಳಗಿದೆ ಓದಿ..
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಸೊನ್ನ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ ನೀರನ್ನು ಲಿಫ್ಟ್ ಇರಿಗೇಶನ್ (ಏತ ನೀರಾವರಿ) ಮಾಡಲು ಸರ್ಕಾರ ಹಸಿರು ನಿಶಾನೆ ನೀಡಿದೆ. ಘಟಪ್ರಭಾ ಕಾಲುವೆಯಿಂದ ಸುಮಾರು 38 ರಿಂದ 44 ಕಿಲೋಮೀಟರ್ ವರೆಗೆ ನೀರಾವರಿ ಸೌಲಭ್ಯವನ್ನು ಒದಗಿಸುವ ಸಲುವಾಗಿ 98.50 ಕೋಟಿ ರೂ.ಗಳ (ಅಂದಾಜು 99 ಕೋಟಿ ರೂ.) ಬೃಹತ್ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಬೀಳಗಿ ಏತ ನೀರಾವರಿ ಯೋಜನೆಯಿಂದ ಆ ಭಾಗದ ಸುಮಾರು 7,000 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದ್ದು, ರೈತರಿಗೆ ವರದಾನವಾಗಲಿದೆ ಎಂದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಕಲಬುರಗಿಯಲ್ಲಿ ಬೃಹತ್ ಜವಳಿ ಪಾರ್ಕ್ (ಟೆಕ್ಸ್‌ಟೈಲ್ ಪಾರ್ಕ್) ನಿರ್ಮಿಸಲು ಸಂಪುಟ ಒಪ್ಪಿಗೆ ನೀಡಿದೆ. ಇದು ಒಟ್ಟು 1,770 ಕೋಟಿ ರೂ. ವೆಚ್ಚದ ಬೃಹತ್ ಯೋಜನೆಯಾಗಿದ್ದು, ಇದರ ಮೊದಲ ಹಂತದ (First Phase) ಕಾಮಗಾರಿಯನ್ನು 320 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಕೆ.ಐ.ಎ.ಡಿ.ಬಿ (KIADB) ಗೆ ಅನುಮತಿ ನೀಡಲಾಗಿದೆ.
ಬೆಂಗಳೂರಿನ ಎನ್‌ಜಿಎಫ್ (NGF) ಆವರಣದಲ್ಲಿರುವ ಸುಮಾರು 60 ಎಕರೆ ಜಮೀನಿನಲ್ಲಿ ಹಸಿರು ಮತ್ತು ಮರಗಳನ್ನು ಸಂರಕ್ಷಿಸಿ, ಸಾರ್ವಜನಿಕರ ಬಳಕೆಗೆ ಅನುಕೂಲವಾಗುವಂತೆ ‘ಟ್ರೀ ಪಾರ್ಕ್’ (Tree Park – Phase 1B) ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಕಲ್ಚರಲ್ ಸೆಂಟರ್ ಮತ್ತು ಸ್ಪೋರ್ಟ್ಸ್ ಚಟುವಟಿಕೆಗಳಿಗೆ ಉತ್ತೇಜನ ನೀಡಲು 26 ಕೋಟಿ ರೂ. ಮಸಲನ್ನು ಕಾಯ್ದಿರಿಸಲಾಗಿದೆ. ಇದರೊಂದಿಗೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶೂ, ಬಟ್ಟೆ ಹಾಗೂ ಯೂನಿಫಾರ್ಮ್ ಸೇರಿದಂತೆ ಕ್ರೀಡಾ ಸಾಮಗ್ರಿಗಳನ್ನು ಸೂಕ್ತ ಸಮಯದಲ್ಲಿ ವಿತರಿಸಲು 33 ಕೋಟಿ ರೂ. ವೆಚ್ಚದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ದೇವನಹಳ್ಳಿಯಲ್ಲಿ 30 ಕೋಟಿ ರೂ. ವೆಚ್ಚದ ಏರೋಸ್ಪೇಸ್ ಪಾರ್ಕ್
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲೇ ಇರುವ ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ‘ಕಾಮನ್ ಫೆಸಿಲಿಟಿ ಸೆಂಟರ್’ (Common Facility Center) ಒಂದನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ವಿವಿಧ ಉದ್ಯಮಿಗಳು ಇಲ್ಲಿ ಏರೋಸ್ಪೇಸ್‌ಗೆ ಸಂಬಂಧಿಸಿದ ಯಂತ್ರೋಪಕರಣಗಳ ರಿಪೇರಿ ಹಾಗೂ ಇತರ ತಾಂತ್ರಿಕ ಸೇವೆಗಳನ್ನು ಪಡೆಯಲು ಇದು ನೆರವಾಗಲಿದೆ. ಕೆ.ಐ.ಎ.ಡಿ.ಬಿ ವತಿಯಿಂದ ನಿರ್ಮಾಣವಾಗಲಿರುವ ಈ ಯೋಜನೆಗೆ 30 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ.
ವಿಕಲಚೇತನರ ಭೂಮಿ ಮಂಜೂರಾತಿಯಲ್ಲಿ 20 ಲಕ್ಷ ರೂ.ವರೆಗೆ ರಿಯಾಯ್ತಿ
ವಿಕಲಚೇತನರ ಹಕ್ಕು ಕಾಯ್ದೆ-2016 ರ ಅನ್ವಯ (Right of Persons with Disabilities Act), ವಿಕಲಚೇತನರಿಗೆ ಜಮೀನು ಹಂಚಿಕೆಯಲ್ಲಿ ರಿಯಾಯ್ತಿ ನೀಡಲು ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಕೆ.ಐ.ಎ.ಡಿ.ಬಿ ಭೂಮಿ ಮಂಜೂರಾತಿಯಲ್ಲಿ ವಿಕಲಚೇತನರಿಗೆ ಈಗಾಗಲೇ 5% ಮೀಸಲಾತಿ ನೀಡಲಾಗುತ್ತಿದ್ದು, ಈಗ ಅದರ ದರ ನಿಗದಿಯಲ್ಲಿಯೂ ವಿನಾಯ್ತಿ ತರಲಾಗಿದೆ. ಜಮೀನಿನ ಒಟ್ಟು ಮೌಲ್ಯದ 10% ರಷ್ಟು ಅಥವಾ ಗರಿಷ್ಠ 20 ಲಕ್ಷ ರೂಪಾಯಿಗಳ ಸೀಲಿಂಗ್ (ಗರಿಷ್ಠ ಮಿತಿ) ವರೆಗೆ ರಿಯಾಯ್ತಿ ನೀಡಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಜೀರಾಂಜಿ ಯೋಜನೆ ಜಾರಿಗೆ ಕ್ರಮ ಹಾಗೂ ಖಾಸಗಿ ರಸ್ತೆಗಳು ಸರ್ಕಾರಿ ಸ್ವತ್ತು
ಕೇಂದ್ರ ಸರ್ಕಾರದ 60:40 ಅನುಪಾತದ ಜೀರಾಂಜಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದೆ. ಈ ಯೋಜನೆಗೆ 40% ನಷ್ಟು ರಾಜ್ಯದ ಪಾಲನ್ನು ಭರಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 3,806 ಕೋಟಿ ರೂ.ಗಳ ಭಾರಿ ಆರ್ಥಿಕ ಹೊರೆ ಬೀಳಲಿದ್ದು, ಈ ಕುರಿತು ಪ್ರೊಟೆಸ್ಟ್ (ಕ್ಷೇಮ ಹಕ್ಕು) ಸಲ್ಲಿಸಲಾಗುವುದು. ಇದರ ನಡುವೆಯೇ ಯೋಜನೆಯನ್ನು ಅನುಷ್ಠಾನಗೊಳಿಸಲೂ ಕ್ರಮ ಕೈಗೊಳ್ಳಲಾಗುವುದು.
ಇದೇ ವೇಳೆ, ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಭೂ ಸ್ಥಿತೀಕರಣ ಮಾಡಲು ನಿರ್ಧರಿಸಲಾಗಿದ್ದು, ಯಾವುದೇ ಲೇಔಟ್‌ಗಳಲ್ಲಿ ಡೆವಲಪರ್‌ಗಳು ಕೇವಲ ಒಂದು ಸೈಟ್ ಹಂಚಿಕೆ ಮಾಡಿದ್ದರೂ ಸಹ, ಆ ಲೇಔಟ್‌ನ ಖಾಸಗಿ ರಸ್ತೆಗಳು ಇನ್ಮುಂದೆ ಸ್ವಯಂಚಾಲಿತವಾಗಿ ಸಾರ್ವಜನಿಕ/ಸರ್ಕಾರಿ ರಸ್ತೆಗಳಾಗಿ (Public Roads) ಪರಿವರ್ತನೆಯಾಗಲಿವೆ. ಅದು ಯಾವುದೇ ಕಾರಣಕ್ಕೂ ಖಾಸಗಿಯವರ ವಶದಲ್ಲಿ ಉಳಿಯುವಂತಿಲ್ಲ ಎಂದು ಕಾನೂನು ತಿದ್ದುಪಡಿ ತರಲಾಗುತ್ತಿದೆ.
ಫುಟ್‌ಪಾತ್ ವ್ಯಾಪಾರಿಗಳ ಸ್ಥಳಾಂತರ ಹಾಗೂ ವೆಂಡಿಂಗ್ ಮೆಷಿನ್ ಸೌಲಭ್ಯ
ಪಾದಚಾರಿಗಳ ಹಿತದೃಷ್ಟಿಯಿಂದ ಪಾದಚಾರಿ ರಸ್ತೆಗಳಲ್ಲಿ (Footpath) ವ್ಯಾಪಾರ ಮಾಡಲು ಅವಕಾಶವಿರುವುದಿಲ್ಲ. ಬೀದಿ ಬದಿ ವ್ಯಾಪಾರಿಗಳನ್ನು ರಸ್ತೆಯ ಪಕ್ಕದ ನಿಗದಿತ ಜಾಗಗಳಿಗೆ ಸ್ಥಳಾಂತರಿಸಲು ಸಾಮೂಹಿಕ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ರಾಜ್ಯದಲ್ಲಿ ಸುಮಾರು 60,000 ಜನರ ಸರ್ವೇ ಮಾಡಲಾಗಿದ್ದು, ಅದರಲ್ಲಿ 37,000 ಕ್ಕೂ ಹೆಚ್ಚು ಜನರು ವೆಂಡಿಂಗ್ ಮೆಷಿನ್‌ಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಸರ್ಕಾರದಿಂದ 50 ರಿಂದ 60 ಕೋಟಿ ರೂ. ಅನುದಾನ ಲಭ್ಯವಿದ್ದು, ಅವರಿಗೆ ಸೂಕ್ತ ಸಬ್ಸಿಡಿಯನ್ನೂ ಒದಗಿಸಿಕೊಡಲಾಗುವುದು. ಜೊತೆಗೆ, ರಾಜ್ಯಕ್ಕೆ ಹರಿದುಬರುತ್ತಿರುವ ಬಂಡವಾಳ ಹೂಡಿಕೆಗಳ (Investments) ವ್ಯವಸ್ಥಿತ ಪರಿಶೀಲನೆಗಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ 5 ರಿಂದ 6 ಜನರ ವಿಶೇಷ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯು ಮುಂದಿನ ಕ್ಯಾಬಿನೆಟ್ ಸಭೆಗೆ ವರದಿ ನೀಡಲಿದೆ.
ಕಡ್ಡಾಯ ಬಯೋಮೆಟ್ರಿಕ್ ಹಾಜರಾತಿ ( ಎಸ್‌ಐಆರ್): ಆಗಸ್ಟ್‌ನಲ್ಲಿ ಅಧಿವೇಶನ
ರಾಜ್ಯದಲ್ಲಿ ಪಾರದರ್ಶಕತೆ ತರಲು ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಕಡ್ಡಾಯ ಬಯೋಮೆಟ್ರಿಕ್ ಹಾಜರಾತಿ (エಸ್‌ಐಆರ್) ಪ್ರಕ್ರಿಯೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಿಗಳು ಹಾಗೂ ಶಾಸಕರು ಕ್ಷೇತ್ರಗಳಲ್ಲಿ ಈ ಕೆಲಸಗಳಲ್ಲಿ ನಿರತರಾಗಿರುವುದರಿಂದ, ಜುಲೈನಲ್ಲಿ ನಡೆಯಬೇಕಿದ್ದ ವಿಧಾನಸಭೆ ಅಧಿವೇಶನವನ್ನು ಮುಂದೂಡಲಾಗಿದ್ದು, ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಬಿಎಲ್‌ಒ (BLO) ಗಳು ಕಡ್ಡಾಯವಾಗಿ ಮನೆ ಮನೆಗೆ ಹೋಗಿ ಎಸ್‌ಐಆರ್ ಅರ್ಜಿಗಳನ್ನು ನೀಡಬೇಕು. ಯಾವುದೇ ಕಲ್ಯಾಣ ಮಂಟಪಗಳಲ್ಲಿ ಕುಳಿತು ಈ ಪ್ರಕ್ರಿಯೆ ಮಾಡುವುದು ಅಪರಾಧವಾಗಲಿದ್ದು, ಈ ಕುರಿತು ಜುಲೈ 29 ರವರೆಗೆ ನೋಂದಣಿಗೆ ಕಟ್ಟುನಿಟ್ಟಿನ ಸಮಯಾವಕಾಶ ನೀಡಲಾಗಿದೆ.
ಬಸ್ ಪ್ರಯಾಣ ದರ ಹೆಚ್ಚಳದ ಕುರಿತು ತಾಂತ್ರಿಕ ವರದಿ ಪರಿಶೀಲನೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದಾಗಿ ಸಾರಿಗೆ ಇಲಾಖೆಯು ತೀವ್ರ ನಷ್ಟ ಅನುಭವಿಸುತ್ತಿದ್ದು, ಪ್ರಯಾಣ ದರ ಹೆಚ್ಚಳದ ಕುರಿತು ಭಾರಿ ಕಳವಳ ವ್ಯಕ್ತಪಡಿಸಿದೆ. ಸಾರಿಗೆ ಸಂಸ್ಥೆಗಳನ್ನು ಮತ್ತು ಸಿಬ್ಬಂದಿಗಳನ್ನು ಉಳಿಸಿಕೊಳ್ಳುವುದು ಇಲಾಖೆಗೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಗೆ ಆಗುತ್ತಿರುವ ನಷ್ಟ ಹಾಗೂ ತಾಂತ್ರಿಕ ವಿವರಗಳ (Technical Report) ಸಂಪೂರ್ಣ ವರದಿಯನ್ನು ನೀಡುವಂತೆ ಸಾರಿಗೆ ಇಲಾಖೆಗೆ ಸೂಚಿಸಲಾಗಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ಕಟ್ಟಡಗಳ OC ಮತ್ತು CC ಸಲ್ಲಿಕೆ ಅವಧಿ ಆಗಸ್ಟ್ 15 ರವರೆಗೆ ವಿಸ್ತರಣೆ
ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಕಟ್ಟಡಗಳ ಓನರ್‌ಶಿಪ್ ಸರ್ಟಿಫಿಕೇಟ್ (OC) ಮತ್ತು ಕಂಪ್ಲೀಷನ್ ಸರ್ಟಿಫಿಕೇಟ್ (CC) ನಿಯಮಗಳಿಗೆ ಸಂಬಂಧಿಸಿದಂತೆ ಹಳ್ಳಿಗಳಿಂದ ಹಾಗೂ ಸಾರ್ವಜನಿಕರಿಂದ ಭಾರಿ ಒತ್ತಡ ಇತ್ತು. ಇದನ್ನು ಮನಗಂಡು, ಈಗಾಗಲೇ ಮನೆ ಅಥವಾ ಕಟ್ಟಡಗಳನ್ನು ನಿರ್ಮಿಸಿರುವ ಮಾಲೀಕರು ತಮ್ಮ ಕಟ್ಟಡದ ಫೋಟೋ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ಆಗಸ್ಟ್ 15, 2026 ರವರೆಗೆ ವಿಸ್ತರಿಸಲಾಗಿದೆ. ಈ ವಿನಾಯ್ತಿಯು ಕೇವಲ ರೆಸಿಡೆನ್ಶಿಯಲ್ (ವಸತಿ) ಕಟ್ಟಡಗಳಿಗೆ ಮಾತ್ರ ಅನ್ವಯಿಸಲಿದೆ.
ಬರಗಾಲದ ಆತಂಕ: ಜಲಾಶಯಗಳ ಒಳಹರಿವು ತೀವ್ರ ಕುಸಿತ
ರಾಜ್ಯದಲ್ಲಿ ಸದ್ಯ ಬರಗಾಲದ (Draft) ಆತಂಕ ತೀವ್ರಗೊಳ್ಳುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಲಾಶಯಗಳಿಗೆ ಬರುತ್ತಿರುವ ನೀರಿನ ಒಳಹರಿವಿನ (Inflow) ಪ್ರಮಾಣ ಶೂನ್ಯಕ್ಕೆ ತಲುಪಿದೆ. ಕಾವೇರಿ ಬೇಸಿನ್‌ನಲ್ಲೂ ನೀರಿನ ಕೊರತೆ ಹೆಚ್ಚಾಗಿದ್ದು, ಕಬಿನಿ ಜಲಾಶಯದಲ್ಲಿ ಹಿಂದೆ 79 ಟಿಎಂಸಿ ಇದ್ದ ನೀರಿನ ಪ್ರಮಾಣವು ಈಗ ಕೇವಲ 26 ಟಿಎಂಸಿಗೆ ಕುಸಿದಿದೆ. ಹೇಮಾವತಿ (88 ರಿಂದ 40ಕ್ಕೆ), ಕೆಆರ್‌ಎಸ್ (100 ರಿಂದ 22ಕ್ಕೆ) ಇಳಿಕೆಯಾಗಿದೆ.
ಹೀಗಾಗಿ ರೈತರು ಸರ್ಕಾರದ ಮೇಲೆ ನೀರಿಗಾಗಿ ಒತ್ತಡ ಹೇರಬಾರದು. ಜಲಾಶಯಗಳಲ್ಲಿ ನೀರಿಲ್ಲದೆ ನೀರು ಬಿಡಲು ಸಾಧ್ಯವಿಲ್ಲ. ಮುಂದಿನ ಮಳೆಯ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು ರೈತರು ಬೆಳೆಗಳನ್ನು ಹಾಕಬೇಕು. ಕೇಂದ್ರ ಸರ್ಕಾರವೂ ನಮಗೆ ನೀರಿನ ಅಭಾವದ ಮುನ್ಸೂಚನೆ ನೀಡಿದ್ದು, ವಿದ್ಯುತ್ ಅಭಾವ ತಡೆಗಟ್ಟಲು ಕಲ್ಲಿದ್ದಲು (Coal) ಸಂಗ್ರಹಿಸಿಟ್ಟುಕೊಳ್ಳಲು ಇಲಾಖೆಗೆ ಸೂಚಿಸಲಾಗಿದೆ. ಪರಿಸ್ಥಿತಿಯ ಅವಲೋಕನಕ್ಕಾಗಿ ತಾವು 4 ವಿಭಾಗಗಳಲ್ಲಿ ಪ್ರವಾಸ ಹಮ್ಮಿಕೊಳ್ಳುತ್ತಿರುವುದಾಗಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕಣ್ಣಿನ ಆರೋಗ್ಯಕ್ಕಾಗಿ ‘ಹಾರೈಕೆ’ ಸೇವೆಗೆ 26 ಕೋಟಿ ರೂ.
ರಾಜ್ಯದಲ್ಲಿ ಅಂಧತ್ವ ನಿವಾರಣೆ ಹಾಗೂ ಸಣ್ಣ ವಯಸ್ಸಿನ ಮಕ್ಕಳಲ್ಲಿ ಕಂಡುಬರುವ ದೃಷ್ಟಿ ದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ‘ಹಾರೈಕೆ’ ಸೇವೆಯನ್ನು ಬಲಪಡಿಸಲು ಸರ್ಕಾರ ನಿರ್ಧರಿಸಿದೆ. ಮಕ್ಕಳ ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ ಹಾಗೂ ಅಗತ್ಯ ಚಿಕಿತ್ಸೆಗಳನ್ನು ಒದಗಿಸುವ ಈ ಆರೋಗ್ಯ ಯೋಜನೆಗಾಗಿ ಸಚಿವ ಸಂಪುಟವು 26 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿದೆ.
ಪ್ರಜಾಸೇವೆ ಇಲಾಖೆ ಪ್ರಾರಂಭಕ್ಕೆ ನಿರ್ಧಾರ: ಜನರ ಕಷ್ಟ ಆಲಿಸಲು ಹೊಸ ಯೋಜನೆ
ಸಾರ್ವಜನಿಕರ ಸಮಸ್ಯೆಗಳು, ದೂರುಗಳು ಮತ್ತು ಪ್ರತಿಭಟನೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುವ ಸಲುವಾಗಿ ಸರ್ಕಾರವು ‘ಪ್ರಜಾಸೇವೆ ಇಲಾಖೆ’ (Department of Prajaseve) ಎಂಬ ಹೊಸ ಇಲಾಖೆಯನ್ನು ಪ್ರಾರಂಭಿಸಲು ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಈ ಇಲಾಖೆಯ ನೇರ ಉಸ್ತುವಾರಿಯನ್ನು ಒಬ್ಬ ಸಚಿವರಿಗೆ ವಹಿಸಲಾಗುತ್ತಿದ್ದು, ಒಬ್ಬ ಐಎಎಸ್ (IAS) ಅಧಿಕಾರಿಯನ್ನು ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗುವುದು.
ರಾಜ್ಯದ ಯಾವುದೇ ಮೂಲೆಯಲ್ಲಿ ಜನರ ಸಮಸ್ಯೆಗಳಿದ್ದರೂ, ಈ ಇಲಾಖೆಯ ಅಧಿಕಾರಿಗಳು ಅರ್ಜಿಗಳನ್ನು ಸ್ವೀಕರಿಸಿ ಕಾನೂನುಬದ್ಧವಾಗಿ ಪರಿಹರಿಸಲಿದ್ದಾರೆ. ಅಲ್ಲದೆ, ಪ್ರತಿ ಜಿಲ್ಲಾ ಉಸ್ತುವಾರಿ ಸಚಿವರು ಕಡ್ಡಾಯವಾಗಿ ತಿಂಗಳಿಗೆ ಎರಡು ಬಾರಿ ತಮ್ಮ ಜಿಲ್ಲೆಯ ವ್ಯಾಪ್ತಿಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ‘ಪ್ರಜಾಸೇವೆ ಅಭಿಯಾನ’ ನಡೆಸಬೇಕು. ಪ್ರತಿ ತಿಂಗಳ ಮೊದಲ ಶನಿವಾರ ಮತ್ತು ಮೂರನೇ ಶನಿವಾರದಂದು ಈ ಅಭಿಯಾನ ನಡೆಯಲಿದ್ದು, ಎಲ್ಲಾ ಇಲಾಖೆಯ ಕೌಂಟರ್‌ಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಅಲ್ಲಿ ಹಾಜರಿರಲಿದ್ದಾರೆ. ಜನರು ಬೆಂಗಳೂರಿಗೆ ಬಂದು ಕಾಯುವುದನ್ನು ತಪ್ಪಿಸಿ, ಸರ್ಕಾರವೇ ಜನರ ಮನೆ ಬಾಗಿಲಿಗೆ ಹೋಗಿ ಕಷ್ಟ ಆಲಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.


