Greater Bengaluru News9: ಸಿಲಿಕಾನ್ ಸಿಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಯೊಬ್ಬರ ಬೇಟೆಯಾಡಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಕುಷ್ಠರೋಗ ಅಧಿಕಾರಿ (DLO) ಡಾ. ಭುಜಬಲಿ ಯಲದುರ್ಗಿ ಅವರು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ರೆಡ್ಹ್ಯಾಂಡ್ ಆಗಿ ಬಿದ್ದಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲೇ ಇದ್ದುಕೊಂಡು ಕಾನೂನುಬದ್ಧ ಕೆಲಸಕ್ಕೆ ಹಣಕ್ಕೆ ಬೇಡಿಕೆಯಿಟ್ಟಿದ್ದ ಅಧಿಕಾರಿಯ ಮುಖವಾಡ ಈಗ ಕಳಚಿದೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (KPME) ಕಾಯ್ದೆಯಡಿ ಲೈಸೆನ್ಸ್ (ಪರವಾನಗಿ) ನವೀಕರಣ ಅಥವಾ ಹೊಸ ಅನುಮತಿ ನೀಡುವ ಪ್ರಕ್ರಿಯೆಗಾಗಿ ಡಾ. ಭುಜಬಲಿ ಅವರು ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಸಾರ್ವಜನಿಕರಿಗೆ ಸುಲಭವಾಗಿ ಸಿಗಬೇಕಾದ ಸರ್ಕಾರಿ ಸೇವೆಯನ್ನು ನೀಡಲು ಇವರು ಸತಾಯಿಸುತ್ತಿದ್ದರು ಎಂಬ ದೂರು ಕೇಳಿಬಂದಿದೆ.
ಪರವಾನಗಿ ಅನುಮತಿ ನೀಡಲು ಡಾ. ಭುಜಬಲಿ ಯಲದುರ್ಗಿ ಅವರು ಅರ್ಜಿದಾರರಿಂದ ಒಟ್ಟು 30 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಭ್ರಷ್ಟ ಅಧಿಕಾರಿಗೆ ಪಾಠ ಕಲಿಸಲು ನಿರ್ಧರಿಸಿದ ದೂರುದಾರರು, ಈ ಬಗ್ಗೆ ತಕ್ಷಣವೇ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದರು.
ಲೋಕಾಯುಕ್ತ ಅಧಿಕಾರಿಗಳ ಮಾರ್ಗದರ್ಶನದಂತೆ ಇಂದು ದೂರುದಾರರು ಮೊದಲ ಕಂತಿನ ರೂಪದಲ್ಲಿ 15 ಸಾವಿರ ರೂಪಾಯಿ ನಗದು ಹಣವನ್ನು ನೀಡಲು ಮುಂದಾಗಿದ್ದಾರೆ. ಬೆಂಗಳೂರಿನ ಕಚೇರಿಯಲ್ಲೇ ಡಾ. ಭುಜಬಲಿ ಅವರು ದೂರುದಾರರಿಂದ ಈ 15 ಸಾವಿರ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಹಣದ ಸಮೇತ ಅಧಿಕಾರಿಯನ್ನು ರೆಡ್ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ.
ಸದ್ಯ ಲೋಕಾಯುಕ್ತ ಅಧಿಕಾರಿಗಳು ಭುಜಬಲಿ ಯಲದುರ್ಗಿ ಅವರನ್ನು ಬಂಧಿಸಿದ್ದು, ಲಂಚದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಕಚೇರಿಯ ಮಹಜರು ಪ್ರಕ್ರಿಯೆ ಮುಂದುವರಿದಿದ್ದು, ಅಧಿಕಾರಿಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ದಾಳಿಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಮತ್ತೊಮ್ಮೆ ಬಿಸಿ ಮುಟ್ಟಿಸಿದೆ.


