Greater Bengaluru News9 : ಗ್ರಾಮೀಣ ಪ್ರದೇಶಗಳ ಆಸ್ತಿಗಳಿಗೆ ‘ಇ-ಸ್ವತ್ತು’ (E-Swathu) ಪ್ರಮಾಣಪತ್ರ ನೀಡಿಕೆಯಲ್ಲಿ ಆಗುತ್ತಿರುವ ವಿಳಂಬಕ್ಕೆ ಮುಕ್ತಿ ಹಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹಳ್ಳಿಗಳಲ್ಲಿ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ನೇರವಾಗಿ ‘ಮನೆ ಮನೆಗೆ ಇ-ಸ್ವತ್ತು’ ನೀಡುವ ವಿಶೇಷ ಅಭಿಯಾನವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಒಂದು ತಿಂಗಳಲ್ಲಿ ತಾಂತ್ರಿಕ ಸಮಸ್ಯೆಗಳಿಗೆ ಮುಕ್ತಿ
ಪ್ರಸ್ತುತ ಇ-ಸ್ವತ್ತು ವಿತರಣೆ ವ್ಯವಸ್ಥೆಯಲ್ಲಿ ಕೆಲವು ತಾಂತ್ರಿಕ ಅಡಚಣೆಗಳಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ಸಾಫ್ಟ್ವೇರ್ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಗರಿಷ್ಠ ಒಂದು ತಿಂಗಳ ಒಳಗಾಗಿ ಸಂಪೂರ್ಣವಾಗಿ ಬಗೆಹರಿಸಬೇಕು ಎಂದು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದ್ದಾರೆ.
ಮುಂದಿನ ತಿಂಗಳಿಂದಲೇ ಮನೆ ಬಾಗಿಲಿಗೆ ಯೋಜನೆ
ತಂತ್ರಾಂಶದ (Software) ಎಲ್ಲಾ ಸಮಸ್ಯೆಗಳು ನಿವಾರಣೆಯಾದ ತಕ್ಷಣ, ಅಂದರೆ ಮುಂದಿನ ತಿಂಗಳಿಂದಲೇ ಗ್ರಾಮೀಣ ಭಾಗದ ಪ್ರತಿ ಮನೆಗೆ ಖುದ್ದಾಗಿ ಇ-ಸ್ವತ್ತು ತಲುಪಿಸುವ ಬೃಹತ್ ಯೋಜನೆಯನ್ನು ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ. ಈ ಮಹತ್ವಾಕಾಂಕ್ಷಿ ಕ್ರಮದಿಂದಾಗಿ ಗ್ರಾಮೀಣ ಭಾಗದ ಜನರಿಗೆ ಯಾವುದೇ ವಿಳಂಬವಿಲ್ಲದೆ, ಪಾರದರ್ಶಕವಾಗಿ ತಮ್ಮ ಆಸ್ತಿ ದಾಖಲಾತಿಗಳು ಕೈಸೇರಲಿವೆ ಎಂದು ಸಚಿವರು ಭರವಸೆ ನೀಡಿದ್ದಾರೆ.


