Greater Bengaluru News9 : ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಸದ ಸಮಸ್ಯೆ ವಿಪರೀತವಾಗಿದೆ. ಇದೀಗ ಕಸದ ಸಮಸ್ಯೆಗೆ ಸಂಬಂಧಿಸಿದಂತೆ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಪಾಠ ಕಲಿಸುವುದಕ್ಕೆ ಗ್ರೇಟರ್ ಬೆಂಗಳೂರು ಆಡಳಿತವು ವಿನೂತನವಾದ ಕ್ರಮವನ್ನು ತೆಗೆದುಕೊಂಡು ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಅವರ ಮನೆಯ ಮುಂದೆಯೇ ಆಟೋ ಟಿಪ್ಪರ್ನಲ್ಲಿ ಕಸ ಸುರಿಯುವ ಮೂಲಕ ವಿನೂತನ ಶಿಕ್ಷೆ ಕೊಡುವುದಕ್ಕೆ ಮುಂದಾಗಿದೆ.
ಬೆಂಗಳೂರಿನಲ್ಲಿ ಕಳೆದ ಒಂದು ದಶಕದ ಅವಧಿಯಿಂದ ಕಸದ ಸಮಸ್ಯೆ ಹೆಚ್ಚಾಗಿದೆ. ಇದೀಗ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಕೊನೆಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಆಡಳಿತ) ಕ್ರಮಕ್ಕೆ ಮುಂದಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಷ್ಟಕ್ಕೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ತೆಗೆದುಕೊಂಡಿರುವ ಕ್ರಮವೇನು ಎನ್ನುವ ವಿವರ ನೋಡೋಣ.
ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು ಹಾಗೂ ಬ್ಲಾಕ್ಸ್ಪಾಟ್ಗಳ ಸೃಷ್ಟಿ ಹೆಚ್ಚಳವಾಗಿದೆ. ಇದಕ್ಕೆ ಮಹತ್ವದ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಇದೀಗ ಬೆಂಗಳೂರಿನ ಹೊಸಕೆರೆಹಳ್ಳಿಯ ದತ್ತಾತ್ರೆಯ ಟೆಂಪಲ್ ರೋಡ್ನಲ್ಲಿ ರಸ್ತೆಯಲ್ಲಿ ಕಸ ಎಸೆದ ವ್ಯಕ್ತಿಯ ಮನೆಯ ಮುಂದೆಯೇ ಆಟೋ ಟಿಪ್ಪರ್ನಲ್ಲಿ ಕಸ ಸುರಿಯಲಾಗಿದೆ. ಅಲ್ಲದೇ 100 ರೂಪಾಯಿ ದಂಡ ವಿಧಿಸಲಾಗಿದೆ.
ಕಸ ಬಂದರೂ ಹಾಕುತ್ತಿರಲಿಲ್ಲ: ಇನ್ನು ಬೆಂಗಳೂರಿನಲ್ಲಿ ಕಸದ ಗಾಡಿ ಬಂದರೂ ಜನ ಕಸದ ಗಾಡಿಗೆ ಕಸ ಹಾಕುತ್ತಿಲ್ಲ ಎನ್ನಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಗುರುತಿಸಿ ಅವರಿಗೆ ದಂಡ ವಿಧಿಸಲಾಗುತ್ತಿದೆ. ಕೊರಿಯಲ್ ಕವರ್ಗಳನ್ನು ಸಹ ಕೆಲವರು ಸುರಿದಿದ್ದು ಆ ವಿಳಾಸದ ಆಧಾರದ ಮೇಲೆ ಆ ವ್ಯಕ್ತಿಗಳ ಮನೆಯ ಮುಂದೆ ಕಸ ಸುರಿಯಲಾಗಿದೆ!.
@GBA_office cracks down on litterbugs!
— Rishita Khanna (@rishitaakhanna) October 30, 2025
Those dumping waste on roads now find the same garbage returned to their doorstep along with fines up to Rs 10,000 @the_hindu @THBengaluru pic.twitter.com/LpKTbTZT9R
ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯ ಎಲ್ಲಾ ವಿಭಾಗಗಳ ವಿವಿಧ ಪ್ರದೇಶಗಳಲ್ಲಿ ರಸ್ತೆ ಬದಿ ಹಾಗೂ ಎಲ್ಲೆಂದರಲ್ಲಿ ಕಸ ಹಾಕುವವರ ಮನೆಗಳನ್ನು ಪತ್ತೆ ಹಚ್ಚಿ ಅವರವರ ಮನೆಯ ಮುಂದೆ ಕಸ ಹಾಕಿ, ದಂಡ ವಿಧಿಸಲಾಯಿತು. ಇನ್ನು ಮುಂದೆ ರಸ್ತೆ ಬದಿ ಕಸ ಬಿಸಾಡದಂತೆ, ನಗರ ಪಾಲಿಕೆ ವತಿಯಿಂದ ಮನೆ ಮನೆಯ ಹತ್ತಿರ ಬರುವ ಆಟೋ ಟಿಪ್ಪರ್ ಗಳಿಗೆ ಒಣ ಕಸ ಮತ್ತು ಹಸಿ ಕಸವನ್ನು ಬೇರ್ಪಡಿಸಿ, ನಿಗದಿತ ಸಮಯದಲ್ಲಿ ಕಸವನ್ನು ನೀಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು ಎಂದು ಜಿಬಿಎ ಅಧಿಕಾರಿಗಳು ಹೇಳಿದ್ದಾರೆ.
ನಗರದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದ, ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ aವರು ಹೆಬ್ಬಾಳ ವಿಭಾಗ ವ್ಯಾಪ್ತಿಯ ಸಂಜಯ್ ನಗರ ಮಸ್ಟರಿಂಗ್ ಪಾಯಿಂಟ್ಗೆ ಭೇಟಿ ನೀಡಿ ಪೌರ ಕಾರ್ಮಿಕರ ಹಾಜರಾತಿ ಹಾಗೂ ಆಟೋ ಟಿಪ್ಪರ್ ಗಳ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.
ಪರಿಶೀಲನೆ ಸಮಯದಲ್ಲಿ ಪೌರಕಾರ್ಮಿಕರು ಕೈಗವಸವನ್ನು ಕಡ್ಡಾಯವಾಗಿ ಧರಿಸಲು ಹಾಗೂ ಪರಿಶೀಲನೆ ವೇಳೆ ಕಂಡುಬಂದ ಎಲ್ಲಾ ಬ್ಲಾಕ್ ಸ್ಪಾಟ್ ಗಳನ್ನು ತಕ್ಷಣ ತೆರವುಗೊಳಿಸಿ, ರಸ್ತೆ ಸ್ವಚ್ಛಗೊಳಿಸಲು ಸೂಚನೆ ನೀಡಿದ್ದಾರೆ. ಅಲ್ಲದೇ ಒಣ ಕಸ ಮತ್ತು ಹಸಿ ಕಸವನ್ನು ಕಡ್ಡಾಯವಾಗಿ ಬೇರ್ಪಡಿಸಿ ವಿಲೇವಾರಿ ಮಾಡಲು ಆಟೋ ಟಿಪ್ಪರ್ ಚಾಲಕರಿಗೆ ಸೂಚನೆ ನೀಡಿದರು.


