Greater Bengaluru News9: ಬೆಂಗಳೂರಿನಲ್ಲಿ ಪಿಜಿಗಳಿಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಾಲಿಕೆಯೊಂದರಿಂದ ಮಹತ್ವದ ಸೂಚನೆ ನೀಡಲಾಗಿದೆ. ವಸತಿ ಗೃಹಗಳ(PG) ಉದ್ದಿಮೆಗಳಿಗೆ ಉದ್ದಿಮೆ ಪರವಾನಗಿ ಪಡೆಯುವುದು ಕಡ್ಡಾಯ ಎಂದು ಹೇಳಲಾಗಿದೆ. ಇದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಬೆಂಗಳೂರಿನಲ್ಲಿ ಆಸ್ತಿಗಳು ಹಾಗೂ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಆಡಳಿತವು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ಉದ್ದಿಮೆ ಪರವಾನಗಿ ಇಲ್ಲದೆ ವಾಹಿವಾಟು ಮಾಡುತ್ತಿರುವ PG ಮಾಲೀಕರಿಗೆ ದಂಡ ವಿಧಿಸಿ ಉದ್ದಿಮೆಗೆ ಬೀಗ ಮುದ್ರೆ ಹಾಕಲಾಗುವುದು ಎನ್ನುವ ಗಂಭೀರವಾದ ಎಚ್ಚರಿಕೆಯನ್ನು ಕೊಡಲಾಗಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಅನಧಿಕೃತ ಪೇಯಿಂಗ್ ಗೆಸ್ಟ್(PG)/ ವಸತಿ ಗೃಹಗಳ ಉದ್ದಿಮೆದಾರರಿಗೆ ಅಂತಿಮ ಎಚ್ಚರಿಕೆಯನ್ನು ಕೊಡಲಾಗಿದೆ. ಬೆಂಗಳೂರು ಪೂರ್ವ ನಗರಪಾಲಿಕೆಯ ವ್ಯಾಪ್ತಿಯಲ್ಲಿ ಅನೇಕ PG ಗಳು ಉದ್ದಿಮೆ ಪರವಾನಗಿ ಪಡೆಯದೆ ಹಾಗೂ ಸ್ಥಾಪಿತ ಮಾನದಂಡಗಳನ್ನು ಉಲ್ಲಂಘಿಸಿ ವಾಹಿವಾಟು ಮಾಡುತ್ತಿರುವ ದೂರು ಬಂದಿರುತ್ತದೆ ಎಂದು ಪಾಲಿಕೆಯ ಅಧಿಕಾರಿಗಳು ಹೇಳಿದ್ದಾರೆ.
ಪ್ರದೇಶದ ಪ್ರಮುಖ ಉಲ್ಲಂಘನೆಗಳಲ್ಲಿ:-
- ವಸತಿ ವಲಯಗಳಲ್ಲಿ ಅನುಮತಿಯಿಲ್ಲದೆ ವಾಹಿವಾಟು ಮಾಡುತ್ತಿರುವುದು.
- ಮೂಲಭೂತ ಸುರಕ್ಷತೆ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸದೇ ಇರುವುದು.
- ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು
- ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸದಿರುವುದು ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆ ಆಗಿದೆ.
ಈ ಅನಧಿಕೃತ ಪೇಯಿಂಗ್ ಗೆಸ್ಟ್(PG)/ ವಸತಿ ಗೃಹಗಳು ಅಗತ್ಯ ಸುರಕ್ಷತಾ ಕ್ರಮಗಳನ್ನು ಹೊಂದಿಲ್ಲದೇ ಸಾರ್ವಜನಿಕ ಆರೋಗ್ಯಕ್ಕೆ, ರಕ್ಷಣೆಗಳಿಗೆ ಅಪಾಯಕ್ಕೆ ಕಾರಣವಾಗುವ ಹಿನ್ನಲೆಯಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆ (ಬಿಇಸಿಸಿ) ವ್ಯಾಪ್ತಿಯಲ್ಲಿ ಅಂತಹ ಅನಧಿಕೃತ PG ವಸತಿಗೃಹಗಳನ್ನು ನಿಯಂತ್ರಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಸಾರ್ವಜನಿಕ ಪ್ರಕಟಣೆ ಹೊರಡಿಸಿದ 07 ದಿನಗಳಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆ (ಬಿಇಸಿಸಿ) ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಇಲ್ಲದೆ ವಾಹಿವಾಟು ಮಾಡುತ್ತಿರುವ PG ಮಾಲೀಕರಿಗೆ ದಂಡ ವಿಧಿಸಿ ಉದ್ದಿಮೆಗೆ ಬೀಗ ಮುದ್ರೆ ಹಾಕಲಾಗುವುದು ಎಂದು ಸೂಚನೆ ನೀಡಲಾಗಿದೆ.
ಅಲ್ಲದೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ 2024ರ ಮಾರ್ಗಸೂಚಿಗಳನ್ನು ಪಾಲಿಸದ ಮತ್ತು ಅಗತ್ಯ ಪರವಾನಗಿಗಳನ್ನು ಪಡೆಯದೇ ಇರುವ ಪೇಯಿಂಗ್ ಗೆಸ್ಟ್ (PG)/ ವಸತಿ ಗೃಹಗಳಿಗೆ, ಬೆಂಗಳೂರು ಗೌವರ್‌ನನ್ಸ್ ಕಾಯ್ದೆ 2024ರ ರೀತ್ಯಾ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಭಿವೃದ್ಧಿ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ತಿಳಿಸಿದ್ದಾರೆ.


