Greater Bengaluru News9 : ವಿದ್ಯುತ್ ಮೀಟರ್ ಮಾಪನ ಪ್ರಕ್ರಿಯೆಯಲ್ಲಿ ಮೀಟರ್ ರೀಡರ್‌ಗಳ ಕಳ್ಳಾಟ ತಡೆಗೆ ಹಾಗೂ ದೋಷರಹಿತ ನಿಖರ ಮಾಪನಕ್ಕಾಗಿ ಬೆಸ್ಕಾಂ ವ್ಯಾಪ್ತಿಯಲ್ಲಿ ಸ್ವಯಂಚಾಲಿತ ಆಪ್ಟಿಕಲ್ ಪೋರ್ಟ್ ಪ್ರೋಬ್ ಮೀಟರ್ ರೀಡಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಉಚಿತ ವಿದ್ಯುತ್‌ನ ಗೃಹಜ್ಯೋತಿ ಯೋಜನೆ ಜಾರಿ ನಂತರ ಮೀಟರ್ ರೀಡರ್‌ಗಳು ಹಣದಾಸೆಗೆ ಗ್ರಾಹಕರ ಜತೆ ಕೈಜೋಡಿಸಿ, ವಿದ್ಯುತ್ ಮಾಪನದಲ್ಲಿ ಕಳ್ಳಾಟವಾಡಲು ಆರಂಭಿಸಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಮಾಸಿಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. 200 ಯೂನಿಟ್‌ನ ಮಿತಿಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಅಂತಹ ಗ್ರಾಹಕರಿಂದ ಪೂರ್ಣ ಪ್ರಮಾಣದಲ್ಲಿಬಿಲ್ ವಸೂಲಿ ಮಾಡಲಾಗುತ್ತಿದೆ.
ವಿದ್ಯುತ್ ಬಿಲ್‌ನಲ್ಲಿ ಮೋಸ
ವಿದ್ಯುತ್ ಬಿಲ್ ಪಾವತಿಯ ಆರ್ಥಿಕ ಹೊರೆಯಿಂದ ಪಾರಾಗಲು ಗ್ರಾಹಕರು, ಮೀಟರ್ ರೀಡರ್‌ಗಳನ್ನೇ ಬುಟ್ಟಿಗೆ ಹಾಕಿಕೊಂಡು ಮಾಪನದಲ್ಲೇ ಏರುಪೇರು ಮಾಡುತ್ತಿದ್ದಾರೆ. 200 ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಕೆಯಾಗಿದ್ದರೂ ಮೀಟರ್ ರೀಡರ್‌ಗಳು ಕಡಿಮೆ ಯೂನಿಟ್ ನಮೂದಿಸಿ, ಶೂನ್ಯ ಬಿಲ್ ಬರುವಂತೆ ಕೈಚಳಕ ತೋರುತ್ತಿರುವ ಸಂಗತಿ ಬೆಸ್ಕಾಂನ ಗಮನಕ್ಕೆ ಬಂದಿತ್ತು.
ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದ್ದವು. ಹೀಗಾಗಿ, ಬೆಸ್ಕಾಂ ಮೀಟರ್ ರೀಡರ್‌ಗಳ ಕಳ್ಳಾಟಕ್ಕೆ ಹಾಗೂ ಕರ್ತವ್ಯ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಲು ಆಪ್ಟಿಕಲ್ ಪೋರ್ಟ್ ಪ್ರೋಬ್ ಮೀಟರ್ ರೀಡಿಂಗ್ ವ್ಯವಸ್ಥೆ ಪರಿಚಯಿಸಿದೆ.
ಮಾಪನ ಸ್ವಯಂಚಾಲಿತ
ಬೆಸ್ಕಾಂ ವ್ಯಾಪ್ತಿಯ 9 ವೃತ್ತಗಳಲ್ಲಿ ತಿಂಗಳಿಗೆ ಸರಾಸರಿ 1.10 ಕೋಟಿ ಎಲ್.ಟಿ. ಸಂಪರ್ಕದ ಮೀಟರ್‌ಗಳನ್ನು ಮಾಪನ ಮಾಡಲಾಗುತ್ತಿದೆ. ರೀಡರ್‌ಗಳು ವಿದ್ಯುತ್ ಸಂಪರ್ಕವಿರುವ ಪ್ರತಿ ಕಟ್ಟಡಕ್ಕೂ ಭೇಟಿ ಕೊಟ್ಟು, ಸ್ಪಾಟ್ ಬಿಲ್ಲಿಂಗ್ ಉಪಕರಣದ ಮೂಲಕ ಭೌತಿಕವಾಗಿ ಮಾಪನ ಮಾಡುವ ಪರಿಪಾಠವಿದೆ. ಆಪ್ಟಿಕಲ್ ಪೋರ್ಟ್ ಪ್ರೋಬ್ ಮೀಟರ್ ರೀಡಿಂಗ್ ವ್ಯವಸ್ಥೆಯಲ್ಲಿ ರೀಡರ್‌ಗಳು, ಸ್ಪಾಟ್ ಬಿಲ್ಲಿಂಗ್ ಉಪಕರಣವನ್ನು ಕೇಬಲ್ ಅಥವಾ ಬ್ಲೂಟೂತ್ ಮೂಲಕ ಮೀಟರ್‌ಗೆ ಸಂಪರ್ಕಿಸಿದರೆ ಸ್ವಯಂ ಚಾಲಿತವಾಗಿ ಮಾಪನ ಪ್ರಕ್ರಿಯೆ ನಡೆದು ಬಿಲ್ ಪ್ರತಿ ಬರುತ್ತದೆ. ಮಾಪನ ಪ್ರಕ್ರಿಯೆಯಲ್ಲಿ ಮೀಟರ್ ರೀಡರ್‌ಗಳ ಹಸ್ತಕ್ಷೇಪಕ್ಕೆ ಅವಕಾಶವೇ ಇಲ್ಲ.
ಡಿಎಲ್‌ಎಂಎಸ್ ಮೀಟರ್‌ಗೆ ಸೂಕ್ತ
2016ರ ನಂತರ ಅಳವಡಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ಡಿಎಲ್‌ಎಂಎಸ್ ಸ್ಟ್ಯಾಟಿಕ್ (ಡಿವೈಸ್ ಲ್ಯಾಂಗ್ವೇಜ್ ಮೆಸೇಜ್ ಸ್ಪೆಸಿಫಿಕೇಷನ್) ಡಿಜಿಟಲ್ ಮೀಟರ್‌ಗಳನ್ನು ನೂತನ ವ್ಯವಸ್ಥೆ ಮೂಲಕ ಮಾಪನ ಮಾಡಲಾಗುತ್ತದೆ. 2016ಕ್ಕೂ ಮುನ್ನ ಅಳವಡಿಕೆಯಾಗಿದ್ದ ಮೀಟರ್‌ಗಳನ್ನು ಈ ವ್ಯವಸ್ಥೆಯಲ್ಲಿಮಾಪನ ಮಾಡಲು ಸಾಧ್ಯವಿಲ್ಲ. ಬೆಸ್ಕಾಂ ವ್ಯಾಪ್ತಿಯಲ್ಲಿಸುಮಾರು 5 ಲಕ್ಷದಷ್ಟು ಈ ಮೀಟರ್‌ಗಳಿದ್ದು, ಅವುಗಳನ್ನು ಹಂತಹಂತವಾಗಿ ಬದಲಿಸಲಾಗುತ್ತಿದೆ.
ನಿಖರತೆಗಾಗಿ ಆಪ್ಟಿಕಲ್ ಪೋರ್ಟ್ ಪ್ರೋಬ್ ಮೀಟರ್ ರೀಡಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದೇವೆ. ಸ್ವಯಂಚಾಲಿತ ಈ ಮಾಪನ ವ್ಯವಸ್ಥೆಯು ಗ್ರಾಹಕರಿಗೂ ಮತ್ತು ಬೆಸ್ಕಾಂಗೂ ಉಪಯುಕ್ತವಾಗಿದೆ ಎಂದು ಬೆಸ್ಕಾಂನ ಪ್ರಧಾನ ವ್ಯವಸ್ಥಾಪಕರಾದ ರಾಮೋಜಿರಾವ್ ಹೇಳಿದರು. ಹೊಸ ಮೀಟರ್ ರೀಡರ್‌ನಿಂದ ದೋಷರಹಿತ ನಿಖರ ಮಾಪನಕ್ಕೆ ಸಹಕಾರಿ ಮಾಪನದಲ್ಲಿ ರೀಡರ್‌ಗಳ ಹಸ್ತಕ್ಷೇಪವಿಲ್ಲ ಆದಾಯ ಸೋರಿಕೆಗೆ ಕಡಿವಾಣ ಬೀಳಲಿದೆ ಎನ್ನಲಾಗಿದೆ.


