Greater Bengaluru News9: ಪತ್ನಿ ಮತ್ತು ಮಗುವಿನ ನಿರ್ವಹಣೆಯ ಜವಾಬ್ದಾರಿಯಿಂದ ‘ಉದ್ಯೋಗ ಇಲ್ಲ’ ಎಂಬ ಕಾರಣ ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಉದ್ಯೋಗವಿಲ್ಲದಿದ್ದರೆ ಕೆಲಸ ಹುಡುಕಬೇಕು, ಆದಾಯ ಕಡಿಮೆಯಿದ್ದರೆ ಹೆಚ್ಚಿನ ಸಂಬಳ ದೊರೆಯುವ ಕೆಲಸವನ್ನಾದರೂ ಮಾಡಿ ಪತ್ನಿ ಮತ್ತು ಮಗುವಿನ ಜೀವನ ನಿರ್ವಹಣೆ ಮಾಡುವುದು ಪತಿಯ ಕರ್ತವ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮೈಸೂರು ತಾಲೂಕಿನ ಹಳೇ ಉಂಡವಾಡಿ ನಿವಾಸಿ ಹರೀಶ್ ಆರ್. ಅವರು ತಮ್ಮ ವಿರುದ್ಧ ಕೆಳ ನ್ಯಾಯಾಲಯಗಳು ನೀಡಿದ್ದ ಜೀವನಾಂಶದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ನ ‘ಅಂಜು ಗಾರ್ಗ್’ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಸಿಆರ್ಪಿಸಿ ಸೆಕ್ಷನ್ 125 ಸಾಮಾಜಿಕ ನ್ಯಾಯದ ಉದ್ದೇಶವನ್ನು ಹೊಂದಿದ್ದು, ಪತ್ನಿ ಮತ್ತು ಮಕ್ಕಳನ್ನು ಅತಂತ್ರ ಸ್ಥಿತಿಗೆ ತಳ್ಳಬಾರದು ಎಂದು ತಿಳಿಸಿತು. ಕೇವಲ ಉದ್ಯೋಗವಿಲ್ಲ ಎಂಬ ಕಾರಣಕ್ಕೆ ಜೀವನಾಂಶ ಪಾವತಿಯಿಂದ ವಿನಾಯಿತಿ ಸಿಗುವುದಿಲ್ಲ. ಅಗತ್ಯವಿದ್ದರೆ ದೈಹಿಕ ಶ್ರಮ ವಹಿಸಿಯಾದರೂ ಆದಾಯ ಗಳಿಸಿ ಕುಟುಂಬದ ಜವಾಬ್ದಾರಿ ನಿರ್ವಹಿಸಬೇಕು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪತಿಯು ನ್ಯಾಯಾಲಯದ ಆದೇಶದಂತೆ ಜೀವನಾಂಶ ಪಾವತಿಸದೇ ಆದೇಶ ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಅವರ ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ. ಜೊತೆಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಪ್ರತಿ ತಿಂಗಳು ಒಟ್ಟು ₹16,000 ಜೀವನಾಂಶ ನೀಡುವ ಆದೇಶವನ್ನು ಎತ್ತಿಹಿಡಿದಿದೆ.
ಪ್ರಕರಣದ ಹಿನ್ನೆಲೆ
ಹರೀಶ್ ಆರ್. ಅವರು 2003ರ ಜೂನ್ 16ರಂದು ಸೌಮ್ಯ ಅವರನ್ನು ವಿವಾಹವಾಗಿದ್ದರು. ನಂತರ ಉಂಟಾದ ವೈಮನಸ್ಸಿನಿಂದ ಇಬ್ಬರೂ ಪ್ರತ್ಯೇಕವಾಗಿ ವಾಸವಾಗಿದ್ದು, ಪರಸ್ಪರ ದೂರು-ಪ್ರತಿದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ 2022ರಲ್ಲಿ ಪಾಂಡವಪುರದ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಪತ್ನಿ ಸೌಮ್ಯ ಹಾಗೂ ಪುತ್ರ ಮನಮೋಹನ್ ಅವರಿಗೆ ತಲಾ ₹8,000ರಂತೆ ಒಟ್ಟು ₹16,000 ಮಾಸಿಕ ಜೀವನಾಂಶ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಮಂಡ್ಯ ಜಿಲ್ಲಾ ಸೆಷನ್ಸ್ ನ್ಯಾಯಾಲಯವೂ ಎತ್ತಿಹಿಡಿದಿತ್ತು. ಬಳಿಕ ಈ ಆದೇಶವನ್ನು ಪ್ರಶ್ನಿಸಿ ಹರೀಶ್ ಹೈಕೋರ್ಟ್ ಮೊರೆ ಹೋಗಿದ್ದರು.
ಪತಿಯ ಪರ ವಕೀಲರು, ಹರೀಶ್ ಅವರಿಗೆ ಪ್ರಸ್ತುತ ಯಾವುದೇ ಉದ್ಯೋಗವಿಲ್ಲದ ಕಾರಣ ₹16,000 ಜೀವನಾಂಶ ಪಾವತಿಸಲು ಸಾಧ್ಯವಿಲ್ಲ ಎಂದು ವಾದಿಸಿದರು. ಪತ್ನಿ ಕಾನೂನು ಪದವೀಧರೆಯಾಗಿದ್ದು, ಸ್ವತಃ ಸಂಪಾದಿಸುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಜೀವನಾಂಶ ನೀಡುವಂತೆ ಕೆಳ ನ್ಯಾಯಾಲಯ ನೀಡಿದ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಯಾಗಿ ಪತ್ನಿ ಪರ ವಕೀಲರು, ಅನಾರೋಗ್ಯದ ಕಾರಣದಿಂದ ಸೌಮ್ಯ ಅವರಿಗೆ ವಕೀಲ ವೃತ್ತಿ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವಿಚಾರಣಾ ನ್ಯಾಯಾಲಯದ ಆದೇಶ ನ್ಯಾಯಸಮ್ಮತವಾಗಿದ್ದು, ಪತಿಯ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು.
ಇನ್ನೊಂದೆಡೆ, ಮಗನ ಪರ ವಕೀಲರು 2022ರ ಫೆಬ್ರವರಿ 3ರಂದು ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದರೂ, ಇದುವರೆಗೆ ಯಾವುದೇ ಹಣ ಪಾವತಿಸಿಲ್ಲ. ಸುಮಾರು ₹21 ಲಕ್ಷ ಜೀವನಾಂಶ ಬಾಕಿ ಉಳಿದಿದ್ದು, ಅದನ್ನು ಪಾವತಿಸುವಂತೆ ನಿರ್ದೇಶನ ನೀಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.


