Greater Bengaluru News9 : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಹಾಗೂ ವಾಯುಮಾಲಿನ್ಯದ ಪರಿಣಾಮ ಇದೀಗ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ.
ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಕೆಲವು ಹಸಿರೆಲೆ ಸೊಪ್ಪು ಮತ್ತು ತರಕಾರಿಗಳಲ್ಲಿ ಸೀಸ (Lead), ಕೀಟನಾಶಕ ಹಾಗೂ ಅಪಾಯಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿವೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವರದಿ ತಿಳಿಸಿದೆ.
ನಗರದಲ್ಲಿ ಪ್ರತಿದಿನ ಸಾವಿರಾರು ಹೊಸ ವಾಹನಗಳು ರಸ್ತೆಗಿಳಿಯುತ್ತಿದ್ದು, ಇದರಿಂದ ವಾಯುಮಾಲಿನ್ಯದ ಪ್ರಮಾಣ ಹೆಚ್ಚುತ್ತಿದೆ. ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (AQI) 68ರಿಂದ 70ರ ಆಸುಪಾಸಿನಲ್ಲಿದ್ದು, ಗಾಳಿಯ ಗುಣಮಟ್ಟದಲ್ಲಿ ಇಳಿಕೆ ಕಂಡುಬರುತ್ತಿದೆ.
ವಾಯುಮಾಲಿನ್ಯ ಹಾಗೂ ಕೃಷಿಗೆ ಕೈಗಾರಿಕಾ ತ್ಯಾಜ್ಯ ಮತ್ತು ಕಲುಷಿತ ನೀರನ್ನು ಬಳಸುತ್ತಿರುವುದರಿಂದ ತರಕಾರಿಗಳಲ್ಲಿ ವಿಷಕಾರಿ ಅಂಶಗಳು ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
1,323 ತರಕಾರಿ ಮಾದರಿ ಪರೀಕ್ಷೆ
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯದ ಪರೀಕ್ಷೆಗಳಲ್ಲಿ 2024ರಿಂದ 2026ರ ಅವಧಿಯಲ್ಲಿ ಸಂಗ್ರಹಿಸಿದ ಒಟ್ಟು 1,323 ತರಕಾರಿ ಮಾದರಿಗಳನ್ನು ಪರಿಶೀಲಿಸಲಾಗಿದೆ. ಈ ಪೈಕಿ 29 ಮಾದರಿಗಳು ಸಂಪೂರ್ಣ ಅಸುರಕ್ಷಿತ ಎಂದು ಪತ್ತೆಯಾಗಿವೆ ಎನ್ನಲಾಗಿದೆ.
ವಿಶೇಷವಾಗಿ ಬದನೆಕಾಯಿ, ತೊಂಡೆಕಾಯಿ ಹಾಗೂ ಹಸಿರೆಲೆ ಸೊಪ್ಪುಗಳಲ್ಲಿ ಸೀಸದ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ. ಕೆಲವು ಕಡೆಗಳಲ್ಲಿ ಜೈವಿಕ (ಆರ್ಗ್ಯಾನಿಕ್) ಹೆಸರಿನಲ್ಲಿ ಮಾರಾಟವಾಗುವ ತರಕಾರಿಗಳಲ್ಲೂ ಅಪಾಯಕಾರಿ ರಾಸಾಯನಿಕ ಅಂಶಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಮಾಲಿನ್ಯವು ಇದೀಗ ನಗರದ ಗಾಳಿ ಮಾತ್ರವಲ್ಲದೆ ಜನರ ದಿನನಿತ್ಯದ ಆಹಾರದ ಮೇಲೂ ಪರಿಣಾಮ ಬೀರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.


