BBMP
Loading ...

DK Shivakumar

Greater Bengaluru News9 : ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ರಾಜ್ಯ ರಾಜಕೀಯದಲ್ಲಿ ಪ್ರಭಾವಿ ನಾಯಕನಾಗಿ ಗುರುತಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ಇಂದು ಸಂಜೆ ನಡೆದ ಭವ್ಯ ಪ್ರಮಾಣವಚನ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಬೋಧಿಸಿದರು. ಸಂವಿಧಾನದ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಡಿ.ಕೆ. ಶಿವಕುಮಾರ್ ಅವರು ವೀರ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಗಣ್ಯರು ಹಾಗೂ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ನೆರವೇರಿತು. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿತು.

ಪ್ರಮಾಣವಚನ ಸಮಾರಂಭಕ್ಕೆ ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ಆಧಾರದ ಮೇಲೆ ವಿಶೇಷ ಮುಹೂರ್ತವನ್ನು ನಿಗದಿಪಡಿಸಲಾಗಿತ್ತು. ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಅಪರೂಪದ ಹಾಗೂ ಶಕ್ತಿಶಾಲಿ ಎಂದು ಪರಿಗಣಿಸಲ್ಪಡುವ ‘ಮಾಲವ್ಯ ಯೋಗ’ದ ಸಂದರ್ಭದಲ್ಲಿ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತುಲಾ ಲಗ್ನದಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ ಅವರ ಜಾತಕದಲ್ಲಿ ಗುರು ಗ್ರಹ ಉಚ್ಚ ಸ್ಥಿತಿಯಲ್ಲಿದ್ದು, ದಶಮ ಭಾವ ಬಲಿಷ್ಠವಾಗಿರುವುದರಿಂದ ಮುಂದಿನ ದಿನಗಳಲ್ಲಿ ಎದುರಾಗುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ಜನಪರ ಆಡಳಿತ ನೀಡಲು ಈ ಮುಹೂರ್ತ ಅನುಕೂಲಕರವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ರಾಜ್ಯದ ಆಡಳಿತದ ಹೊಣೆ ಹೊತ್ತಿರುವ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸರ್ಕಾರ ಯಾವ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಿದೆ ಎಂಬುದರತ್ತ ಇದೀಗ ರಾಜ್ಯದ ಜನರ ಗಮನ ಕೇಂದ್ರೀಕೃತವಾಗಿದೆ.

Leave a Reply

Your email address will not be published. Required fields are marked *