BBMP
Loading ...

Nambike Nakshe

ಬೆಂಗಳೂರು: ಮಹಾನಗರ ಬೆಂಗಳೂರಿನಲ್ಲಿ ಒಂದು ಮನೆ ಕಟ್ಟಿಸಿಕೊಳ್ಳಬೇಕು ಎನ್ನುವುದು ಲಕ್ಷಾಂತರ ಜನರ ಆಸೆ. ಹಣ ಇದ್ದರೂ, ದಾಖಲೆ, ಅನುಮತಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದೇ ದೊಡ್ಡ ಸಮಸ್ಯೆ. ಇಂತಹವರಿಗೆ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ. ಮನೆ ಕಟ್ಟುವಾಗ ಕಟ್ಟಡ ನಕ್ಷೆ ಅನುಮತಿ ಕಚೇರಿ ಅಲೆಯುವಂತಿಲ್ಲ. ಒಂದೇ ದಿನಕ್ಕೆ ಅನುಮತಿ ಸಿಗುತ್ತದೆ.

ಈ ಬಗ್ಗೆ ಮಾತನಾಡಿರುವ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು, ” ಇನ್ನು ಮುಂದೆ ನೀವು ಮನೆ ಕಟ್ಟುವಾಗ ಕಟ್ಟಡ ನಕ್ಷೆ ಅನುಮತಿ ಕಚೇರಿ ಅಲೆಯುವಂತಿಲ್ಲ. ನಂಬಿಕೆ ನಕ್ಷೆ ಯೋಜನೆ ಮೂಲಕ 50 x 80 ವಿಸ್ತೀರ್ಣವರೆಗಿನ ನಿವೇಶನವರೆಗೂ ಕಟ್ಟಡ ನಕ್ಷೆಯನ್ನು ನೋಂದಾಯಿತ ಇಂಜಿನಿಯರ್ ಗಳ ಮೂಲಕ ಒಂದೇ ದಿನದಲ್ಲಿ ಅನುಮತಿ ಪಡೆಯಬಹುದು. ಈ ಯೋಜನೆ ಮೂಲಕ ನಾವು ಈವರೆಗೂ 9 ಸಾವಿರ ಕಟ್ಟಡ ನಕ್ಷೆಗಳಿಗೆ ಮಂಜೂರಾತಿ ನೀಡಿದ್ದೇವೆ ” ಎಂದು ತಿಳಿಸಿದರು.

ಬ್ಯಾಟರಾಯನಪುರದ ಸಹಕಾರ ನಗರ ಮೈದಾನದಲ್ಲಿ ಭಾನುವಾರ ನಡೆದ ಬೃಹತ್ ಇ ಖಾತಾ ಮೇಳ ಹಾಗೂ ಮನೆ ಮನೆಗೆ ಇ-ಖಾತಾ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್ ಚಾಲನೆ ನೀಡಿ ಮಾತನಾಡಿದರು. ನಗರದಲ್ಲಿ ಆಸ್ತಿ ತೆರಿಗೆ ಆಸ್ತಿ ತೆರಿಗೆ ಕಟ್ಟದವರಿಗೆ ಒನ್ ಟೈಮ್ ಸೆಟ್ಟಲ್ಮೆಂಟ್ ಯೋಜನೆ ಮೂಲಕ ಒಂದು ಅವಕಾಶ ನೀಡಲಾಗಿತ್ತು ಎಂದು ತಿಳಿಸಿದರು.

ಇತ್ತೀಚೆಗೆ ಸುಪ್ರೀಂಕೋರ್ಟ್ ಒಂದು ತೀರ್ಪು ನೀಡಿದ್ದು, ಕಟ್ಟಡ ನಕ್ಷೆ ಅನುಮತಿ ಇಲ್ಲದೆ ಮನೆ ಕಟ್ಟಿದರೆ ನೀರು ಹಾಗೂ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಆದೇಶ ಹೊರಡಿಸಿದೆ. ಈಗಾಗಲೇ ಮನೆ ಕಟ್ಟಿರುವ ಸಾರ್ವಜನಿಕರಿಗೆ ನಾವು ಹೇಗೆ ಸಹಾಯ ಮಾಡಬಹುದು ಎಂದು ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗುತ್ತಿದೆ” ಎಂದು ಭರವಸೆ ನೀಡಿದರು.

ನಿಮ್ಮ ದಾಖಲೆ ಅಪ್ ಲೋಡ್ ಮಾಡಿ ಇ ಖಾತಾ
“ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 25 ಲಕ್ಷ ಆಸ್ತಿಗಳಿದ್ದು, ಈ ಎಲ್ಲಾ ಆಸ್ತಿಗಳ ಡಿಜಿಟಲಿಕರಣಗೊಳಿಸಿ ನಿಮ್ಮ ಮನೆ ಬಾಗಿಲಿಗೆ ನೀಡುವಂತೆ ಕ್ರಾಂತಿಕಾರಿ ಬದಲಾವಣೆ ತರಲು ತೀರ್ಮಾನಿಸಿದ್ದೇನೆ. ನೀವು ನಿಮ್ಮ ಆಸ್ತಿ ದಾಖಲೆಗಳನ್ನು ಅಪ್ ಲೋಡ್ ಮಾಡಿ ಈ ಖಾತಾ ಮಾಡಿಕೊಳ್ಳಿ. ಒಂದು ವೇಳೆ ನಿಮಗೆ ಇದು ಸಾಧ್ಯವಾಗದೆ ಇದ್ದರೆ ನಿಮಗೆ ನೀಡಲಾಗಿರುವ ದೂರವಾಣಿಗೆ ಕರೆ ಮಾಡಿ. ಅವರೇ ಬಂದು ನಿಮ್ಮ ದಾಖಲೆ ಅಪ್ ಲೋಡ್ ಮಾಡಿ ಇ ಖಾತಾ ಮಾಡುತ್ತಾರೆ” ಎಂದು ವಿವರಿಸಿದರು.

ಬೆಂಗಳೂರಿಗಾಗಿ 1 ಲಕ್ಷ ಕೋಟಿ ಮೊತ್ತದ ಯೋಜನೆ
ಈ ಸರ್ಕಾರ ಬೆಂಗಳೂರಿನಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದೆ. ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಹಾಗೂ ಸಮಗ್ರ ಅಭಿವೃದ್ಧಿಗೆ 1 ಲಕ್ಷ ಕೋಟಿ ಮೊತ್ತದ ಯೋಜನೆಗಳನ್ನು ರೂಪಿಸಲಾಗಿದೆ. ಈ ಪೈಕಿ ಪಿಆರ್ ಆರ್ ರಸ್ತೆ ನಿಮ್ಮ ಕ್ಷೇತ್ರದಲ್ಲಿ ಹಾದು ಹೋಗಲಿದೆ” ಎಂದು ಹೇಳಿದರು.

“ಉಳುವವನಿಗೆ ಭೂಮಿ ಕೊಟ್ಟಿದ್ದು, ಎ ಖಾತಾ ಇಲ್ಲದವರಿಗೆ ಬಿ ಖಾತಾ ಕೊಟ್ಟಿದ್ದೇವೆ, ಬಗರ್ ಹುಕುಂ ಸಾಗುವಳಿ ರೈತರಿಗೆ ಭೂಮಿ ನೀಡಿದ್ದೇವೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಅಕ್ರಮ ಸಕ್ರಮ ಯೋಜನೆ ಮಾಡಿದ್ದೆವು. ಭೂಮಿ ಯೋಜನೆ ಮೂಲಕ ರೈತರಿಗೆ ಕೇವಲ 5 ರೂ.ಗೆ ಖಾತಾ ದಾಖಲೆ ನೀಡಿದ್ದೇವೆ” ಎಂದರು. “ನಿಮ್ಮ ಆಸ್ತಿಗಳ ದಾಖಲೆ ಸರಿಪಡಿಸಲು ಪಾಲಿಕೆ ವ್ಯಾಪ್ತಿಯಲ್ಲಿ ನಿಮ್ಮ ಆಸ್ತಿ ದಾಖಲೆ ಸ್ಕ್ಯಾನ್ ಮಾಡಿಸಲಾಗಿದೆ. ನಿಮ್ಮ ಕ್ಷೇತ್ರದಲ್ಲಿ ಇಂದು ಯಾರೂ ಲಂಚ ನೀಡದೇ, ನಿಮ್ಮ ಆಸ್ತಿ ಖಾತಾ ದಾಖಲೆ ನೀಡಬೇಕು ಎಂಬುದು ನನ್ನ ಆಲೋಚನೆ. ನನ್ನ ಈ ಕನಸಿನ ಯೋಜನೆಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಬೆಂಬಲವಾಗಿ ನಿಂತಿದ್ದಾರೆ” ಎಂದು ತಿಳಿಸಿದರು.

ಒಂದು ತಿಂಗಳು ಇ ಖಾತಾ ಅಭಿಯಾನ
“ಜುಲೈ 1ರಿಂದ ಒಂದು ತಿಂಗಳ ಕಾಲ ಇ ಖಾತಾ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದಲ್ಲಿ ನೀವುಗಳು ಭಾಗವಹಿಸಿ ನಿಮ್ಮ ಆಸ್ತಿ ಇ ಖಾತೆ ಮಾಡಿಸಿಕೊಳ್ಳಿ ವಂಚನೆಯಿಂದ ತಪ್ಪಿಸಿಕೊಳ್ಳಿ. ನಂತರ ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿ ಇಂತಹ ಕಾರ್ಯಕ್ರಮ ಮಾಡುತ್ತೇವೆ. ನಿಮಗೆ ನಮ್ಮ ಅಧಿಕಾರಿಗಳು, ಕಾರ್ಯಕರ್ತರು ಸಹಕಾರ ನೀಡಲಿದ್ದಾರೆ” ಎಂದು ಹೇಳಿದರು.

ಇಂದಿನಿಂದ ಮನೆ ಬಾಗಿಲಿಗೆ ಇ- ಖಾತಾ ಅಭಿಯಾನ ಆರಂಭ: ಖಾತಾ ಪಡೆಯಲು ಜಸ್ಟ್ ಹೀಗೆ ಮಾಡಿ…

Leave a Reply

Your email address will not be published. Required fields are marked *