BBMP
Loading ...

BBMP 1

ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ರಚಿಸುವ ಸಂಬಂಧ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯು, ಪಾಲಿಕೆ ಸಹಯೋಗದಲ್ಲಿ ಆಯೋಜಿಸಿದ್ದ ನಾಗರಿಕರ ಸಲಹೆ ಹಾಗೂ ಅಭಿಪ್ರಾಯ ಸಂಗ್ರಹಿಸುವ ಕಸರತ್ತು ನಡೆಸುವಲ್ಲಿ ಯಶಸ್ವಿಯಾಗಿದೆ. ಆದರೆ, ಹಾಲಿ ಬಿಬಿಎಂಪಿಗೆ ಚುನಾವಣೆ ನಡೆಸುವ ಬಗ್ಗೆ ಯಾವ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದರಿಂದಾಗಿ ಮೊದಲು ಚುನಾವಣೆ ನಡೆಯುವುದೋ ಅಥವಾ ಚುನಾವಣೆ ನಂತರ ಜಿಬಿಎ ರಚನೆ ಕಾರ್ಯ ಮುಂದುವರಿಯಲಿದೆಯೇ ಎಂಬ ಅನಿಶ್ಚಿತತೆ ಜನರನ್ನು ಕಾಡುತ್ತಿದೆ.

ಇದೇ ವಿಷಯ ಪಾಲಿಕೆ ವಲಯಗಳಲ್ಲಿ ಆಯೋಜಿಸಿದ್ದ ಸಭೆಗಳಲ್ಲಿ ಪಾಲ್ಗೊಂಡಿದ್ದ ಹೆಚ್ಚಿನ ಸಾರ್ವಜನಿಕರು ಚುನಾವಣೆ ನಡೆಸುವುದು ಹೆಚ್ಚು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನಾಭಿಪ್ರಾಯಕ್ಕೆ ಮಣೆ ಹಾಕುವುದು ನಾಗರಿಕ ಸರ್ಕಾರದ ಕರ್ತವ್ಯ. 2020ರ ಸೆ.10ರಂದೇ ಪಾಲಿಕೆಯ ಅಧಿಕಾರವಧಿ ಮುಗಿದಿದ್ದು, ನಾಲ್ಕೂವರೆ ವರ್ಷದ ಬಳಿಕವೂ ಚುನಾವಣೆ ನಡೆಸಲು ಮೀನಮೇಷ ಎಣಿಸುತ್ತಿರುವ ಬಗ್ಗೆ ಜನರಿಗೆ ಬೇಸರ ಇದೆ. ಇದನ್ನೇ ಅವರು ಜಿಬಿಎ ಆಲಿಕೆ ಸಭೆಗಳಲ್ಲಿ ವ್ಯಕ್ತಪಡಿಸಿದ್ದಾರೆ.

ವಿಧೇಯಕಕ್ಕೆ ಒಪ್ಪಿಗೆ ಅನುಮಾನ?:
ನಾಗರಿಕರ ಸಲಹೆ ಆಲಿಸುವ ಸಭೆಗಳಲ್ಲಿ ಜಿಬಿಎ ಕುರಿತು ಮಾಹಿತಿ ನೀಡಲಾಗಿದೆ. ಆದರೂ, ಇನ್ನಷ್ಟು ವಿಸ್ತೃತ ರೂಪದಲ್ಲಿ ವಿವರಣೆ ಬೇಕಿತ್ತು ಎಂಬುದು ಹಲವರ ಅಭಿಮತವಾಗಿದೆ. ಪಾಲಿಕೆಯಲ್ಲಿ ಎಂಟು ವಲಯಗಳಿದ್ದರೂ, ಹತ್ತಿರದ ವಲಯಗಳನ್ನು ಒಗ್ಗೂಡಿಸಿ 3 ಕಡೆ ಮಾತ್ರ ಸಭೆ ನಡೆಸಿದ್ದರಿಂದ ದೂರದಿಂದ ಜನರು ಆಗಮಿಸಲು ಸಾಧ್ಯವಾಗಲಿಲ್ಲ. ಜತೆಗೆ ಕೆಲಸದ ದಿನಗಳಂದೇ ಸಭೆ ಏರ್ಪಡಿಸಿದ್ದರಿಂದ ಉದ್ಯೋಗಸ್ಥರ ಸಮೂಹದ ಪ್ರಾತಿನಿಧ್ಯ ಇಲ್ಲದಂತಾಗಿದೆ. ಎಲ್ಲ ವಲಯಗಳಲ್ಲೂ ವಾರಾಂತ್ಯ ಸಭೆ ನಡೆಸಿದ್ದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಪಾಲ್ಗೊಂಡು ತಮ್ಮ ಅಭಿಪ್ರಾಯ ತಿಳಿಸಬಹುದು. ಇ-ಮೇಲ್ ಮೂಲಕ ನೀಡುವ ಸಲಹೆಗಳನ್ನು ಸರ್ಕಾರ/ಬಿಬಿಎಂಪಿ ಪರಿಗಣಿಸುವುದೋ, ಇಲ್ಲವೊ ಎಂಬ ಅನುಮಾನ ನಾಗರಿಕರಿಗೆ ಇದ್ದೇ ಇದೆ.

ಮುಖ್ಯವಾಗಿ, ಜಿಬಿಎ ಕುರಿತಾದ ಪರಿಶೀಲನಾ ಸಮಿತಿಯು ಇನ್ನಷ್ಟೇ ಜನರ ಸಲಹೆಗಳನ್ನು ಪರಾಮರ್ಶಿಸಲು ಪ್ರತ್ಯೇಕವಾಗಿ ಸಭೆ ಸೇರಿ ಚರ್ಚಿಸಬೇಕಿದೆ. ಅದರಲ್ಲಿ ವ್ಯಕ್ತವಾದ ಅಂಶಗಳನ್ನು ಬೇರೆ ಬೇರೆ ದಿನಗಳಂದು ಸಭೆ ನಡೆಸಿ ಚಿಂತನ-ಮಂಥನ ನಡೆಸಿ ಕರಡು ಅಂತಿಮಗೊಳಿಸಬೇಕಿದೆ. ಇದಕ್ಕೆ ಇನ್ನಷ್ಟು ಸಮಯ ಹಿಡಿಯುವುದು ನಿಶ್ಚಿತ. ಮುಂದಿನ ಮಾ.3ರಿಂದ ವಿಧಾನಮಂಡಲದ ಅಧಿವೇಶನ ಆರಂಭಗೊಂಡು ಮೊದಲ ವಾರದಲ್ಲೇ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ. ಅಧಿವೇಶನ ಪೂರ್ತಿ ಆಯವ್ಯಯದ ಮೇಲಿನ ಚರ್ಚೆಗೆ ಮೀಸಲಾಗಬಹುದು. ಹಾಗಾಗಿ ಜಿಬಿಎ ಕುರಿತು ವಿಧೇಯಕ ಚರ್ಚೆಗೊಂಡು ಅನುಮೋದನೆ ಪಡೆಯುವುದು ಅನುಮಾನ ಎಂದೇ ಹೇಳಲಾಗುತ್ತಿದೆ.

ಜಿಬಿಎ ವಿಧೇಯಕದ ಬಗ್ಗೆ ಚರ್ಚೆ ಇನ್ನಷ್ಟು ದಿನ ವಿಳಂಬವಾದಲ್ಲಿ ಬಿಬಿಎಂಪಿ ಚುನಾವಣೆ ನಡೆಯುವುದು ಕೂಡ ಅನುಮಾನ. ಒಂದು ರೀತಿಯಲ್ಲಿ ಸರ್ಕಾರ ಜಿಬಿಎಅನ್ನು ಮುಂದಿಟ್ಟು ಪಾಲಿಕೆ ಎಲೆಕ್ಷನ್ ಮುಂದೂಡುವ ‘ಚುತರ ನಡೆ’ಗೆ ಮಣೆ ಹಾಕಬಹುದು. ಒಂದೆಡೆ ಜನರು ಚುನಾವಣೆ ನಡೆಸಿರೆಂದು ಹಕ್ಕೊತ್ತಾಯ ಮಾಡುತ್ತಿದ್ದರೆ, ನಗರದ ಶಾಸಕರು/ಸಂಸದರು ಮತದಾರರ ನಿಲುವಿಗೆ ದನಿಗೂಡಿಸುತ್ತಿಲ್ಲ ಎಂಬ ಆಕ್ಷೇಪವೂ ವ್ಯಕ್ತವಾಗಿದೆ. ಇದು ನಿಜವಾದಲ್ಲಿ ನಗರ ಅಭಿವೃದ್ಧಿ ಮತ್ತಷ್ಟು ನಿಧಾನವಾಗುವುದು ನಿಶ್ಚಿತವಾಗಲಿದೆ.

ಬಿಬಿಎಂಪಿ ಚುನಾವಣೆ ಸಂಬಂಧ ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿ ಈ ತಿಂಗಳ 25ರಂದು ವಿಚಾರಣೆಗೆ ಬರಲಿದೆ. ಈ ಹಿಂದೆಯೂ ಬೇರೆ ಅರ್ಜಿಗಳ ವಿಚಾರಣೆ ನಡೆಸಿದಾಗ ಎಲೆಕ್ಷನ್ ನಡೆಸಲು ಅಡ್ಡಿಯಿಲ್ಲ ಎಂದು ನ್ಯಾಯಾಲಯ ಹೇಳಿತ್ತಾದರೂ, ಸರ್ಕಾರ ಮಾತ್ರ ಮುಗುಂ ಆಗಿಯೇ ವರ್ತಿಸಿದ್ದವು. ಈ ಬಾರಿ ಹೊರಬೀಳುವ ಆದೇಶದ ಪರಿಣಾಮ ಪಾಲಿಕೆಗೆ ಚುನಾವಣೆ ನಡೆಯಲಿದೆಯೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ಜಿಬಿಎ ಬಗ್ಗೆ ಸಭೆಯಲ್ಲಿ ಕೇಳಿಬಂದ ಕೆಲ ಸಲಹೆ:
* ಆಡಳಿತ ದೃಷ್ಟಿಯಿಂದ ಜಿಬಿಎ ಅಸ್ತಿತ್ವಕ್ಕೆ ತನ್ನಿ, ಬೆಂಗಳೂರಿನ ಅಸ್ತಿತ್ವಕ್ಕೆ ಧಕ್ಕೆ ಬೇಡ
* ಜಿಬಿಎ ರಚನೆ ಅವೈಜ್ಞಾನಿಕ ಕ್ರಮ. ಬಿಬಿಎಂಪಿಗೆ ಬೇಗನೆ ಚುನಾವಣೆ ನಡೆಸಿ
* ಪಾಲಿಕೆಗಳನ್ನು ರಚಿಸುವ ಬದಲು ವಲಯಗಳ ಸಂಖ್ಯೆಗಳನ್ನು ಹೆಚ್ಚಳ ಮಾಡಿ
* ಜಿಬಿಎ ಅಡಿಯಲ್ಲಿ ವಿಕೇಂದ್ರಿಕರಣ ಮಾಡುವುದರಿಂದ ಗಡಿಗಳಲ್ಲಿ ಸಮಸ್ಯೆ ಆಗಲಿದೆ
* ಜಿಬಿಎದಲ್ಲಿ ಕೌನ್ಸಿಲರ್‌ಗಳಿಗೂ ಹೆಚ್ಚು ಜವಾಬ್ದಾರಿ ನೀಡುವುದು ಒಳಿತು
* ನಗರಕ್ಕೆ ಒಬ್ಬ ಮೇಯರ್ ಇರಲಿ, ಅವರ ಅವಧಿ ಹೆಚ್ಚಳಗೊಳಿಸಿ
* ಪ್ರಾಯೋಗಿಕವಾಗಿ ಮಾಡಿ ನೋಡಿ, ಯಶಸ್ವಿಯಾದರೆ ಜಿಬಿಎ ಜಾರಿ ಮಾಡಿ
* ಬೆಂಗಳೂರನ್ನು ವಿಭಜಿಸಿ ಹಲವು ಪಾಲಿಕೆ ಮಾಡುವುದರಿಂದ ಸಮಸ್ಯೆ ಆಗಲಿದೆ.

ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್ ಭೂಸ್ವಾಧೀನ ತ್ವರಿತಗೊಳಿಸಲು ವಿಶೇಷ ಸಮಿತಿ ರಚಿಸಿದ ರಾಜ್ಯ ಸರ್ಕಾರ

Leave a Reply

Your email address will not be published. Required fields are marked *