ಬೆಂಗಳೂರು: ಇದೇ ಭಾನುವಾರ (ಜೂನ್ 22) ಮಾಜಿ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ಸನ್ಮಾನ್ಯ ಶ್ರೀ ಹೆಚ್.ಡಿ. ದೇವೇಗೌಡ ಅವರಿಗೆ ಶ್ರೀ ಗಂಗ ಸಾಮ್ರಾಟ ಶ್ರೀಪುರುಷ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ದೇವೇಗೌಡ ಅವರ ಬದುಕು ಮತ್ತು ಸಾಧನೆ ಸಾರುವ ಪುಸ್ತಕವನ್ನು ಜನಾರ್ಪಣೆ ಮಾಡಲಾಗುತ್ತದೆ.
ಇದೇ ಸಮಾರಂಭದಲ್ಲಿ ಗೀತ ನಮನ ಇರಲಿದ್ದು, 93 ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಗೌರವಾನ್ವಿತ ಶ್ರೀ ಹೆಚ್.ಡಿ. ದೇವೇಗೌಡ ಅವರು ಹಾಗೂ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರನ್ನು ಸನ್ಮಾನಿಸಲಾಗುತ್ತದೆ. ಗಣ್ಯರಿಂದ ಮಾಜಿ ಪ್ರಧಾನಮಂತ್ರಿ ಶ್ರೀ ಹೆಚ್.ಡಿ. ದೇವೇಗೌಡ ಅವರ ಬದುಕು ಮತ್ತು ಸಾಧನೆ ಪುಸ್ತಕದ ಜನಾರ್ಪಣೆಯಾಗಲಿದೆ. ಶ್ರೀ ಹೆಚ್.ಡಿ. ದೇವೇಗೌಡರಿಗೆ ಗೀತ ನಮನ ಸಲ್ಲಿಸಲಾಗುತ್ತದೆ. ಲೇಖಕರು ಹಾಗೂ ಪತ್ರಕರ್ತರಾದ ಶ್ರೀ ಸುಗತ ಶ್ರೀನಿವಾಸರಾಜು ಅವರು ಅಭಿನಂದನಾ ನುಡಿ ಸಲ್ಲಿಸುತ್ತಾರೆ. ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಶ್ರೀ ಎಂ.ಎನ್. ವೆಂಕಟಾಚಲಯ್ಯ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಲಿದ್ದಾರೆ.
ದಿನಾಂಕ : 22 ಜೂನ್ 2025, ಭಾನುವಾರ
ಸಮಯ: ಮಧ್ಯಾಹ್ನ 2:00 ಗಂಟೆಗೆ
ಸ್ಥಳ: ಡಾ. ಬಾಬು ಜಗಜೀವನ್ ರಾಮ್ ಭವನ, ಡಾ. ಬಾಬು ಜಗಜೀವನ್ ರಾಮ್ ಸಂಶೋಧನಾ ಸಂಸ್ಥೆ ಹೊರವರ್ತುಲ ರಸ್ತೆ, ಸುಮ್ಮನಹಳ್ಳಿ ಜಂಕ್ಷನ್ ಹತ್ತಿರ, ಬೆಂಗಳೂರು-560091
ದೇವೇಗೌಡರ ಬಗ್ಗೆ
1954ರಲ್ಲಿ ಚೆನ್ನಮ್ಮನವರನ್ನು ಮದುವೆಯಾದ ದೇವೇಗೌಡರು, ಸುದೀರ್ಘ 72 ವರ್ಷಗಳಿಂದ ಆದರ್ಶಮಯ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ದಂಪತಿಗಳಿಗೆ ಆರು ಜನ ಮಕ್ಕಳಿದ್ದಾರೆ. ಅವರ ಪುತ್ರ ಎಚ್.ಡಿ. ಕುಮಾರಸ್ವಾಮಿ ಅವರೂ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಲಿ ಕೇಂದ್ರ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿದ್ದಾರೆ. ಪ್ರಸ್ತುತ ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿರುವ ದೇವೇಗೌಡರು, ಕರ್ನಾಟಕದ ಹಾಗೂ ದೇಶದ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗಿ, ತಮ್ಮ 94 ರ ವಯಸ್ಸಿನಲ್ಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ನೀರಾವರಿ ತಜ್ಞ, ರೈತಾಪಿ ಜನರ ಬದುಕಿಗೆ ಶಕ್ತಿ ತುಂಬಿದ ಮಣ್ಣಿನ ಮಗ ಹೆಚ್.ಡಿ. ದೇವೇಗೌಡರ ಜೀವಮಾನದ ಸಾಧನೆಯನ್ನು ಗೌರವಿಸುವ ಸಲುವಾಗಿ, ಸನ್ಮಾನ್ಯರಿಗೆ ‘ಗಂಗ ಸಾಮ್ರಾಟ ಶ್ರೀಪುರುಷ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಗೌರವಿಸಲಾಗುತ್ತಿದೆ.
ಶ್ರೀ ಗಂಗ ಸಾಮ್ರಾಜ್ಯ
ದಕ್ಷಿಣ ಭಾರತದ, ಅದರಲ್ಲೂ ಮುಖ್ಯವಾಗಿ ಈಗಿನ ಕರ್ನಾಟಕದ ಭೂಭಾಗವನ್ನಾಳಿದ ಪ್ರಮುಖ ರಾಜವಂಶಗಳಲ್ಲಿ ಗಂಗ ಮನೆತನವೂ ಒಂದು. ಇವರು ಮೂಲ ಕನ್ನಡಿಗರೂ ಹೌದು. ಪಶ್ಚಿಮ ಗಂಗರೆಂದೂ ಪ್ರಸಿದ್ಧರಾಗಿದ್ದ ಇವರು, ಕ್ರಿ.ಶ. 4ನೇ ಶತಮಾನದಿಂದ 11ನೇ ಶತಮಾನದ ಅವಧಿಯಲ್ಲಿ ಸಾಕಷ್ಟು ಕಾಲ ಸ್ವತಂತ್ರವಾಗಿ ಆಡಳಿತ ನಡೆಸಿದ್ದಲ್ಲದೆ, ಕರ್ನಾಟಕದ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು ಮತ್ತು ಹೊಯ್ಸಳ ದೊರೆಗಳ ಮಾಂಡಲಿಕರಾಗಿಯೂ ಸುದೀರ್ಘ ಕಾಲ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡಿದ್ದರು. ಕೊಂಗುಣಿವರ್ಮ ಗಂಗವಂಶದ ಸಂಸ್ಥಾಪಕ ದೊರೆ. ದುರ್ವಿನೀತ, ಶ್ರೀಪುರುಷ, ರಾಚಮಲ್ಲ, ಎರೆಯಂಗ, ಭೂತುಗ ಮೊದಲಾದವರು ಪ್ರಮುಖ ಅರಸರಾಗಿದ್ದರು. ದುರ್ವಿನೀತ, ಶ್ರೀಪುರುಷ ಮೊದಲಾದವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಚಿರಸ್ಮರಣೀಯವಾದದ್ದು.
ಇವರು ಮೊದಲು ಗಂಗವಾಡಿ-6000 ಪ್ರಾಂತ್ಯದ ಅಧಿಪತಿಗಳಾಗಿದ್ದು ಕುವಳಾಲ (ಈಗಿನ ಕೋಲಾರ) ಇವರ ರಾಜದಾನಿಯಾಗಿತ್ತು. ಕ್ರಮೇಣ ಇವರ ರಾಜ್ಯ ವಿಸ್ತಾರವಾಗಿ ಅದಕ್ಕೆ ಗಂಗವಾಡಿ 96000 ಎಂಬ ಹೆಸರು ಬಂತು. ಕರ್ನಾಟಕದ ತುಮಕೂರು, ಬೆಂಗಳೂರು, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳನ್ನಲ್ಲದೆ, ತಮಿಳುನಾಡಿನ ಸೇಲಂ, ಕೊಯಮತ್ತೂರು, ಉತ್ತರ ಆರ್ಕಾಟ್ ಜಿಲ್ಲೆಗಳ ಕೆಲವು ಭಾಗಗಳೂ ಇವರ ರಾಜ್ಯಕ್ಕೆ ಸೇರಿದ್ದವು. ಆಗ ತಲವನಪುರ (ಈಗಿನ ತಲಕಾಡು) ಇವರ ರಾಜಧಾನಿಯಾಯಿತು. ಚನ್ನಪಟ್ಟಣದ ಸಮೀಪದ ಮಂಕುಂದ ಮತ್ತು ನೆಲಮಂಗಲ ತಾಲ್ಲೂಕಿನಲ್ಲಿರುವ ಮಣ್ಣೆ (ಮಾನ್ಯಪುರ) ಇವರ ನೆಲೆವೀಡುಗಳಾಗಿದ್ದವು. ಈಗ ಈ ಭಾಗದಲ್ಲಿರುವ ಗಂಗಡಿಕಾರ ವಕ್ಕಲಿಗರು ಈ ಮನೆತನದವರೆಂದು ಹೇಳಲಾಗಿದೆ.
ಇದೇ ಗಂಗವಂಶದವರೆಂದು ಹೇಳಲಾಗಿರುವ ಪೂರ್ವ ಗಂಗರು ಕಳಿಂಗವನ್ನು ಕೇಂದ್ರವಾಗಿಟ್ಟುಕೊಂಡು ಒಡಿಶಾ, ವ. ಬಂಗಾಳ, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳನ್ನು ಕ್ರಿ.ಶ. 5 ರಿಂದ 15ನೇ ಶತಮಾನದವರೆಗೆ ಆಳಿದ್ದಾರೆ. ವಿಶ್ವಪ್ರಸಿದ್ಧವಾದ ಕೊನಾರ್ಕ್ ಸೂರ್ಯ ದೇವಾಲಯ ಮತ್ತು ಪುರಿಯ ಜಗನ್ನಾಥ ದೇವಾಲಯಗಳು ಪೂರ್ವ ಗಂಗರ ಅತ್ಯಮೂಲ್ಯ ಕೊಡುಗೆಗಳಾಗಿವೆ.
ಶ್ರೀ ಗಂಗ ಸಾಮ್ರಾಟ ಶ್ರೀಪುರುಷ
ಶ್ರೀಪುರುಷನು ಗಂಗವಂಶದ ಅತ್ಯಂತ ಪ್ರಸಿದ್ಧ ದೊರೆ. ಶ್ರೀಪುರುಷನು ಕ್ರಿ.ಶ. 725-788 ರವರೆಗೆ ಸುಮಾರು 63 ವರ್ಷಗಳ ಕಾಲ ವೈಭವದಿಂದ ರಾಜ್ಯವಾಳಿದ ಸಾಮ್ರಾಟ ಶ್ರೀಪುರಷನಿಗೆ ಮುತ್ತರಸ ಎಂಬ ಇನ್ನೊಂದು ಹೆಸರಿದ್ದು, ಕೊಂಗುಣಿ ರಾಜಾಧಿರಾಜ, ಶ್ರೀವಲ್ಲಭ, ಕೊಂಗುಣಿ ಮುತ್ತರಸ, ರಾಜಪರಮೇಶ್ವರ, ರಾಜಕೇಸರಿ, ಭೀಮಕೋಪ, ರಣಭಾಜನ ಇತ್ಯಾದಿ ಬಿರುದುಗಳೂ ಇದ್ದುವು. ಶ್ರೀಪುರುಷನು ತನ್ನ ಆಳ್ವಿಕೆಯ ಕಾಲದಲ್ಲಿ, ಪಲ್ಲವ ನಂದಿವರ್ಮನನ್ನು ಸೋಲಿಸಿ, ವಿಜಯದ ಫಲವಾಗಿ ‘ಶ್ವೇತಭತ್ರ’ವನ್ನೂ ‘ಪೆರ್ಮಾಡಿ’ ಎಂಬ ಬಿರುದನ್ನೂ ಪಡೆದಿದ್ದನು. ಚಾಲುಕ್ಯ ಇಮ್ಮಡಿ ವಿಕ್ರಮಾದಿತ್ಯನೊಂದಿಗೆ ಸ್ನೇಹ ಸಂಪಾದಿಸಿದ್ದನು. ಕ್ರಿ.ಶ. 757ರ ವೇಳೆಗೆ ಬಾದಾಮಿ ಚಾಲುಕ್ಯರ ರಾಜ್ಯ ರಾಷ್ಟ್ರಕೂಟದ ವಶವಾದಾಗ, ಗಂಗ ಶ್ರೀಪುರುಷ ರಾಷ್ಟ್ರಕೂಟರ ಸಾರ್ವಭೌಮತ್ವವನ್ನು ಒಪ್ಪದೆ, ಸ್ವಾಭಿಮಾನದಿಂದ ಸ್ವತಂತ್ರವಾಗಿಯೇ ಉಳಿದಿದ್ದ ಶ್ರೀಪುರುಷನ ಆಳ್ವಿಕೆಯ ಕಾಲಕ್ಕೆ ಷಣ್ಣವತಿ ಸಹಸ್ರ (96000) ಎನಿಸಿಕೊಂಡಿದ್ದ ರಾಜ್ಯವನ್ನು ಶ್ರೀರಾಜ್ಯವೆಂದೂ ಕರೆಯಲಾಗಿತ್ತು. ನೊಳಂಬರು ಗಂಗರ ಸಾಮಂತರಾಗಿದ್ದರು. ಈ ಮನೆತನದ ನೊಳಂಬ ಮಾರವೆಯನ್ನು ಶ್ರೀಪುರುಷ ವಿವಾಹವಾಗಿದ್ದ, ಎರೆಯಪ್ಪ, ಇಮ್ಮಡಿ ಶಿವಮಾರ ಹಾಗೂ ವಿಜಯಾದಿತ್ಯರೆಂಬ ಮೂವರು ಮಕ್ಕಳಿದ್ದರು.
ಶ್ರೀಪುರುಷನು ಪರಾಕ್ರಮಿಯೂ, ದಕ್ಷ ಆಡಳಿತಗಾರನೂ ಆಗಿದ್ದಂತೆ, ಪ್ರತಿಭಾವಂತ ಕವಿಯೂ, ಸಾಹಿತ್ಯ ಪೋಷಕನೂ ಆಗಿದ್ದಲ್ಲದೆ, ಗಜಶಾಸ್ತ್ರ ಎಂಬ ಗ್ರಂಥವನ್ನು ಬರೆದಿದ್ದಾನೆ. ಪರಮತಸಹಿಷ್ಣುವಾಗಿ ಎಲ್ಲ ಧರ್ಮಗಳನ್ನೂ ಆಧರಿಸಿದ್ದನು. ಶ್ರೀಪುರುಷನ 63 ವರ್ಷಗಳ ಅಳ್ವಿಕೆಯಲ್ಲಿ ಗಂಗ ಸಾಮ್ರಾಜ್ಯವು ಹಿಂದೆಂದೂ ಕಾಣದ ಉಚ್ಚಾಯ ಸ್ಥಿತಿಯನ್ನು ತಲುಪಿತು. ಸಾಮ್ರಾಟ ಶ್ರೀಪುರುಷನು ತನ್ನ ದಕ್ಷ ಆಡಳಿತದಿಂದ ಪ್ರಜಾಹಿತ ಕಾರ್ಯಗಳಿಂದ ಅರಸರಿಗೆ ಆಡಳಿತಗಾರರಿಗೆ ಆದರ್ಶಪ್ರಾಯರಾಗಿದ್ದಾರೆ.
ಯಾವುದಕ್ಕೆ ಎಷ್ಟು ರೇಟ್ ಫಿಕ್ಸ್ ಮಾಡಿ, ಬೋರ್ಡ್ ಹಾಕಿ ಬಿಡಿ: ಕಂದಾಯ ಅಧಿಕಾರಿಗಳಿಗೆ ಸಚಿವ ಕೃಷ್ಣ ಭೈರೇಗೌಡ ತರಾಟೆ


