BBMP
Loading ...

Mangalamukhi

Greater Bengaluru News9: ಬೆಂಗಳೂರಿನ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕೇವಲ 200 ರೂ. ಹಣಕ್ಕಾಗಿ ಮಂಗಳಮುಖಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ರಾಮಮೂರ್ತಿನಗರದ ಗೌತಮ್‌ (29) ಎಂಬಾತ ಕೊಲೆ ಮಾಡಿರುವ ಆರೋಪಿಯಾಗಿದ್ದು, ಸದ್ಯ ಉಪ್ಪಾರಪೇಟೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮೂಲತಃ ಹುಬ್ಬಳ್ಳಿಯವರಾದ ದೇವಿ, ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದರು. ತಮ್ಮ ಸ್ನೇಹಿತೆ ನಕ್ಷತ್ರ ಅವರೊಂದಿಗೆ ಸುಂಕದಕಟ್ಟೆ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನಿನ್ನೆ ರಾತ್ರಿ ಊಟ ಮಾಡಲು ದೇವಿ ಹಾಗೂ ನಕ್ಷತ್ರ ಮೆಜೆಸ್ಟಿಕ್‌ಗೆ ಬಂದಿದ್ದರು.

ಈ ವೇಳೆ ಬ್ಯಾಗ್‌ನಲ್ಲಿದ್ದ ಎಣ್ಣೆ ತೆಗೆದುಕೊಳ್ಳಲು ದೇವಿ ಬಸ್ ನಿಲ್ದಾಣದಿಂದ ಹೊರಗೆ ಬಂದಿದ್ದರು. ಇದೇ ಸಂದರ್ಭದಲ್ಲಿ ದೇವಿ ಬಳಿ ಬಂದ ಗೌತಮ್ 200 ರೂ. ಹಣ ಕೇಳಿದ್ದಾನೆ. ಆದರೆ ದೇವಿ ತಮ್ಮ ಬಳಿ ಹಣ ಇಲ್ಲ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಗೌತಮ್, ತನ್ನ ಬಳಿ ಇದ್ದ ಡ್ರ್ಯಾಗರ್‌ನಿಂದ ದೇವಿಗೆ ಇರಿದಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ದೇವಿ ಮೃತಪಟ್ಟಿದ್ದಾರೆ.

ಆರೋಪಿ ಗೌತಮ್ ಯಾವುದೇ ಕೆಲಸ ಮಾಡುತ್ತಿರಲಿಲ್ಲ ಎನ್ನಲಾಗಿದ್ದು, ಈ ಹಿಂದೆ ಸಣ್ಣಪುಟ್ಟ ಸುಲಿಗೆ ಪ್ರಕರಣಗಳಲ್ಲೂ ಭಾಗಿಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ನಿನ್ನೆ ರಾತ್ರಿ ಕೂಡ ಅದೇ ರೀತಿಯಲ್ಲಿ ಮೆಜೆಸ್ಟಿಕ್‌ಗೆ ಬಂದಿದ್ದ ಗೌತಮ್, ಹಣಕ್ಕಾಗಿ ದೇವಿಯನ್ನು ಗುರಿಯಾಗಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *