Greater Bengaluru News9 : ವಿದ್ಯುತ್ ತಂತಿ ಮರು ಜೋಡಣೆ ಮಾಡಲು ಉಕ್ಕಿ ಹರಿಯುತ್ತಿರುವ ಹೊಳೆಯಲ್ಲಿ ವಿದ್ಯುತ್ ತಂತಿಯನ್ನು ಹಿಡಿದುಕೊಂಡೇ ಮೂವರು ಮೆಸ್ಕಾಂ ಪವರ್‌ಮ್ಯಾನ್‌ಗಳು ದಾಟುವ ಮೂಲಕ ನದಿಯ ಎರಡೂ ಭಾಗಗಳಿಗೆ ವಿದ್ಯುತ್ ಸಂಪರ್ಕ ಮರು ಜೋಡಣೆ ಮಾಡುತ್ತಿರುವ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದ್ದು, ರಿಯಲ್ ಹೀರೋಗಳು ಎಂಬ ಮೆಚ್ಚುಗೆ ವ್ಯಕ್ತವಾಗಿದೆ. ಮೆಸ್ಕಾಂ ಇಲಾಖೆಯ ಗ್ರಾಮಾಂತರ ಪ್ರದೇಶದ ಮೂವರು ಪವರ್ ಮ್ಯಾನ್‌ಗಳಾದ ಬಂದೇ ನವಾಜ್, ಪ್ರವೀಣ್ ಮತ್ತು ಬಸವರಾಜ್ ಅವರು ಸ್ಥಳೀಯರಾದ ಜಾನು ನಾಯ್ಕ ಮತ್ತವರ ಮನೆಯವರ ಸಹಕಾರದಿಂದ ಜೀವ ಪಣಕ್ಕಿಟ್ಟು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ದೂಮಡ್ಕ ಎಂಬಲ್ಲಿ ಈ ಸಾಹಸಮಯ ಕಾರ್ಯಾಚರಣೆ ನಡೆಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ದೂಮಡ್ಕ ಪ್ರದೇಶದಲ್ಲಿ ಹರಿಯುತ್ತಿರುವ ಸೀರೆ ಹೊಳೆಯು ತುಂಬಿ ಹರಿಯುತ್ತಿದೆ. ಈ ಹೊಳೆಯ ಬದಿಯಲ್ಲಿ ಸುಮಾರು ೧೨ ಮನೆಗಳಿದ್ದು, ಅವರಿಗೆ ಹೊಳೆಯ ಇನ್ನೊಂದು ಬದಿಯಿಂದ ಎಲ್.ಟಿ. ಲೈನ್ ಎಳೆದು ವಿದ್ಯುತ್ ನೀಡಲಾಗಿದೆ. ಸೋಮವಾರ ಹೊಳೆ ದಡದಲ್ಲಿ ಇರುವ ಈಚಲು ಮರವೊಂದು ಮುರಿದು ವಿದ್ಯುತ್ ಲೈನ್‌ಗೆ ಬಿದ್ದ ಕಾರಣ ೪ ತಂತಿಗಳ ಪೈಕಿ ೨ ತುಂಡಾಗಿ ನದಿಗೆ ಬಿದ್ದಿತ್ತು. ಇದನ್ನು ಗಮನಿಸಿದ ಜಾನು ನಾಯ್ಕ, ಅವರ ಪುತ್ರ ಹಾಗೂ ಸ್ಥಳೀಯರು ಸೇರಿಕೊಂಡು ತುಂಡಾದ ತಂತಿಗಳು ನೀರಿನಲ್ಲಿ ಕೊಚ್ಚಿ ಹೋಗದಂತೆ ತಡೆದು ಪಕ್ಕದಲ್ಲಿರುವ ಮರಕ್ಕೆ ಕಟ್ಟಿದ್ದರು.
ಮಂಗಳವಾರ ತುಂಬಿ ಹರಿಯುತ್ತಿರುವ ಹೊಳೆಯ ಮೇಲ್ಭಾಗದಲ್ಲಿ ತಂತಿ ಮರು ಜೋಡಣೆಗೆ ಮುಂದಾದ ಮೂವರು ಪವರ್ ಮ್ಯಾನ್‌ಗಳು ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದ್ದರು.
ಮೆಸ್ಕಾಂ ಬೆಟ್ಟಂಪಾಡಿ ಶಾಖೆಯ ಕಿರಿಯ ಎಂಜಿನಿಯರ್ ಪುತ್ತು ಜೆ. ಸ್ಥಳದಲ್ಲಿದ್ದು ಮಾರ್ಗದರ್ಶನ ನೀಡಿದ್ದರು. ಉಕ್ಕಿ ಹರಿಯುತ್ತಿರುವ ಹೊಳೆಯಲ್ಲಿ ನೀರಿನ ಸುಳಿಯನ್ನೂ ಲೆಕ್ಕಿಸದೆ ಕರ್ತವ್ಯ ಪ್ರಜ್ಞೆ ಮೆರೆದಿರುವ ಪವರ್‌ಮ್ಯಾನ್‌ಗಳ ಈ ಪವರ್‌ನ ದೃಶ್ಯವು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ.
ಇದೊಂದು ಕರ್ತವ್ಯ ನಿಷ್ಠೆಯ ಪರಮೋಚ್ಚ ನಿದರ್ಶನ. ನಮ್ಮ ತಂಡದ ಸದಸ್ಯರ ಕಾರ್ಯಾಚರಣೆ ನಮಗೆ ಹೆಮ್ಮೆ ತಂದಿದೆ ಎಂದು ಮೆಸ್ಕಾಂ ಪುತ್ತೂರು ಗ್ರಾಮಾಂತರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ್ ಅಭಿನಂದಿಸಿದ್ದಾರೆ.


