Greater Bengaluru News9 : ರಾಜಧಾನಿ ಬೆಂಗಳೂರಿನ ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಾ, ದೀರ್ಘಕಾಲದಿಂದ ಅನಾಥವಾಗಿ ಬಿದ್ದಿರುವ ವಾಹನಗಳಿಗೆ ಕೊನೆಗೂ ಮುಕ್ತಿ ನೀಡಲು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ಸಂಚಾರ ಪೊಲೀಸ್ ಇಲಾಖೆಯು ಜಂಟಿಯಾಗಿ ಜುಲೈ 10ರ ನಾಳೆಯಿಂದ ಅನಾಥ ವಾಹನಗಳ ತೆರವು ಮತ್ತು ಹರಾಜು ಪ್ರಕ್ರಿಯೆಯ ಬೃಹತ್ ಜಂಟಿ ಕಾರ್ಯಾಚರಣೆಯನ್ನು ಆರಂಭಿಸಲಿವೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರ ನೇರ ನಿರ್ದೇಶನದ ಮೇರೆಗೆ, ಜಿಬಿಎ (GBA) ಕಾಯ್ದೆ 2024, ಸೆಕ್ಷನ್ 324ರ ಅನ್ವಯ ಈ ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಗಿದೆ.
ಸಮಸ್ತ ಸಾರ್ವಜನಿಕರ ಗಮನಕ್ಕೆ ತರಬಯಸುವುದೇನೆಂದರೆ, ಜುಲೈ 10 ರಿಂದ ಅನ್ವಯವಾಗುವಂತೆ ಬೆಂಗಳೂರಿನ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಈ ನಿಯಮ ಜಾರಿಗೆ ಬರಲಿದೆ. ರಸ್ತೆಗಳು, ತೆರೆದ ಪ್ರದೇಶಗಳು (Open Grounds) ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಹಲವಾರು ದಿನಗಳಿಂದ ಅನಾಥವಾಗಿ ಬಿಡಲಾದ ವಾಹನಗಳನ್ನು ಗುರುತಿಸಿ, ಆಯಾ ನಗರ ಪಾಲಿಕೆಗಳು ಹಾಗೂ ಸಂಚಾರ ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ.
ಕೈಗೊಳ್ಳಲಿರುವ ಕ್ರಮಗಳ ಸಂಪೂರ್ಣ ವಿವರ:
- ನೋಟಿಸ್ ಅವಧಿ ಮತ್ತು ವೀಲ್ ಕ್ಲಾಂಪ್ ಅಳವಡಿಕೆ:
ಮೊದಲ ಹಂತವಾಗಿ ರಸ್ತೆ ಬದಿಗಳಲ್ಲಿ ಗುರುತಿಸಲಾಗುವ ಅನಾಥ ವಾಹನಗಳಿಗೆ 7 ದಿನಗಳ ಕಾಲಾವಕಾಶ ನೀಡಿ, ವಾಹನದ ಮೇಲೆ ಅಧಿಕೃತ ಸ್ಟಿಕ್ಕರ್ ಮಾದರಿಯ ನೋಟಿಸ್ ಅನ್ನು ಅಂಟಿಸಲಾಗುವುದು. ನೋಟಿಸ್ ಅಂಟಿಸಿದ ತಕ್ಷಣವೇ ಆ ವಾಹನಗಳ ಚಕ್ರಕ್ಕೆ ವೀಲ್ ಕ್ಲಾಂಪ್ (Wheel Clamp) ಅಳವಡಿಸಿ, ಅವುಗಳನ್ನು ಅಲ್ಲಿಂದ ಕದಲಿಸದಂತೆ ಲಾಕ್ ಮಾಡಲಾಗುತ್ತದೆ. - ವಾಹನ ಜಪ್ತಿ (Towing):
ನೋಟಿಸ್ ನೀಡಿದ 7 ದಿನಗಳ ಒಳಗಾಗಿ ವಾಹನಗಳ ಮಾಲೀಕರು ಎಚ್ಚೆತ್ತುಕೊಂಡು ತಮ್ಮ ವಾಹನಗಳನ್ನು ಸ್ವಯಂ ಪ್ರೇರಿತರಾಗಿ ತೆರವುಗೊಳಿಸದಿದ್ದರೆ, ಅಂತಹ ವಾಹನಗಳನ್ನು ಕ್ರೇನ್ ಮೂಲಕ ಎಳೆದುಕೊಂಡು ಹೋಗಿ (Tow ಮಾಡಿ) ಇಲಾಖೆಯ ವಶಕ್ಕೆ ಜಪ್ತಿ ಮಾಡಿಕೊಳ್ಳಲಾಗುವುದು. - ಬಹಿರಂಗ ಹರಾಜು:
ನಿಗದಿತ ಅವಧಿಯ ನಂತರವೂ ಮಾಲೀಕರು ಬಾರದೆ ಜಪ್ತಿ ಮಾಡಲಾದ ಎಲ್ಲಾ ವಾಹನಗಳನ್ನು ಸರ್ಕಾರದ ನಿಯಮಾನುಸಾರ ಸಾರ್ವಜನಿಕವಾಗಿ ಬಹಿರಂಗ ಹರಾಜು (Public Auction) ಹಾಕಲಾಗುವುದು.
ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ:
ಈ ಪ್ರಕಟಣೆಯ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಸಾರ್ವಜನಿಕರಲ್ಲಿ ವಿನಂತಿಸುವುದೇನೆಂದರೆ, ನೀವು ರಸ್ತೆಗಳು ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ವಾಹನಗಳನ್ನು ಅನಾಥವಾಗಿ ನಿಲ್ಲಿಸಿದ್ದರೆ, ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಆ ವಾಹನಗಳನ್ನು ನಿಮ್ಮ ಸ್ವಂತ ಜಾಗಕ್ಕೆ ಸ್ಥಳಾಂತರಿಸಿಕೊಳ್ಳಬೇಕು. ತಪ್ಪಿದ್ದಲ್ಲಿ, ಯಾವುದೇ ಮುನ್ಸೂಚನೆ ಇಲ್ಲದೆ ವಾಹನಗಳನ್ನು ಜಪ್ತಿ ಮಾಡಿ ಹರಾಜು ಹಾಕಲಾಗುವುದು ಎಂದು ಕಡಕ್ ಎಚ್ಚರಿಕೆ ನೀಡಲಾಗಿದೆ.


