Greater Bengaluru News9 : ಬಳ್ಳಾರಿ ಜಿಲ್ಲೆಯ ಸಂಗನಕಲ್ ಗ್ರಾಮದ ಧ್ಯಾನ ಮಂದಿರದ ಬಳಿ ನಡೆದ ಘಟನೆ ಕೇವಲ ದುರಂತವಲ್ಲ; ಇದು ಜೆಸ್ಕಾಂ (GESCOM) ಅಧಿಕಾರಿಗಳು ಹಾಗೂ ಲೇಬರ್ ಗುತ್ತಿಗೆದಾರನ ಅಪ್ಪಟ ಬೇಜವಾಬ್ದಾರಿತನ ಮತ್ತು ಮನುಷ್ಯತ್ವವಿಲ್ಲದ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ. ವಿದ್ಯುತ್ ಲೈನ್ ಸರಿಪಡಿಸಲು ಕಂಬ ಏರಿದ ಯರ್ರಗುಡಿ ಗ್ರಾಮದ 22 ವರ್ಷದ ಯುವಕ ಹುಲಗಪ್ಪ, ತನಗಾಗಿ ಕಾಯುತ್ತಿದ್ದ ಸಾವಿನ ದೂತರನ್ನು ಅರಿಯದೆ ಪ್ರಾಣ ಕಳೆದುಕೊಂಡಿದ್ದಾನೆ. ದಿನಗೂಲಿ ಕಾರ್ಮಿಕನಾಗಿ ಬಂದಿದ್ದ ಆ ಬಡ ಯುವಕನ ಬದುಕನ್ನು ಇಲಾಖೆಯ ವ್ಯವಸ್ಥಿತ ನಿರ್ಲಕ್ಷ್ಯ ಕಂಬದ ಮೇಲೆಯೇ ಮುಗಿಸಿಬಿಟ್ಟಿದೆ.
ನಿಯಮಗಳ ಪ್ರಕಾರ ವಿದ್ಯುತ್ ಲೈನ್ ದುರಸ್ತಿ ಮಾಡುವ ಮುನ್ನ ಲೈನ್ ಕ್ಲಿಯರೆನ್ಸ್ (ಎಲ್ ಸಿ) ತೆಗೆದುಕೊಳ್ಳುವುದು ಕಡ್ಡಾಯ. ಆದರೆ, ಇಲ್ಲಿ ಅಧಿಕಾರಿಗಳಾಗಲಿ ಅಥವಾ ಗುತ್ತಿಗೆದಾರನಾಗಲಿ ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆ ವಹಿಸದೆ, ಎಲ್ ಸಿ ತೆಗೆದುಕೊಳ್ಳದೆಯೇ ಆ ಅಮಾಯಕ ಕಾರ್ಮಿಕನನ್ನು ಕಂಬಕ್ಕೆ ಹತ್ತಿಸಿದ್ದಾರೆ. ಕೆಲಸ ಮಾಡುವಾಗ ದಿಢೀರನೆ ವಿದ್ಯುತ್ ಪ್ರವಹಿಸಿದ್ದೇ ಈ ಘೋರ ದುರಂತಕ್ಕೆ ಕಾರಣ. ವ್ಯವಸ್ಥೆಯ ಕನಿಷ್ಠ ಜವಾಬ್ದಾರಿಯೂ ಇಲ್ಲದ ಇಂತಹ ಲೇಬರ್ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಧನದಾಹಕ್ಕೆ ಇನ್ಯಾರೋ ಹೆತ್ತ ಕರುಳು ಬಲಿಯಾಗುತ್ತಿರುವುದು ಅತ್ಯಂತ ಜುಗುಪ್ಸೆ ತರಿಸುವಂತಹ ಸಂಗತಿಯಾಗಿದೆ.
ವಿದ್ಯುತ್ ಕಂಬದ ಮೇಲೆಯೇ ಸುಮಾರು 15 ನಿಮಿಷಗಳ ಕಾಲ ಆ ಯುವಕ ಜೀವನ್ಮರಣದ ಹೋರಾಟ ನಡೆಸಿದ್ದಾನೆ. “ಕಾಪಾಡಿ, ಕಾಪಾಡಿ…” ಎಂದು ಆತ ನರಳಾಡುತ್ತಾ ಹಾಕಿದ ಕಿರುಚಾಟ, ಅಲ್ಲಿ ನೆರೆದಿದ್ದವರ ಮನಕಲಕುವಂತಿತ್ತು. ಸ್ಥಳದಲ್ಲಿದ್ದ ಸಹ ಕಾರ್ಮಿಕರು ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗದೆ, ಆತನನ್ನು ಕೆಳಗೆ ಇಳಿಸಲೂ ಆಟೋಪಟಾಪಡಲಾಗದೆ ಅಸಹಾಯಕರಾಗಿ ಕಣ್ಣೀರು ಹಾಕುತ್ತಾ ನಿಲ್ಲಬೇಕಾಯಿತು. ಕಣ್ಣೆದುರೇ ಸಹೋದ್ಯೋಗಿಯೊಬ್ಬ ಜೀವ ಬಿಡುತ್ತಿದ್ದರೂ ಏನೂ ಮಾಡಲಾಗದ ಆ ಕಾರ್ಮಿಕರ ಸ್ಥಿತಿ, ಇಡೀ ಇಲಾಖೆಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿ ನಿಂತಿತ್ತು.
ಲೈನ್ ದುರಸ್ತಿ ಮಾಡುವಂತಹ ಗಂಭೀರ ಕೆಲಸ ನಡೆಯುವಾಗ ಸ್ಥಳದಲ್ಲಿ ಜೆಸ್ಕಾಂ ಅಧಿಕಾರಿಗಳಾಗಲಿ ಅಥವಾ ಸಂಬಂಧಪಟ್ಟ ಲೈನ್ ಮ್ಯಾನ್ ಆಗಲಿ ಇರಲಿಲ್ಲ ಎನ್ನಲಾಗಿದೆ. ಕೇವಲ ದಿನಗೂಲಿ ಕಾರ್ಮಿಕರನ್ನು ಮುಂದಿಟ್ಟುಕೊಂಡು, ತಾವೆಲ್ಲೋ ಎಸಿ ರೂಮಿನಲ್ಲಿ ಕುಳಿತುಕೊಳ್ಳುವ ಇಂತಹ ಅಧಿಕಾರಿಗಳ ಉಡಾಫೆ ಪ್ರವೃತ್ತಿ ಖಂಡನೀಯ. ರಕ್ಷಣೆ ಮಾಡಲು ಯಾರೂ ಇಲ್ಲದೆ, ಸೂಕ್ತ ಸಮಯಕ್ಕೆ ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳದೆ ಆತ ಕಂಬದ ಮೇಲೆಯೇ ನರಳಾಡಿ ನರಳಾಡಿ ಪ್ರಾಣ ಬಿಟ್ಟಿದ್ದಾನೆ ಎಂದರೆ, ಈ ಅಧಿಕಾರಿಗಳ ಮನಸ್ಸು ಕಲ್ಲಾಗಿದೆಯೇ ಎಂಬ ಪ್ರಶ್ನೆ ಮೂಡುತ್ತದೆ.
ಸದ್ಯ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯೇನೋ ಹೌದು. ಆದರೆ, ಕೇವಲ ಎಫ್ಐಆರ್ ದಾಖಲಿಸಿ ಕೈತೊಳೆದುಕೊಂಡರೆ ಮೃತನ ಕುಟುಂಬಕ್ಕೆ ನ್ಯಾಯ ಸಿಗುವುದಿಲ್ಲ. ಬಡತನದ ಬೇಗೆಯಲ್ಲಿ ಬೆಂದು ದಿನಗೂಲಿಗೆ ಬಂದಿದ್ದ ಯುವಕನ ಪ್ರಾಣಕ್ಕೆ ಜೆಸ್ಕಾಂ ಉತ್ತರಿಸಲೇಬೇಕು. ಈ ಘಟನೆಗೆ ನೇರ ಕಾರಣರಾದ ಗುತ್ತಿಗೆದಾರ ಮತ್ತು ಜೆಸ್ಕಾಂ ಅಧಿಕಾರಿಗಳನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಿ ಜೈಲಿಗಟ್ಟಬೇಕಿದೆ. ಇಲ್ಲದಿದ್ದರೆ, ಇಂತಹ ಇಲಾಖೆಗಳು ಬಡ ಕಾರ್ಮಿಕರ ಜೀವದೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸುವುದೇ ಇಲ್ಲ.


