BBMP
Loading ...

GBA

Greater Bengaluru News9 : ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ ಚೆಂಡು ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ. ಹೀಗಾಗಿ ಎಲ್ಲರ ಕಣ್ಣು ನಾಳೆ ನ್ಯಾಯಾಲಯ ನೀಡುವ ತೀರ್ಪಿನತ್ತ ನೆಟ್ಟಿದೆ.

ಸುಮಾರು 10 ವರ್ಷಗಳ ಬಳಿಕ ನಡೆಸಲು ತೀರ್ಮಾನಿಸಲಾಗಿರುವ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ನಾಳೆ ಮಹತ್ವದ ವಿಚಾರಣೆ ನಡೆಸಲಿದೆ. ಇದು ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂ ಹಲ ಮೂಡಿಸಿದೆ.

ಈ ಹಿಂದೆ ಸುಪ್ರೀಂ ಕೋರ್ಟ್‌, ಜೂನ್‌ 30ರೊಳಗೆ ಜಿಬಿಎ ಚುನಾವಣೆಯನ್ನು ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸ್ಪಷ್ಟ ನಿರ್ದೇಶನ ನೀಡಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಹಾಗೂ ಜಿಬಿಎ ಮುಖ್ಯ ಆಯುಕ್ತರು ಚುನಾವಣೆ ಮುಂದೂಡಲು ಮೂರು ತಿಂಗಳ ಹೆಚ್ಚುವರಿ ಗಡುವು ನೀಡುವಂತೆ ಮನವಿ ಮಾಡಿರುವ ಹಿನ್ನೆಲೆ ಪ್ರಕರಣ ಮತ್ತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ರಾಜ್ಯದಲ್ಲಿ ಎಸ್‌‍ಐಆರ್‌ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. ಜೊತೆಗೆ ಸಿಬ್ಬಂದಿಗಳ ಕೊರತೆಯೂ ಇದೆ ಎಂದು ರಾಜ್ಯ ಚುನಾವಣಾ ಆಯೋಗ ತನ್ನ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದೆ. ಸರ್ಕಾರ ಹಾಗೂ ಜಿಬಿಎ ಮುಖ್ಯ ಆಯುಕ್ತರಿಂದ ಬಂದ ಮನವಿಯನ್ನು ಪರಿಗಣಿಸಿದ ಆಯೋಗ, ಈ ವಿಷಯವನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದಿದೆ.

ಈ ಅರ್ಜಿಯ ವಿಚಾರಣೆ ನಾಳೆ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಜಾಯೋಲ ಬಾಗ್ಚಿ ಅವರ ಪೀಠದಲ್ಲಿ ನಡೆಯುವ ಸಾಧ್ಯತೆ ಇದೆ.ಇನ್ನೊಂದೆಡೆ, ಗ್ರೇಟರ್‌ ಬೆಂಗಳೂರು ಪ್ರದೇಶದಲ್ಲಿ 5 ಹೊಸ ನಗರ ಪಾಲಿಕೆಗಳನ್ನು ರಚಿಸಿರುವ ರಾಜ್ಯ ಸರ್ಕಾರ, ಕಳೆದ ಜುಲೈ 19ರಂದು ಪಾಲಿಕೆ ವಿಭಜನೆ ಕುರಿತು ಅಧಿಸೂಚನೆ ಹೊರಡಿಸಿತ್ತು. ಆದರೆ ಬಿಬಿಎಂಪಿ ಸದಸ್ಯರ ಅಧಿಕಾರಾವಧಿ 2020ರ ಸೆಪ್ಟೆಂಬರ್‌ 10ರಲ್ಲೇ ಪೂರ್ಣಗೊಂಡಿದ್ದರೂ, ಇನ್ನೂ ಚುನಾವಣೆ ನಡೆದಿಲ್ಲ ಎಂಬುದು ಗಮನಾರ್ಹ.

ಸುಪ್ರೀಂ ಕೋರ್ಟ್‌ ಈ ಹಿಂದೆ ಜೂನ್‌ 30ರೊಳಗೆ ಚುನಾವಣೆ ನಡೆಸುವಂತೆ ಸ್ಪಷ್ಟ ಸೂಚನೆ ನೀಡಿದ್ದರೂ, ತೆರೆಮರೆಯಲ್ಲಿ ಚುನಾವಣೆಯನ್ನು ಮುಂದೂಡಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ.

ಈ ಹಿನ್ನೆಲೆಯಲ್ಲಿ ನಾಳೆಯ ಸುಪ್ರೀಂ ಕೋರ್ಟ್‌ ವಿಚಾರಣೆ ಜಿಬಿಎ ಚುನಾವಣೆಯ ಭವಿಷ್ಯವನ್ನು ನಿರ್ಧರಿಸುವಂತಾಗಿದೆ. ಚುನಾವಣೆ ವೇಳಾಪಟ್ಟಿ ಯಥಾಸ್ಥಿತಿಯಲ್ಲಿ ಮುಂದುವರಿಯುತ್ತದೆಯೇ ಅಥವಾ ಸರ್ಕಾರ ಕೇಳಿರುವಂತೆ ಮೂರು ತಿಂಗಳ ಗಡುವು ವಿಸ್ತರಣೆ ಸಿಗುತ್ತದೆಯೇ ಎಂಬುದರ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

Leave a Reply

Your email address will not be published. Required fields are marked *