BBMP
Loading ...

Greater Bengaluru News9 : ರಾಜ್ಯದ ಜನತೆಗೆ ಮಹತ್ವದ ಮಾಹಿತಿ ಇಲ್ಲಿದೆ. ಅಗತ್ಯ ಔಷಧಿಗಳನ್ನು ಖರೀದಿಸಬೇಕಿದ್ದರೆ ಇಂದುಲೇ ಪಡೆದುಕೊಳ್ಳುವುದು ಉತ್ತಮ. ನಾಳೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಮೆಡಿಕಲ್ ಶಾಪ್‌ಗಳು ಬಂದ್ ಆಗಲಿವೆ.

ಬ್ಲಿಂಕಿಟ್, ಸ್ವಿಗ್ಗಿ, ಜೋಮಾಟೋ ಸೇರಿದಂತೆ ಆನ್‌ಲೈನ್ ಆಧಾರಿತ ಕಂಪನಿಗಳ ಮೂಲಕ ಔಷಧಿ ಮಾರಾಟ ನಿಲ್ಲಿಸುವಂತೆ ಆಗ್ರಹಿಸಿ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘ ದೇಶವ್ಯಾಪಿ ಬಂದ್‌ಗೆ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಔಷಧಿ ಮಾರಾಟ ವ್ಯಾಪಾರಿಗಳ ಸಂಘವೂ ಬೆಂಬಲ ಸೂಚಿಸಿದ್ದು, ರಾಜ್ಯದಾದ್ಯಂತ 26 ಸಾವಿರಕ್ಕೂ ಅಧಿಕ ಮೆಡಿಕಲ್ ಶಾಪ್‌ಗಳು ಒಂದು ದಿನದ ಮಟ್ಟಿಗೆ ಬಂದ್ ಆಗಲಿವೆ. ಮೇ 20ರ ರಾತ್ರಿ 12:01ರಿಂದ ರಾತ್ರಿ 11:59ರವರೆಗೆ ಬಂದ್ ನಡೆಯಲಿದೆ ಎಂದು ಸಂಘಟನೆ ತಿಳಿಸಿದೆ.

ಆನ್‌ಲೈನ್ ಔಷಧಿ ಮಾರಾಟಕ್ಕೆ ವಿರೋಧ ಯಾಕೆ?
ಔಷಧಿ ವ್ಯಾಪಾರಿಗಳ ಪ್ರಕಾರ, ಕೋವಿಡ್ ಸಮಯದಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಆನ್‌ಲೈನ್ ಔಷಧಿ ಮಾರಾಟದ ಅನುಮತಿಯನ್ನು ಕೆಲ ಆಪ್ ಆಧಾರಿತ ಕಂಪನಿಗಳು ದೊಡ್ಡ ವ್ಯವಹಾರವನ್ನಾಗಿ ಮಾಡಿಕೊಂಡಿವೆ. ಇದರಿಂದ ಸಣ್ಣ ಮೆಡಿಕಲ್ ಅಂಗಡಿಗಳಿಗೆ ಭಾರೀ ಹೊಡೆತ ಬೀಳುತ್ತಿದೆ ಎಂದು ಆರೋಪಿಸಲಾಗಿದೆ.

ವ್ಯಾಪಾರಿಗಳು ಉಲ್ಲೇಖಿಸಿರುವ ಪ್ರಮುಖ ಸಮಸ್ಯೆಗಳು:

  • ನಿಯಂತ್ರಣವಿಲ್ಲದ ಆನ್‌ಲೈನ್ ಔಷಧಿ ಮಾರಾಟ
  • ನಕಲಿ ಪ್ರಿಸ್ಕ್ರಿಪ್ಷನ್‌ಗಳ ಬಳಕೆ
  • ಆಂಟಿಬಯೋಟಿಕ್ ಹಾಗೂ ಚಟ ಉಂಟುಮಾಡುವ ಔಷಧಿಗಳ ದುರುಪಯೋಗ
  • ರೋಗಿ ಮತ್ತು ಫಾರ್ಮಸಿಸ್ಟ್ ನಡುವೆ ನೇರ ಸಂಪರ್ಕದ ಕೊರತೆ
  • ಸರಿಯಾಗಿ ಸಂಗ್ರಹಿಸದ ಅಥವಾ ನಕಲಿ ಔಷಧಿಗಳ ಅಪಾಯ
  • ಅತಿಯಾದ ಡಿಸ್ಕೌಂಟ್‌ನಿಂದ ಸಣ್ಣ ವ್ಯಾಪಾರಿಗಳಿಗೆ ಸಂಕಷ್ಟ
  • ಮಾರುಕಟ್ಟೆಯಲ್ಲಿ ಏಕಾಧಿಪತ್ಯದ ಭೀತಿ

ಪ್ರಮುಖ ಬೇಡಿಕೆಗಳು:

  • ಜಿಎಸ್‌ಆರ್ 220(ಇ) ಹಿಂಪಡೆಯಬೇಕು
  • ಜಿಎಸ್‌ಆರ್ 817(ಇ) ರದ್ದುಪಡಿಸಬೇಕು
  • ಅಕ್ರಮ ಇ-ಫಾರ್ಮಸಿ ಸೇವೆಗಳನ್ನು ಬಂದ್ ಮಾಡಬೇಕು
  • ಅತಿಯಾದ ರಿಯಾಯಿತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
  • ಸಣ್ಣ ಔಷಧಿ ವ್ಯಾಪಾರಿಗಳನ್ನು ರಕ್ಷಿಸಬೇಕು

ವ್ಯಾಪಾರಿಗಳ ಪ್ರಕಾರ, ಸರ್ಕಾರದ ಪರವಾನಗಿ ಪಡೆದು ನಿಯಮಬದ್ಧವಾಗಿ ಔಷಧಿ ಮಾರಾಟ ಮಾಡುತ್ತಿರುವ ಮೆಡಿಕಲ್ ಅಂಗಡಿಗಳಿಗೆ ಆಪ್ ಆಧಾರಿತ ಕಂಪನಿಗಳ ಅಕ್ರಮ ಚಟುವಟಿಕೆಗಳು ಭಾರೀ ಸಮಸ್ಯೆಯಾಗಿದೆ. ಇದು ರೋಗಿಗಳ ಜೀವಕ್ಕೂ ಅಪಾಯಕಾರಿಯಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮೆಡಿಕಲ್ ಶಾಪ್‌ಗಳು ಬಂದ್ ಆಗುತ್ತಿರುವ ಹಿನ್ನೆಲೆಯಲ್ಲಿ ಜನಜೀವನದ ಮೇಲೆ ಯಾವ ಮಟ್ಟಿನ ಪರಿಣಾಮ ಬೀಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *