ಬೆಂಗಳೂರು: ರಾಜ್ಯದಲ್ಲಿರುವ ಎಲ್ಲ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿರ್ಮಿಸುವ ಕಟ್ಟಡಗಳಿಗೆ ಆರಂಭಿಕ ಪ್ರಮಾಣಪತ್ರ (ಸಿಸಿ) ಹಾಗೂ ಸ್ವಾಧೀನ ಪ್ರಮಾಣಪತ್ರ (ಒಸಿ) ವಿತರಿಸುವ ವಿಚಾರದಲ್ಲಿ ಉಂಟಾಗಿರುವ ಸಮಸ್ಯೆ ನಿವಾರಿಸಲು ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, 1200 ಚದರ ಅಡಿ ವಿಸ್ತೀರ್ಣದವರೆಗಿನ ಕಟ್ಟಡಗಳಿಗೆ ಸಿಸಿ, ಒಸಿ ಪಡೆಯುವುದರಿಂದ ವಿನಾಯಿತಿ ನೀಡಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ.
ಇತ್ತೀಚಿಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಬಿಬಿಎಂಪಿ, ಬೆಸ್ಕಾಂ, ಪೌರಾಡಳಿತ ನಿರ್ದೇಶನಾಲಯ, ಪಂಚಾಯತ್‌ರಾಜ್ ಆಯುಕ್ತಾಲಯ, ಇಂಧನ ಹಾಗೂ ನಗರಾಭಿವೃದ್ಧಿ ಇಲಾಖೆಯ ಮುಖ್ಯಸ್ಥರ ಸಭೆಯಲ್ಲಿ ಈ ಬಗ್ಗೆ ವಿಸ್ತ್ರತ ಚರ್ಚೆ ನಡೆಸಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಗೆ ತಿದ್ದುಪಡಿ ತರಲು ಆಯಾ ಇಲಾಖೆಗಳ ಮಟ್ಟದಲ್ಲಿ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಕಡಿಮೆ ವಿಸ್ತೀರ್ಣದ ಸೈಟ್‌ಗಳಲ್ಲಿ (1,200 ಚ. ಅಡಿವರೆಗೆ) ಮನೆ ನಿರ್ಮಿಸಿಕೊಳ್ಳುವವರು ಕೂಡ ಹಾಲಿ ನಿಯಮದಂತೆ ಸಿಸಿ, ಒಸಿ ಪಡೆಯಬೇಕಿದೆ. ಆದರೆ, ಇಂತಹ ಪ್ರಮಾಣಪತ್ರ ವಿತರಿಸುವ ಮುನ್ನ ಆಯಾ ಇಲಾಖಾ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುವುದು ಕಡ್ಡಾಯವಾಗಿದೆ. ರಾಜ್ಯದ ಉದ್ದಗಲಕ್ಕೂ ಈ ರೀತಿ ಪರಿಶೀಲನೆ ಮಾಡಲು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿ ವರ್ಗಕ್ಕೆ ಹೆಚ್ಚಿನ ಹೊರೆ ಬೀಳಲಿದೆ. ಇದರಿಂದ ಸಾರ್ವಜನಿಕರಿಗೆ ವಿನಾಕಾರಣ ವಿಳಂಬವಾಗಿ ಸೌಲಭ್ಯ ಒದಗಿಸಲು ವಿಳಂಬವಾಗುತ್ತದೆ. ಹಾಗಾಗಿ ಕಡಿಮೆ ವಿಸ್ತೀರ್ಣದ ಮನೆ ನಿರ್ಮಾಣಕ್ಕೆ ಸೀಮಿತಗೊಳಿಸಿ ಸಿಸಿ, ಒಸಿ ವಿತರಿಸಲು ವಿನಾಯಿತಿ ನೀಡಬಹುದಾಗಿದೆ ಎಂಬುದನ್ನು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.
ಇದಕ್ಕಾಗಿ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ – 2024ರ ಸೆಕ್ಷನ್ 241 (7) ಅಡಿಯಲ್ಲಿ ಸರ್ಕಾರ ವಿನಾಯಿತಿ ನೀಡಲು ಅವಕಾಶ ಕಲ್ಪಿಸಿದೆ. ಈ ಅವಕಾಶವು ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ – 1976, ಕರ್ನಾಟಕ ಪುರಸಭೆಗಳ ಕಾಯ್ದೆ -1964ರಲ್ಲಿ ಇಲ್ಲ. ಇದನ್ನು ಗಮನಿಸಿ ಹೊಸದಾಗಿ ನಿಯಮ ಸೇರಿಸಲು ತಿದ್ದುಪಡಿ ತರಲಾಗುತ್ತದೆ. ಇದೇ ರೀತಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮೂಲಕ ಗ್ರಾಮೀಣ ಜನತೆಗೂ ಪರಿಹಾರ ಒದಗಿಸಲು ಅಗತ್ಯ. ಈ ಮೂಲಕ ಗ್ರಾಮೀಣ ಜನತೆಗೂ ಪರಿಹಾರ ಒದಗಿಸಲು ಅಗತ್ಯ ತಿದ್ದುಪಡಿಗೆ ಬೇಕಾದ ವ್ಯವಸ್ಥೆ ಮಾಡಿ ಅದನ್ನು ಸರ್ಕಾರದ ಮುಂದೆ ಮಂಡಿಸಲು ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.
ಎಂಬಿಬಿಗೂ ತಿದ್ದುಪಡಿ ಸಾಧ್ಯತೆ:
ಸಿಸಿ, ಒಸಿ ವಿತರಣೆ ಸಂಬಂಧಿಸಿದಂತೆ ಆಯಾ ಸ್ಥಳೀಯ ಸಂಸ್ಥೆಗಳಲ್ಲಿ ಮಾದರಿ ಕಟ್ಟಡ ಬೈಲಾ (ಎಂಬಿಬಿ) ಅಸ್ತಿತ್ವದಲ್ಲಿದೆ. ಇದಕ್ಕೂ ಕೂಡ ತಿದ್ದುಪಡಿ ತರಲು ಆಯಾ ಇಲಾಖಾ ಸಚಿವರ ಸಲಹೆ ಪಡೆದು ಕ್ರಮ ವಹಿಸಲು ತೀರ್ಮಾನಿಸಲಾಗಿದೆ. ಕಳೆದ ಜು.3ರಂದು ನಡೆದ ಸಿಎಂ, ಡಿಸಿಎಂ ಹಾಗೂ ಪ್ರಮುಖ ಇಲಾಖಾ ಸಚಿವರ ಸಭೆಯಲ್ಲಿ, ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿ ಎಲ್ಲ ಕಾಯ್ದೆಗಳಲ್ಲೂ ಸಮಾನ ಅವಕಾಶ ಇರಬೇಕೆಂದು ಸಲಹೆ ಕೇಳಿಬಂದಿತ್ತು. ಇದನ್ನಾಧರಿಸಿ ಅಧಿಕಾರಿ ಮಟ್ಟದ ಸಭೆಯಲ್ಲಿ ತಿದ್ದುಪಡಿ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮೂರಂತಸ್ತಿನ ಕಟ್ಟಡಗಳಿಗೆ ವಿನಾಯಿತಿ:
ಗ್ರೇಟರ್ ಬೆಂಗಳೂರು ಸೇರಿ ರಾಜ್ಯದ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ 1,200 ಚದರ ಅಡಿ ವಿಸ್ತೀಣದ ಮನೆಗಳಿಗೆ ಸಿಸಿ, ಒಸಿ ವಿನಾಯಿತಿ ಸಿಗಲಿದೆ. ಈ ವಿನಾಯಿತಿಯು ನೆಲ ಅಂತಸ್ತು, 2 ಮಹಡಿ ಅಥವಾ ಸ್ಟಿಲ್ಟ್ ಹಾಗೂ 3 ಅಂತಸ್ತು ಕಟ್ಟಡಗಳಿಗೆ ಮಾತ್ರ ಅನ್ವಯವಾಗಲಿದೆ. ಇದರಿಂದ ಲಕ್ಷಾಂತರ ಸಂಖ್ಯೆಯ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಬಿಗ್ ರಿಲೀಫ್ ಸಿಗುವ ಸಾಧ್ಯತೆ ಇದೆ.


