BBMP
Loading ...

ಮಂಡ್ಯ: ನಿನ್ನೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಸ್ಎಂ ಕೃಷ್ಣ ಇಹಲೋಕ ತ್ಯಜಿಸಿದ್ದಾರೆ. ಇಂದು ಅವರ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಎಸ್ಎಂ ಕೃಷ್ಣ ಅವರ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯಿತು.

ಪಂಚಭೂತಗಳಲ್ಲಿ ಲೀನವಾದ ಎಸ್‌ಎಂಕೆ

ಕಾಫಿ ಡೇ ಆವರಣದಲ್ಲಿ ಒಕ್ಕಲಿಗ ಸಂಪ್ರದಾಯದ ಪ್ರಕಾರ ಭಾನು ಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಅಂತ್ಯಕ್ರಿಯೆಯ ಸಾಂಪ್ರಾದಾಯಿಕ ವಿಧಿವಿಧಾನ ಕಾರ್ಯ ನಡೆಯಿತು. ಮೊದಲು ಪುಣ್ಯಾಹ, ಬಳಿಕ ಪಂಚಗವ್ಯ, ಸ್ನಾನ, ಸ್ನಾನದ ಬಳಿಕ ಕರ್ಣ ಮಂತ್ರ ಪಾರಾಯಣ, ಉತ್ಕ್ರಾಂತ ತಿಲಪಾತ್ರ ದಾನ, ಗೋದಾನ, ದಶದಾನ ಮಾಡಲಾಯಿತು. ಆ ಬಳಿಕ ಪಾರ್ಥೀವ ಶರೀರಕ್ಕೆ ಮೊಮ್ಮಗ ಅಮೃರ್ತ್ಯ ಹೆಗಡೆ ಅಗ್ನಿ ಸ್ಪರ್ಶ ಮಾಡಿದರು. ಈ ಮೂಲಕ ಎಸ್‌ಎಂ ಕೃಷ್ಣ ಅವರು ಪಂಚಭೂತಗಳಲ್ಲಿ ಲೀನವಾದರು.

ಅಂತ್ಯ ಸಂಸ್ಕಾರಕ್ಕೆ 1 ಸಾವಿರ ಕೆಜಿ ಶ್ರೀಗಂಧ ಬಳಕೆ

ಅಂತ್ಯಸಂಸ್ಕಾರದ ಸ್ಥಳದಲ್ಲಿ ಗಣ್ಯರಿಗೆ ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 10.30 ಗಂಟೆಗೆಯಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಾನು ಪ್ರಕಾಶ್ ಸ್ವಾಮೀಜಿ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನ ನಡೆಸಲಾಯಿತು. ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನೆರೆವೇರಿಸಲಾಯಿತು. ಅಂತ್ಯ ಸಂಸ್ಕಾರಕ್ಕೆ 1 ಸಾವಿರ ಕೆಜಿ ಶ್ರೀಗಂಧ ಬಳಕೆ ಮಾಡಲಾಯಿತು. 300 ಕೆಜಿ ಸೇವಂತಿಗೆ, ಗುಲಾಬಿ ಹಾಗೂ ಚೆಂಡು ಹೂವು ಬಳಕೆ ಮಾಡಲಾಗಿದೆ.

ಮೊಮ್ಮಗ ಅಮಾರ್ಥ್ಯ ಹೆಗ್ಡೆ ಅವರಿಂದ ಅಂತ್ಯಕ್ರಿಯೆ

ಎಸ್‌ಎಂ ಕೃಷ್ಣ ಅವರ ಪಾರ್ಥಿವ ಶರೀರಕ್ಕೆ ಅವರ ಮೊಮ್ಮಗ ಅಮಾರ್ಥ್ಯ ಹೆಗ್ಡೆ ಅವರಿಂದ ಅಂತ್ಯಕ್ರಿಯೆ ನಡೆಸಲಾಯಿತು. ಈತ ಬೇರೆಯಾರೂ ಅಲ್ಲ ಉದ್ಯಮಿ ಸಿದ್ದಾರ್ಥ ಅವರ ಪುತ್ರ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅಳಿಯನೇ ಅಮಾರ್ಥ್ಯ ಹೆಗ್ಡೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್. ಎಂ. ಕೃಷ್ಣ

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್. ಎಂ. ಕೃಷ್ಣ ಅವರನ್ನು ಮೊದಲು ವೈದೇಹಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಇದಾದ ಬಳಿಕ ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಡಾ. ಸತ್ಯನಾರಾಯಣ ಮೈಸೂರು, ಡಾ. ಸುನೀಲ್ ಕಾರಂತ್ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದರು.

ಕರ್ನಾಟಕದ 16ನೇ ಮುಖ್ಯಮಂತ್ರಿಯಾಗಿದ್ದ ಕೃಷ್ಣ

ಎಸ್‌ಎಂ ಕೃಷ್ಣ ಅವರು 1999 ರಿಂದ 2004ರವರೆಗೆ ಕರ್ನಾಟಕದ 16ನೇ ಮುಖ್ಯಮಂತ್ರಿಗಳಾಗಿದ್ದರು. ನಂತರ 2004 ರಿಂದ 2008ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಸ್ಪೀಕರ್ ಆಗಿಯೂ ಸೇವೆ ಸಲ್ಲಿಕೆ

ಡಿಸೆಂಬರ್ 1989ರಿಂದ ಜನವರಿ 1993ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. 1971 ರಿಂದ 2014ರವರೆಗೆ ವಿವಿಧ ಕಾಲಘಟ್ಟದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಆಗಿದ್ದರು.

2017ರಲ್ಲಿ ಬಿಜೆಪಿ ಸೇರ್ಪಡೆ

ಬಹುಕಾಲ ಕಾಂಗ್ರೆಸ್​ನಲ್ಲಿಯೇ ಗುರುತಿಸಿಕೊಂಡಿದ್ದ ಎಸ್.ಎಂ.ಕೃಷ್ಣ ಅವರು ಬದಲಾದ ರಾಜಕೀಯ ಸನ್ನಿವೇಶಗಳಿಂದಾಗಿ ಮಾರ್ಚ್ 2017ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಬಿಜೆಪಿ ಸೇರ್ಪಡೆಯಾದ 2018ರ ವಿಧಾನಸಭಾ ಚುನಾವಣೆಯಲ್ಲಿ ಕೊನೆಯದಾಗಿ ಬಹಿರಂಗವಾಗಿ ಪ್ರಚಾರ ನಡೆಸಿದ್ದರು. ತದನಂತರ ಸಕ್ರಿಯ ರಾಜಕಾರಣದಿಂದ ಎಸ್.ಎಂ.ಕೃಷ್ಣ ಹಿಂದೆ ಸರಿದಿದ್ದರು.

Leave a Reply

Your email address will not be published. Required fields are marked *