Greater Bengaluru News9 : ರಾಜ್ಯ ರಾಜಕೀಯದಲ್ಲಿ ನಾಥ ಪರಂಪರೆಯ ಗುರುಗಳನ್ನು ರಾಜಕೀಯಕ್ಕೆ ತರಲು ಬಿಜೆಪಿ ಚಿಂತನೆ ನಡೆಸಿದೆ ಎಂಬ ಚರ್ಚೆಗಳ ನಡುವೆಯೇ ಚುಂಚಶ್ರೀ ನಿರ್ಮಲಾನಂದ ನಾಥ ಶ್ರೀ ಮೊದಲ ಬಾರಿಗೆ ತಮ್ಮ ರಾಜಕೀಯ ಪ್ರವೇಶದ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.
ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಮಲಾನಂದ ಶ್ರೀ, “ನಮ್ಮ ಮಠ ಪರಂಪರೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವೆಗೆ ಮೀಸಲಾಗಿದೆ. ಈ ಮಠದ ನೀತಿಯನ್ನು ನಾನು ಎಂದಿಗೂ ಮೀರುವುದಿಲ್ಲ” ಎಂದು ಹೇಳಿದ್ದಾರೆ.
“ನಮ್ಮ ಮಠ ನಾಯಕತ್ವವನ್ನು ರೂಪಿಸುತ್ತದೆ ಹೊರತು, ತಾನೇ ನಾಯಕತ್ವ ವಹಿಸುವ ಪರಂಪರೆ ಇಲ್ಲ. ಆದ್ದರಿಂದ ನಾನು ರಾಜಕೀಯ ಪ್ರವೇಶ ಮಾಡುವ ಪ್ರಶ್ನೆಯೇ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ Yogi Adityanath ಉದಾಹರಣೆ ನೀಡಿದ ಶ್ರೀಗಳು, “ಆದಿತ್ಯನಾಥರ ಕುಟುಂಬದಲ್ಲಿ ರಾಜಕೀಯ ಹಿನ್ನೆಲೆ ಇತ್ತು. ಹಾಗಾಗಿ ಅವರು ಆ ಹಾದಿ ಹಿಡಿದರು. ಆದರೆ ನಮ್ಮ ಮಠದಲ್ಲಿ ಅಂತಹ ನೀತಿ ಇಲ್ಲ” ಎಂದು ಹೇಳಿದ್ದಾರೆ.
ಮುಂಬರುವ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಲ್ಲಿ ನಿರ್ಮಲಾನಂದ ಶ್ರೀಗಳನ್ನು ಕಣಕ್ಕಿಳಿಸಲು ಬಿಜೆಪಿ ಒಳಮಟ್ಟದಲ್ಲಿ ಚರ್ಚೆ ನಡೆಸಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇದೀಗ ಸ್ವತಃ ಶ್ರೀಗಳೇ ರಾಜಕೀಯ ಪ್ರವೇಶಕ್ಕೆ ನಿರಾಕರಣೆ ನೀಡಿರುವುದರಿಂದ ಆ ಚರ್ಚೆಗಳಿಗೆ ತೆರೆ ಬಿದ್ದಂತಾಗಿದೆ.


