BBMP
Loading ...

Abakari

Greater Bengaluru News9 : ಬಾರ್ ಲೈಸೆನ್ಸ್ ನೀಡಲು 60 ರೂ. ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಮಂಡ್ಯ ಜಿಲ್ಲಾ ಅಬಕಾರಿ ಉಪಆಯುಕ್ತ ನಾಗಶಯನ ಅವರನ್ನು ಸರ್ಕಾರ ಅಮಾನತುಗೊಳಿಸಿದೆ. ಅರ್ಜಿದಾರ ಸುಂದರ್ ಅವರು ನೀಡಿದ ಲೋಕಾಯುಕ್ತ ದೂರು ಮತ್ತು ಸದನದಲ್ಲಿ ನಡೆದ ಚರ್ಚೆಯ ಹಿನ್ನೆಲೆಯಲ್ಲಿ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

ರಾಜ್ಯ ರಾಜಕೀಯದಲ್ಲಿ ಅಬಕಾರಿ ಇಲಾಖೆಯ ₹6000 ಕೋಟಿ ಭ್ರಷ್ಟಾಚಾರದ ಆರೋಪ ದೊಡ್ಡ ಬಿರುಗಾಳಿ ಎಬ್ಬಿಸಿರುವ ಬೆನ್ನಲ್ಲೇ, ಮಂಡ್ಯದಲ್ಲಿಯೂ ಲಂಚ ಪ್ರಕರಣ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ ?
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಸುಂದರ್ ಎಂಬುವವರು ಹೊಸದಾಗಿ ಸಿಎಲ್-7 (CL-7) ಬಾರ್ ತೆರೆಯಲು ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅಬಕಾರಿ ಅಧಿಕಾರಿಗಳು ಸಣ್ಣಪುಟ್ಟ ಕಾರಣಗಳನ್ನು ನೀಡಿ ಪದೇ ಪದೇ ಅರ್ಜಿಯನ್ನು ವಜಾ ಮಾಡುತ್ತಿದ್ದರು. ಅರ್ಜಿದಾರ ಸುಂದರ್ ಅವರು ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿ, ನ್ಯಾಯಾಲಯದಿಂದ ಪರವಾನಗಿ ನೀಡುವಂತೆ ಆದೇಶ ತಂದಿದ್ದರೂ ಸಹ ಅಧಿಕಾರಿಗಳು ಲೈಸೆನ್ಸ್ ನೀಡಲು ನಿರಾಕರಿಸಿದ್ದರು ಎನ್ನಲಾಗಿದೆ.

ಲಂಚಕ್ಕೆ ಬೇಡಿಕೆ
ಪರವಾನಗಿ ನೀಡಬೇಕಾದರೆ 60 ಲಕ್ಷ ರೂ. ಲಂಚ ನೀಡಬೇಕು ಎಂದು ಉಪ ಆಯುಕ್ತ ನಾಗಶಯನ ಅವರು ಸುಂದರ್ ಅವರಿಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ಈ ಭ್ರಷ್ಟಾಚಾರದ ಆಡಿಯೋ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡಿದ್ದ ಸುಂದರ್, ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ಅಧಿವೇಶನದಲ್ಲಿ ಚರ್ಚೆ
ಈ ಪ್ರಕರಣವು ಪ್ರಸ್ತುತ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲೂ ಭಾರಿ ಸದ್ದು ಮಾಡಿತ್ತು. ರಾಜ್ಯದಲ್ಲಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಅಹೋರಾತ್ರಿ ಧರಣಿ ನಡೆಸುತ್ತಿರುವ ಸಂದರ್ಭದಲ್ಲೇ, ಮಂಡ್ಯದ ಈ ಹಗರಣವು ಸರ್ಕಾರದ ಭ್ರಷ್ಟಾಚಾರದ ಮುಖವಾಡವನ್ನು ಬಯಲು ಮಾಡಿದೆ ಎಂದು ವಿರೋಧ ಪಕ್ಷಗಳು ವಾಗ್ದಾಳಿ ನಡೆಸಿದ್ದವು.

Leave a Reply

Your email address will not be published. Required fields are marked *