ನವದೆಹಲಿ: ಭಾರತ ಮಾತ್ರವಲ್ಲ ಇಡೀ ಜಗತ್ತೇ ಅತ್ಯಂತ ಗೌರವಾಗಿ ಕಾಣುತ್ತಿದ್ದ ಉದ್ಯಮಿ ರತನ್ ಟಾಟಾ ಅವರು ತಮ್ಮ 86 ನೇ ವರ್ಷದಲ್ಲಿ ಮೃತಪಟ್ಟಿದ್ದಾರೆ. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಮುಂಬೈನ ಆಸ್ಪತ್ರೆಯಲ್ಲಿ ಕೊನೆಯಸಿರೆಳೆದಿದ್ದಾರೆ. ಉದ್ಯಮಿಯಾಗಿ ಲಾಭವನ್ನಷ್ಟೇ ನೋಡದೆ ದೇಶಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಇಂಥಾ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡ ಉದ್ಯಮ ವಲಯ ಬಡವಾಗಿದೆ.
ರತನ್ ಟಾಟಾ ಅವರ ಸಾವಿಗೆ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿರುವ ನಂಜಾವಧೂತ ಸ್ವಾಮೀಜಿ , ಗೋವಿಂದರಾಜನಗರ ಕ್ಷೇತ್ರದ ಜನಪ್ರಿಯ ಕಾಂಗ್ರೆಸ್ ಶಾಸಕ ಪ್ರಿಯಕೃಷ್ಣ ಹಾಗೂ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ರಮೇಶ್ ಅವರು ಸಂತಾಪ ಸೂಚಿಸಿದ್ದಾರೆ.
ರತನ್ ಟಾಟಾ ಅವರ ನಿಧನ ಈ ವರ್ಷದ ಅತ್ಯಂತ ಕೆಟ್ಟ ಸುದ್ದಿಯಾಗಿದೆ. ಅವರು ಟಾಟಾ ಗ್ರೂಪ್‌ನ ಅತ್ಯುತ್ತಮ ಸಂಪ್ರದಾಯಗಳನ್ನು ಅನುಸರಿಸಿದರು ಮತ್ತು ವಿಶ್ವದಲ್ಲಿ ಭಾರತೀಯ ಉದ್ಯಮಶೀಲತೆಯ ಧ್ವಜವನ್ನು ಹೆಮ್ಮೆಯಿಂದ ಎತ್ತಿದರು. ಅವರು ಸಾಮಾನ್ಯರ ಕಾಳಜಿಯನ್ನು ಅರ್ಥಮಾಡಿಕೊಂಡ ಉದ್ಯಮಿ. ದೇವರು ಅವರ ಪಾದದಲ್ಲಿ ರತನ್ ಟಾಟಾ ಅವರಿಗೆ ಸ್ಥಾನ ನೀಡಲಿ. ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಶಾಸಕ ಪ್ರಿಯಕೃಷ್ಣ ಸಂತಾಪ ಸೂಚಿಸಿದ್ದಾರೆ.
1937 ರಲ್ಲಿ ಮುಂಬೈನಲ್ಲಿ ಪ್ರಸಿದ್ಧ ಟಾಟಾ ಕುಟುಂಬದಲ್ಲಿ ಜನಿಸಿದ ರತನ್ ಟಾಟಾ ಅವರು ತಮ್ಮ 10 ನೇ ವಯಸ್ಸಿನಲ್ಲಿಯೇ ಪೋಷಕರನ್ನು ಕಳೆದುಕೊಂಡರು. ಅವರನ್ನು ಅಜ್ಜಿ ಬೆಳೆಸಿದರು. ಈ ಒಂಟಿತನವು ಅವರಿಗೆ ಜೀವನದ ಅರ್ಥವನ್ನು ಕಲಿಸಿತು ಮತ್ತು 3800 ಕೋಟಿ ರೂ. ಸಾಮ್ರಾಜ್ಯವನ್ನು ಆಳಲು ಕಾರಣವಾಯಿತು.
ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ರತನ್ ಟಾಟಾ ತಮ್ಮದೇಯಾದ ಛಾಪನ್ನು ಮಾಡಿಸಿದ್ದರು. ಅವರ ಮಾಲೀಕತ್ವದ ಟಾಟಾ ಮೋಟಾರ್ಸ್ (Tata Motors) ಸುರಕ್ಷಿತ ಕಾರು ತಯಾರಿಕೆಗೆ ಹೆಸರುವಾಸಿಯಾಗಿದೆ. ದೇಶದ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು 2008ರಲ್ಲಿ ರತನ್ ಟಾಟಾ ಅವರ ಕನಸಿನ ಕಾರದ ನ್ಯಾನೋವನ್ನು ಅತಿಕಡಿಮೆ ಬೆಲೆಗೆ ಪರಿಚಯಿಸಲಾಗಿತ್ತು. ಆದರೆ, ನಾನಾ ಕಾರಣಗಳಿಗೆ 2018ರಲ್ಲಿ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ, ಟಾಟಾ ಮೋಟಾರ್ಸ್ ಹತ್ತಾರು ಕಾರುಗಳನ್ನು ಮಾರಾಟ ಮಾಡುತ್ತಿದೆ.
ಡಿಸೆಂಬರ್ 28, 1937ರಂದು ಜನಿಸಿದ ರತನ್ ಟಾಟಾ, ಮುಂಬೈನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ್ದರು. ಆ ನಂತರ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ಅವರು, ಕಾರ್ನೆಲ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದರು. ಭಾರತಕ್ಕೆ ಹಿಂದಿರುಗಿದ ಅವರು ಟಾಟಾ ಸಮೂಹವನ್ನು ಹಂತಹಂತವಾಗಿ ಮಾದರಿ ಉದ್ಯಮ ಸಂಸ್ಥೆಯಾಗಿ ಬೆಳೆಸಿದ್ದರು.
1991 ರಲ್ಲಿ ಜೆ.ಆರ್.ಡಿ. ಟಾಟಾ (J.R.D. Tata) ಟಾಟಾ ಸಮೂಹದ ಅಧ್ಯಕ್ಷ ಸ್ಥಾನದಿಂದ ನಿವೃತ್ತಿ ಪಡೆದಿದ್ದರು. ಅವರ ಉತ್ತರಾಧಿಕಾರಿಯಾಗಿ ರತನ್ ಟಾಟಾ ಅಧಿಕಾರ ವಹಿಸಿಕೊಂಡಾಗ ಹಲವಾರು ಸವಾಲುಗಳನ್ನು ಎದುರಿಸಬೇಕಾಗಿತ್ತು. ಅದನ್ನೆಲ್ಲ ಅವರು ಮೆಟ್ಟಿ ನಿಂತಿದ್ದರು. ರತನ್ ಟಾಟಾ ಅವರ ಸಾರಥ್ಯದಲ್ಲಿಯೇ ಟಾಟಾ ಮೋಟಾರ್ಸ್ ಐಷಾರಾಮಿ ಕಾರು ತಯಾರಕ ಕಂಪನಿ ‘ಜಾಗ್ವಾರ್ ಲ್ಯಾಂಡ್ ರೋವರ್’ನ್ನು ಸ್ವಾಧೀನಪಡಿಸಿಕೊಂಡಿತ್ತು.
ರತನ್ ಟಾಟಾ ಅವರು 2012 ರವರೆಗೆ ಟಾಟಾ ಸಮೂಹವನ್ನು ಯಶಸ್ವಿಯಾಗಿ ಮುನ್ನೆಡೆಸಿ, ನಿವೃತ್ತಿಯಾಗಿದ್ದರು. ಆ ಬಳಿಕ 2016 ರಿಂದ 2017ರ ಫೆಬ್ರವರಿವರೆಗೆ ಹಂಗಾಮಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅವಿವಾಹಿತರಾಗಿದ್ದ ಅವರು, ಟಾಟಾದ ಚಾರಿಟಬಲ್ ಟ್ರಸ್ಟ್‌ಗಳ ಮೂಲಕ ಸಮಾಜ ಸೇವೆಯಲ್ಲಿಯೂ ತೊಡಗಿಕೊಂಡಿದ್ದರು. ಭಾರತದ ಅತ್ಯುನ್ನತ ನಾಗರಿಕ ಗೌರವಗಳಾದ ಪದ್ಮ ವಿಭೂಷಣ ಹಾಗೂ ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದಿದ್ದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


