Greater Bengaluru News9: ಪೊಲೀಸ್ ಇಲಾಖೆಯಲ್ಲಿ ಶಿಸ್ತು ಮತ್ತು ನೈತಿಕತೆ ಕಾಪಾಡುವ ನಿಟ್ಟಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹಿರಿಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. ಯಾವುದೇ ಅಪರಾಧ ಚಟುವಟಿಕೆಯಲ್ಲಿ ಪೊಲೀಸ್ ಸಿಬ್ಬಂದಿ ಅಥವಾ ಅಧಿಕಾರಿಗಳು ಭಾಗಿಯಾಗಿರುವುದು ಪತ್ತೆಯಾದರೆ ಮುಲಾಜಿಲ್ಲದೆ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸದಾಶಿವನಗರದ ನಿವಾಸದಲ್ಲಿ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರು ಅಜಯ್ ಹಿಲೋರಿ, ವಂಶಿಕೃಷ್ಣ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ದರೋಡೆ ಪ್ರಕರಣದ ತನಿಖೆಗೆ ಸಂಬಂಧಿಸಿದ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 7.11 ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದ್ದು, ಇನ್ನೂ ಕೆಲ ಆರೋಪಿಗಳ ಶೋಧ ಕಾರ್ಯ ಮುಂದುವರೆದಿದೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಒಬ್ಬ ಪೊಲೀಸ್ ಇಲಾಖೆಯ ಸಿಬ್ಬಂದಿ ಸಹ ಭಾಗಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮೂರು ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ ಬಂಧನಗಳನ್ನು ಕೈಗೊಂಡಿವೆ. ಪ್ರಕರಣ ಭೇದಿಸಿದಕ್ಕಾಗಿ ನಗರ ಪೊಲೀಸ್ ಆಯುಕ್ತರು, ಜಂಟಿ ಆಯುಕ್ತರು, ಡಿಸಿಪಿಗಳು ಮತ್ತು 200ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಸಚಿವರು ಅಭಿನಂದನೆ ಸಲ್ಲಿಸಿದರು.
ಬೆಂಗಳೂರು ನಗರದಲ್ಲಿ ಸಂಭವಿಸಿದ ಈ ದರೋಡೆ ಘಟನೆ ನಗರಕ್ಕೆ ಕೆಟ್ಟ ಹೆಸರು ತರುವಂತಹುದಾಗಿದ್ದು, ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿತ್ತು ಎಂದು ಸಚಿವರು ಹೇಳಿದರು. ಈಗಾಗಲೇ 6.29 ಕೋಟಿ ರೂ. ಹಣ ವಶಪಡಿಸಿಕೊಳ್ಳಲಾಗಿದೆ. ಬಾಕಿ ಹಣ ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ.
ಘಟನೆಯ ಹಿನ್ನೆಲೆಯಲ್ಲಿ ಇಲಾಖೆಗೆ ಎಚ್ಚರಿಕೆ ನೀಡಿದ ಸಚಿವರು, ಮುಂದೆ ಯಾರೇ ಇಂತಹ ಕೃತ್ಯದಲ್ಲಿ ಭಾಗಿಯಾಗುವುದಾಗಿ ಕಂಡುಬಂದರೂ ನಿರ್ದಾಕ್ಷಿಣ್ಯ ಕ್ರಮ, ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಕೋರಮಂಗಲದಲ್ಲಿಯೂ ನಡೆದ ಮತ್ತೊಂದು ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.


