BBMP
Loading ...

112

Greater Bengaluru News9: ಆಪತ್ತು ಎದುರಾದಾಗ ಠಾಣೆಯ ವ್ಯಾಪ್ತಿಯ (Jurisdiction) ನೆಪ ಹೇಳಿ ಪೊಲೀಸರು ಸ್ಥಳಕ್ಕೆ ತಲುಪಲು ವಿಳಂಬ ಮಾಡುತ್ತಿದ್ದ ಹಳೆಯ ಚಾಳಿಗೆ ಬೆಂಗಳೂರು ಪೊಲೀಸ್ ಇಲಾಖೆ ಸಂಪೂರ್ಣ ತೆರೆ ಎಳೆದಿದೆ.

ಇನ್ಮುಂದೆ ನಾಗರಿಕರಿಂದ ‘112’ ತುರ್ತು ಸಹಾಯವಾಣಿಗೆ ಕರೆ ಬಂದ ತಕ್ಷಣ, ಗಡಿ ಗೊಂದಲಗಳನ್ನು ಬದಿಗೊತ್ತಿ ಘಟನಾ ಸ್ಥಳಕ್ಕೆ ಅತ್ಯಂತ ಸಮೀಪದಲ್ಲಿರುವ ಪೊಲೀಸ್ ತಂಡ ತಕ್ಷಣವೇ ಧಾವಿಸಲಿದೆ.

ಜೀವ ರಕ್ಷಕವಾಗಿ ಬದಲಾದ 112 ತುರ್ತು ಸೇವೆ
ಸಾರ್ವಜನಿಕರ ಜೀವ ಮತ್ತು ಆಸ್ತಿಯ ರಕ್ಷಣೆಯಲ್ಲಿ 112 ಸಹಾಯವಾಣಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ಕಳೆದ ಕೇವಲ ಆರು ತಿಂಗಳ ಅಂಕಿಅಂಶಗಳನ್ನು ಗಮನಿಸಿದರೆ, ಈ ಸೇವೆಯ ಮೂಲಕ ನೂರಾರು ಜೀವಗಳನ್ನು ರಕ್ಷಿಸಲಾಗಿದೆ. ಮನೆ ತೊರೆದು ನಾಪತ್ತೆಯಾಗಿದ್ದ ಸುಮಾರು 700 ಜನರನ್ನು ಕ್ಷೇಮವಾಗಿ ಪತ್ತೆಹಚ್ಚಿ ಕುಟುಂಬದವರ ವಶಕ್ಕೆ ಒಪ್ಪಿಸಲಾಗಿದೆ. ಅಷ್ಟೇ ಅಲ್ಲದೆ, ಅತ್ಯಂತ ಕಷ್ಟದ ಹಂತದಲ್ಲಿದ್ದ 60 ಮಂದಿಯನ್ನು ಆತ್ಮಹತ್ಯೆಯ ನಿರ್ಧಾರದಿಂದ ಹಿಂದೆಸರಿಯುವಂತೆ ಮಾಡಿ ಜೀವ ಉಳಿಸಲಾಗಿದೆ. ಮಾನವ ಕಳ್ಳಸಾಗಣೆಯಂತಹ ಭೀಕರ ಜಾಲಗಳಿಗೆ ತಡೆ ಒಡ್ಡುವ ಜೊತೆಗೆ, 181 ಹಿರಿಯರು ಹಾಗೂ 211 ಮಕ್ಕಳನ್ನು ವಿವಿಧ ಅಪಾಯಗಳಿಂದ ರಕ್ಷಿಸಲಾಗಿದೆ.

12 ಭಾಷೆಗಳ ಸೌಲಭ್ಯ ಹಾಗೂ ‘ಚೀತಾ’ ಬೈಕ್‌ಗಳ ಭರ್ಜರಿ ಎಂಟ್ರಿ
ಯಾವುದೇ ಮೂಲೆಯ ಜನರಿಗೂ ನೆರವು ಸಿಗಲಿ ಎಂಬ ಉದ್ದೇಶದಿಂದ 112 ಸಹಾಯವಾಣಿಯಲ್ಲಿ ಬರೋಬ್ಬರಿ 12 ಭಾಷೆಗಳಲ್ಲಿ ಸಂವಹನ ನಡೆಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಕರೆ ಬಂದ ಕೇವಲ 6.5 ನಿಮಿಷಗಳ ಸರಾಸರಿ ಅವಧಿಯಲ್ಲಿ ಘಟನಾ ಸ್ಥಳಕ್ಕೆ ಪೊಲೀಸರು ತಲುಪುವ ಗುರಿ ಹೊಂದಲಾಗಿದೆ. ಇದಕ್ಕಾಗಿ ನಗರದ ಕಿರಿದಾದ ರಸ್ತೆಗಳಲ್ಲೂ ತಕ್ಷಣ ಧಾವಿಸಲು 65 ಅತ್ಯಾಧುನಿಕ ‘ಚೀತಾ’ (Cheetah) ದ್ವಿಚಕ್ರ ವಾಹನಗಳನ್ನು ರಸ್ತೆಗೆ ಇಳಿಸಲಾಗಿದೆ.

ಕರ್ತವ್ಯ ಲೋಪ ಎಸಗಿದರೆ ಜೈಲು ಹಾದಿ: ಇಲಾಖೆ ಖಡಕ್ ಎಚ್ಚರಿಕೆ
ತುರ್ತು ಸಂದರ್ಭದಲ್ಲಿ ಬರುವ ಕರೆಗಳಿಗೆ ಸರಿಯಾಗಿ ಸ್ಪಂದಿಸದಿದ್ದರೆ ಅಥವಾ ಠಾಣಾ ವ್ಯಾಪ್ತಿಯ ನೆಪ ಹೇಳಿ ಜಾರಿಕೊಳ್ಳಲು ಯತ್ನಿಸುವ ಸಿಬ್ಬಂದಿಯ ವಿರುದ್ಧ ಕಟ್ಟುನಿಟ್ಟಿನ ಶಿಸ್ತುಕ್ರಮ ಹಾಗೂ ಕಾನೂನು ಪ್ರಕ್ರಿಯೆ ಜರುಗಿಸಲಾಗುವುದು ಎಂದು ಉನ್ನತಾಧಿಕಾರಿಗಳು ಎಚ್ಚರಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಮತ್ತು ಪ್ರತಿಯೊಂದು ಕರೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎಲ್ಲಾ ಠಾಣೆಗಳ ಸಿಬ್ಬಂದಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.

Leave a Reply

Your email address will not be published. Required fields are marked *