Greater Bengaluru News9 : ಪೂರ್ಣಗೊಂಡ ಕಟ್ಟಡಕ್ಕೆ ಒಮ್ಮೆ ಸ್ವಾಧೀನಾನುಭವ ಪ್ರಮಾಣಪತ್ರ (Occupancy Certificate–OC) ವಿತರಿಸಿದ ಬಳಿಕ, ಫ್ಲ್ಯಾಟ್ ಸ್ವಾಧೀನ ಪಡೆಯಲು ಗೃಹ ಖರೀದಿದಾರರು ವಿಳಂಬ ಮಾಡಿದರೆ, ಆ ವಿಳಂಬಕ್ಕೆ ಬಿಲ್ಡರ್‌ರಿಂದ ಬಡ್ಡಿ ಕೇಳುವ ಹಕ್ಕು ಇರುವುದಿಲ್ಲ ಎಂದು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಮೇಲ್ಮನವಿ ನ್ಯಾಯಮಂಡಳಿ (ಕೆ-ರೀಟ್) ಮಹತ್ವದ ತೀರ್ಪು ನೀಡಿದೆ.
ಈ ಕುರಿತು 31 ಪುಟಗಳ ಸವಿಸ್ತಾರ ಆದೇಶ ನೀಡಿರುವ ನ್ಯಾಯಮಂಡಳಿ, ಒಸಿ ನೀಡುವುದು ಕಟ್ಟಡ ಕಾಮಗಾರಿ ಪೂರ್ಣಗೊಂಡಿರುವುದರ ಅಧಿಕೃತ ಸಂಕೇತ ಎಂದು ಸ್ಪಷ್ಟಪಡಿಸಿದೆ. ಒಸಿ ವಿತರಿಸಿದ ನಂತರ ಬಿಲ್ಡರ್ ಖರೀದಿದಾರರಿಗೆ ಮಾಹಿತಿ ನೀಡಿದ ಕ್ಷಣದಿಂದಲೇ ಫ್ಲ್ಯಾಟ್ ಸ್ವಾಧೀನ ಪಡೆಯುವುದು ಹಂಚಿಕೆದಾರರ ಜವಾಬ್ದಾರಿಯಾಗಿದೆ ಎಂದು ತಿಳಿಸಿದೆ.
ಜೆ.ಪಿ.ನಗರದ ವೀಣಾ ರವಿಶಂಕರ್ ಪರವಾಗಿ ಕೆ-ರೇರಾ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ಪಾರ್ಕ್ ವೆಸ್ಟ್ ವಸತಿ ಯೋಜನೆಯ ಮೇಪಲ್ ಟವರ್ ನಿರ್ಮಿಸಿದ ರಿಲೇಷನ್ಶಿಪ್ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಾಂಗ ಸದಸ್ಯ ಸಂತೋಷ್ ಕುಮಾರ್ ಶೆಟ್ಟಿ ಹಾಗೂ ಆಡಳಿತ ಸದಸ್ಯ ಮಹೇಂದ್ರ ಜೈನ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ನ್ಯಾಯಮಂಡಳಿ ತನ್ನ ಆದೇಶದಲ್ಲಿ,“ಒಸಿ ವಿತರಿಸಿದ ಬಳಿಕ ಕಟ್ಟಡದಲ್ಲಿ ದೋಷಗಳು ಅಥವಾ ನ್ಯೂನತೆಗಳಿದ್ದರೆ, ಅದಕ್ಕೆ ಪ್ರತ್ಯೇಕವಾಗಿ ಪರಿಹಾರ ಕೇಳುವ ಹಕ್ಕು ಗೃಹ ಖರೀದಿದಾರರಿಗೆ ಇದೆ. ಆದರೆ ಅದೇ ಕಾರಣ ಮುಂದಿಟ್ಟುಕೊಂಡು ಫ್ಲ್ಯಾಟ್ ಸ್ವಾಧೀನವನ್ನು ಮುಂದೂಡಲಾಗದು. ಹೀಗೆ ವಿಳಂಬ ಮಾಡಿದ ಬಳಿಕ ಸ್ವಾಧೀನ ತಡವಾಗಿದೆ ಎಂದು ಬಡ್ಡಿ ಕೇಳಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಪ್ರಕರಣದಲ್ಲಿ ಪ್ರಾಥಮಿಕ ತಪಾಸಣಾ ವರದಿಯಲ್ಲಿ ಹಲವು ದೋಷಗಳನ್ನು ಗುರುತಿಸಲಾಗಿತ್ತು. ಆದರೆ ಅವುಗಳನ್ನು ಸಮರ್ಪಕವಾಗಿ ಸರಿಪಡಿಸಲಾಗಿದೆ ಎಂದು 2024ರ ಫೆಬ್ರವರಿ 6ರಂದು ಸಲ್ಲಿಸಿದ ವರದಿ ಸ್ಪಷ್ಟಪಡಿಸಿದೆ. ಹೀಗಾಗಿ ಬಿಲ್ಡರ್ 2021ರ ಮಾರ್ಚ್ 31ರಿಂದ 2024ರ ಫೆಬ್ರವರಿ 6ರವರೆಗಿನ ಅವಧಿಗೆ ಮಾತ್ರ ಬಡ್ಡಿ ಪಾವತಿಸಬೇಕು ಎಂದು ನ್ಯಾಯಮಂಡಳಿ ಆದೇಶಿಸಿದೆ.
ಕಾರ್ಪೆಟ್ ಏರಿಯಾ ಕಡಿಮೆಯಾಗಿದೆ ಎಂಬ ಆರೋಪವಿದ್ದಲ್ಲಿ, ಅದಕ್ಕಾಗಿ ಪ್ರತ್ಯೇಕ ದೂರು ಸಲ್ಲಿಸಿ ಪರಿಹಾರ ಪಡೆಯಬಹುದಾಗಿದೆ ಎಂದು ಹೇಳಿರುವ ನ್ಯಾಯಮಂಡಳಿ, ಪ್ರಮೋಟರ್ ಕೂಡಲೇ ಫ್ಲ್ಯಾಟ್ ಹಸ್ತಾಂತರಿಸಬೇಕು ಎಂದು ನಿರ್ದೇಶನ ನೀಡಿದೆ.


