Greater Bengaluru News9 : ಮಕರ ಸಂಕ್ರಾಂತಿ ದಿನವಾದ ಇಂದು (ಜನವರಿ 15) ಬೆಂಗಳೂರಿನ ಐತಿಹಾಸಿಕ ಗವಿ ಗಂಗಾಧರೇಶ್ವರ ದೇಗುಲ ಗರ್ಭಗುಡಿಯನ್ನು ಸೂರ್ಯ ರಶ್ಮಿ ಸ್ಪರ್ಶಿಸಿತು. ಮಧ್ಯಾಹ್ನದಿಂದ ದೇವಾಲಯಕ್ಕೆ ಆಗಮಿಸಿದ್ದ ಅನೇಕ ಭಕ್ತಾಧಿಗಳು ಸಂಜೆ ಸೂರ್ಯ ರಶ್ಮಿಯನ್ನು ಕಣ್ತುಂಬಿಕೊಂಡರು. ಸೂರ್ಯ ರಶ್ಮಿ ಸ್ಪರ್ಶಿಸಿದ ವೇಳೆ ಪೂರ್ಣವಾಧ್ಯಗಳೊಂದಿಗೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ಗುರುವಾರ ಮಕರ ಸಂಕ್ರಾಂತಿ ಹಾಗೂ ಸೂರ್ಯ ರಶ್ಮಿ ದೇಗುಲ ಪ್ರವೇಶ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ವಿವಿಧ ಪೂಜೆಗಳು, ಮಂಗಳಾರತಿಗಳು ನಡೆದವು. ಮಧ್ಯಾಹ್ನ ನಂತರ ನಾಗರಿಕರು ದೇಗುಲದ ಹತ್ತಿರ ಜಮಾಯಿಸಿದರು. ಸಂಜೆ 5.2ಕ್ಕೆ ಸೂರ್ಯ ರಶ್ಮಿ ಕಿರಣಗಳು ಗವಿ ಗಂಗಾಧರೇಶ್ವರನ ಪಾದ ಸ್ಪರ್ಶಿಸಿದವು. ಅವಧಿಗೂ ಕೊಂಚ ಮೊದಲು ಸೂರ್ಯ ಕಿರಣಗಳು ಸ್ಪರ್ಶವಾದವು. ಈ ವೇಳೆ ಈಶ್ವರನಿಗೆ ಕ್ಷೀರಾಭಿಷೇಕಗಳು ವಿಶೇಷ ಪೂಜೆಗಳು ನಡೆದವು.
ಮಕರ ಸಂಕ್ರಾಂತಿಯಂದು ಸೂರ್ಯ ದಕ್ಷಿಣ ಪಥದಿಂದ ಉತ್ತರಪಥ ಸಂಚಲನ ಮಾಡುತ್ತಾನೆ. ಈ ವೇಳೆ ಸೂರ್ಯನ ಕಿರಣಗಳು ಗವಿ ಗಂಗಾಧರೇಶ್ವರನ ಗರ್ಭಗುಡಿ ಪ್ರವೇಶಿಸುತ್ತವೆ. ಸುಮಾರು ಎರಡು ಮೂರು ನಿಮಿಷಗಳ ಅಂತರದಲ್ಲಿ ಈ ಪ್ರಕ್ರಿಯೆ ಕಣ್ತುಂಬಿಕೊಳ್ಳಲು ಅಪಾರ ಭಕ್ತ ಗಣ ದೇವಾಲಯಕ್ಕೆ ಆಗಮಿಸಿದ್ದರು. ಇದು ಪ್ರತಿವರ್ಷ ಸಂಕ್ರಾಂತಿಯಂದು ನಡೆಯುವ ಸಂಭ್ರಮವಾಗಿದೆ.
ಈ ವರ್ಷವು ದೇವಾಲಯ ಮುಂದೆ ಪೆಂಡಾಲ್ ಹಾಕಿ, ದೊಡ್ಡ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿತ್ತು. ನಿರಂತರವಾಗಿ ದೇವಾಲಯಕ್ಕೆ ಬಂದ ಭಕ್ತರು ಆವರಣದಲ್ಲಿ ಕೂತು ಪೂಜೆಗಳನ್ನು, ಸಂಜೆ ಸೂರ್ಯರಶ್ಮಿ ಸ್ಪರ್ಶವನ್ನು ವೀಕ್ಷಿಸಿದರು. ಗುರುವಾರ ಜನ ಜಂಗುಳಿ ಕಂಡು ಬಂತು. ಎಲ್ಲಿ ನೋಡಿದರೂ ಸಾಂಪ್ರದಾಯಿಕ ಉಡುಗೆಯಲ್ಲಿ ಮಹಿಳೆಯರು, ಪುರುಷರು ಆಗಮಿಸಿದ್ದು ಕಂಡು ಬಂತು. ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದಿದ್ದು ಸಾಮಾನ್ಯವಾಗಿತ್ತು.


