Greater Bengaluru News9 : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಈ ಹಿನ್ನೆಲೆ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ವೈದ್ಯರ ಚಿಕಿತ್ಸೆ ಬಳಿಕ ದೇವೇಗೌಡರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ.
ಇಂದು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ರವರು ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಹೆಚ್.ಡಿ ದೇವೇಗೌಡ ರವರನ್ನು ಮಣಿಪಾಲ್ ಆಸ್ಪತ್ರೆಯಲ್ಲಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. 92 ವರ್ಷದ ದೇವೇಗೌಡರ ಆರೋಗ್ಯದಲ್ಲಿ ಸ್ವಲ್ಪ ಮಟ್ಟದ ಬದಲಾವಣೆಯುಂಟಾದ ಪರಿಣಾಮ, ಅವರನ್ನು ಹಳೇ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಬಿಜೆಪಿ-ಜೆಡಿಎಸ್ ಮೈತ್ರಿ ಘೋಷಣೆ
ಅಕ್ಟೋಬರ್ 3 ರಂದು ದೇವೇಗೌಡರವರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುಂದುವರೆಯುತ್ತದೆ. ಇದು ವಿಧಾನಸಭೆ, ಸಂಸತ್ತು, ಜಿಲ್ಲಾ ಪಂಚಾಯಿತಿ, ನಗರ ಸಂಸ್ಥೆಗಳು ಸೇರಿದಂತೆ ಎಲ್ಲಾ ಭವಿಷ್ಯದ ಚುನಾವಣೆಗಳಿಗೆ ವಿಸ್ತರಿಸುತ್ತದೆ ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿಯೊಂದಿಗಿನ ಸಂಬಂಧವು ಬದಲಾಗುವುದಿಲ್ಲ. ಈ ಮೈತ್ರಿಯ ಮೂಲಕ ಜೆಡಿಎಸ್ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬಲಪಡಿಸಿಕೊಳ್ಳುವ ಗುರಿ ಹೊಂದಿದೆ ಎಂದು ದೇವೇಗೌಡರು ಹೇಳಿದ್ದರು.
ಜೆಡಿಎಸ್ ರಾಜ್ಯ ಘಟಕ ಹೇಳಿದ್ದೇನು?
ಆತ್ಮೀಯ ಕಾರ್ಯಕರ್ತ ಮತ್ತು ಅಭಿಮಾನಿ ಬಂಧುಗಳೇ, ನೀವುಗಳು ಆತಂಕಪಡುವ ಆಗತ್ಯವಿಲ್ಲ. ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕರಾದ ಹೆಚ್.ಡಿ. ದೇವೇಗೌಡರವರು ಚೇತರಿಸಿಕೊಂಡು ಆರೋಗ್ಯವಾಗಿದ್ದಾರೆ. ಇನ್ನೂ ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ನಾಡಿನ ಜನರ ಹಾರೈಕೆ, ಪ್ರೀತಿ, ಅವರ ಮೇಲೆ ಇರಲಿ ಎಂದು ಜೆಡಿಎಸ್ನ ರಾಜ್ಯ ಘಟಕ ಹೇಳಿದೆ.


