Greater Bengaluru News9 : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆ ನಡೆಯಿತು. ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವರು ಹಾಜರಿದ್ದರು. ಆದರೆ ಕಾಂಗ್ರೆಸ್ ಸಚಿವರೇ ಸಭೆಗೆ ಗೈರಾಗಿದ್ದರು. ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಶಾಸಕ ಪ್ರಿಯಾ ಕೃಷ್ಣ ಸಭೆಗೆ ಗೈರಾಗಿದ್ದರು. ಇನ್ನು ಬೆಂಗಳೂರು ಭಾಗದ ಬಿಜೆಪಿ ಶಾಸಕರು, ಸಂಸದರು ಜಿಬಿಎ ಮೊದಲ ಸಭೆ ತಿರಸ್ಕರಿಸಿದ್ದರು. 75 ಜಿಬಿಎ ಸದಸ್ಯರ ಪೈಕೆ ಸಭೆಗೆ ಹಾಜರಾಗಿದ್ದು ಕೇವಲ 35 ಜನ. ಉಳಿದಂತೆ 40 ಜನ ಸದಸ್ಯರು ಸಭೆಗೆ ಗೈರಾಗಿದ್ದರು. ಇನ್ನು ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯ್ತು.
ಜಿಬಿಎ ಮೊದಲ ಸಭೆಯ ನಿರ್ಣಯಗಳು
- ಬಿಡಿಎಗೆ ಇದ್ದ ನಕ್ಷೆ ಮಂಜೂರಾತಿ ಅಧಿಕಾರ ಇನ್ಮುಂದೆ ಜಿಬಿಎ ವ್ಯಾಪ್ತಿಗೆ
- ಟಿಡಿಆರ್ ನೀಡುವ ಅಧಿಕಾರನೂ ಇನ್ಮುಂದೆ ಜಿಬಿಎ ವ್ಯಾಪ್ತಿಗೆ
- ಐದು ಪಾಲಿಕೆಗಳ ಬಜೆಟ್ ತೀರ್ಮಾನ ಮಾಡಲಾಗಿದೆ
- ಬೆಸ್ಕಾಂ, ಬಿಎಂಟಿಸಿ, ಅಗ್ನಿ ಶಾಮಕ ದಳ, ಇನ್ಮುಂದೆ ಜಿಬಿಎ ವ್ಯಾಪ್ತಿಗೆ
- ಕೇಂದ್ರ ಸಂಯೋಜನಾ ಸಮಿತಿ ರಚನೆಗೆ ತೀರ್ಮಾನ (ಇಲಾಖೆಗಳ ನಡುವಿನ ಸಮನ್ವಯತೆಗೆ)
- ಇಲಾಖೆಗಳ ನಡುವೆ ಪ್ರತಿ ತಿಂಗಳು ಸಭೆ ನಡೀಬೇಕು
- ಜಿಬಿಎ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ
- ಐದು ಪಾಲಿಕೆಗಳಿಗೆ ಐದು ಕಚೇರಿ ಅಂತಿಮ
- ಸೆಂಟ್ರಲ್ ಪಾಲಿಕೆ ಜಿಬಿಎ ಕೇಂದ್ರ ಕಚೇರಿಯಲ್ಲೇ ಇರಲಿದೆ
- ಹೊಸ ಪಾಲಿಕೆ ಕಚೇರಿ ಕಟ್ಟಡಗಳು ಒಂದೇ ರೀತಿ ಇರಬೇಕೆಂದು ತೀರ್ಮಾನಿಸಲಾಗಿದೆ
- ಒಂದೇ ಮಾದರಿಯಲ್ಲಿ ಕಚೇರಿ ನಿರ್ಮಾಣ ಮಾಡಲು ತೀರ್ಮಾನ
- ಹೊಸದಾಗಿ ಐದು ಪಾಲಿಕೆಗಳಿಗೆ ಕಚೇರಿ ನಿರ್ಮಾಣ
ಬಿಜಿಎ ಸಭೆಯ ಮುಖ್ಯಾಂಶಗಳು
- 10 ಕೋಟಿವರೆಗೂ ಕೌನ್ಸಿಲ್ ಅನುಮೋದನೆಗೆ ಅವಕಾಶ
- ಆಯುಕ್ತರಿಗೆ 1 ಕೋಟಿಯಿಂದ 3 ಕೋಟಿ ಅನುಮೋದನೆಗೆ ಅವಕಾಶ
- ತುರ್ತು ಕಾಮಗಾರಿಗಳಿಗೆ ಅನುಮೋದನೆ ನೀಡಲು ಈ ತೀರ್ಮಾನ
- ಸ್ಥಾಯಿ ಸಮಿತಿಗಳಿಗೆ ಐದು ಕೋಟಿವರೆಗೂ ಅನುಮೋದನೆ ನೀಡಲು ಅವಕಾಶ
- ಒಟ್ಟು ಐದು ಪಾಲಿಕೆಯಲ್ಲಿ 25 ಕೋಟಿ ವರೆಗೆ ಖರ್ಚು ಮಾಡಲು ಅವಕಾಶ
ಜಿಬಿಎ ಸಭೆಯಲ್ಲಿ ಕೈ ಶಾಸಕರ ಮನವಿ
ಇನ್ನು ಜಿಬಿಎ ಮೊದಲ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಅನುದಾನದ ಬೇಡಿಕೆ ಇಟ್ರು. ಕಾಂಗ್ರೆಸ್ ಕ್ಷೇತ್ರದ ಅಭಿವೃದ್ಧಿಗೆ ಸೂಕ್ತ ಅನುದಾನ ನೀಡಿ ಎಂದು ಮನವಿ ಮಾಡಿದ್ರು. ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವಂತ ನಗರ ಪಾಲಿಕೆಗಳಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಹೀಗಾಗಿ ಶೀಘ್ರವಾಗಿ ನಗರ ಪಾಲಿಕೆಗಳಲ್ಲಿ ಖಾಲಿ ಇರುವ ಹುದ್ದೆಗಳು ತುಂಬಿಸಿ ಅಂತ ಮನವಿ ಮಾಡಿದ್ರು. ನಗರ ಪಾಲಿಕೆ ಚುನಾವಣೆ ಯಾವಾಗ ಅಂತ ಕಾರ್ಯಾಕರ್ತರು ಒತ್ತಡ ತರ್ತಿದ್ದಾರೆ. ರಸ್ತೆಗುಂಡಿಗಳು, ಮಳೆಗಾಲದ ಸಮಸ್ಯೆಗಳನ್ನು ಸೂಕ್ತವಾಗಿ ನಿರ್ವಹಣೆ ಆಗಬೇಕು ಅಂತ ಸಭೆಯ ಗಮನಕ್ಕೆ ತಂದ್ರು.
ಬೆಂಗಳೂರು ನಗರಕ್ಕೆ ಇದು ಐತಿಹಾಸಿಕ ದಿನ
ಇನ್ನು ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್, ಇಡಿ ಬೆಂಗಳೂರು ನಗರಕ್ಕೆ ಇದೊಂದು ಐತಿಹಾಸಿಕ ದಿನ ಎಂದರು. ನಮ್ಮ ಸರ್ಕಾರ ಬಂದ ಮೇಲೆ ಉತ್ತಮ ಆಡಳಿತ ಕೊಡುವ ಭರವಸೆ ಕೊಟ್ಟಿದ್ವಿ. ಅದರ ಹಿನ್ನೆಲೆ ಜಿಬಿಎ ಮಾಡಿ ಆಡಳಿತದಲ್ಲಿ ಈ ಮೂಲಕ ಸುಧಾರಣೆ ಮಾಡಿದ್ದೇವೆ ಎಂದರು. ಜಿಬಿಎ ಜಾರಿಗೆ ತರುವಾಗ ಆಡಳಿತ ಹಾಗೂ ವಿರೋಧ ಪಕ್ಷ ಚರ್ಚೆ ಮಾಡಿ ಜಾರಿಗೆ ತಂದ್ವಿ ಅಂತ ಸ್ಪಷ್ಟಪಡಿಸಿದ್ರು.
ಕಾನೂನು ಚೌಕಟ್ಟಿನಲ್ಲಿಯೇ ಜಿಬಿಎ
ಜಿಬಿಎ ಮಾಡಿರೋದು ಕಾನೂನಿನ ಚೌಕಟ್ಟಿನಲ್ಲೇ ಹೊರತು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ. ಜಿಬಿಎ ಅಸ್ತಿತ್ವಕ್ಕೆ ಬರೋದಕ್ಕೆ ಬಿಎಸ್ ಪಾಟಿಲ್, ಸಿದ್ದಯ್ಯ ಹಾಗೂ ರವಿಚಂದ್ರನ್ ನವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದ ಸಮಿತಿ ಕೂಡ ಪೂರಕವಾಗಿ ಕೆಲಸ ಮಾಡಿದೆ. ಪಾಲಿಕೆ ಅಧಿಕಾರಿಗಳು ಕೂಡ ನಮ್ಮ ಕನಸಿಗೆ ಬೆಂಬಲ ಕೊಟ್ಟು ಕೆಲಸ ಮಾಡಿದ್ದಾರೆ ಅಂತ ಡಿಕೆಶಿ ಸ್ಮರಿಸಿದ್ರು.
ಬಿಜೆಪಿ ನಾಯಕರಿಗೆ ಡಿಕೆಶಿ ಸವಾಲು
ಜಿಬಿಎ ಮೊದಲ ಸಭೆಗೆ ಗೈರಾದ ಬಿಜೆಪಿ ನಾಯಕರಿಗೆ ಡಿಸಿಎಂ ಡಿಕೆಶಿ ಸವಾಲು ಹಾಕಿದರು. ಜಿಬಿಎಗೆ ವಿರೋಧ ವ್ಯಕ್ತಪಡಿಸೋರು ಚುನಾವಣೆಗೆ ನಿಲ್ಲಲ್ಲ ಅಂತ ಘೋಷಣೆ ಮಾಡಲಿ. ಜಿಬಿಎ ಅವರಿಗೆ ಬೇಡ ತಾನೆ? ಹಾಗಾದರೆ ಅವರು ಎಲೆಕ್ಷನ್‌ಗೆ ನಿಲ್ಲಲ್ಲ ಅಂತ ಹೇಳಲಿ ನೋಡುವಾ? ಅಂತ ಸವಾಲು ಹಾಕಿದ್ರು.


