ಬೆಂಗಳೂರು: ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ವತಿಯಿಂದ ಜೂನ್ 17 ರಂದು ಬೆಳಿಗ್ಗೆ 10:30 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಮತ್ತು ಶಾಸಕ ಕೆ. ಗೋಪಾಲಯ್ಯ (K Gopalaiah) ಅವರು ತಿಳಿಸಿದ್ದಾರೆ.
ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪರಾಜಿತ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಈ ಪತ್ರಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 10 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ದುರ್ಘಟನೆಯು ಇತಿಹಾಸದಲ್ಲಿ ಈ ರಾಜ್ಯಕ್ಕೆ ಒಂದು ಕಪ್ಪು ಚುಕ್ಕೆ ಎಂದು ಅವರು ವಿಶ್ಲೇಷಿಸಿದರು. ಕಾಲ್ತುಳಿತದಿಂದ 11 ಜನರು ಸಾವಿಗೀಡಾಗಿದ್ದು, ಇದು ರಾಜ್ಯಕ್ಕೆ ದೊಡ್ಡ ಕಳಂಕ ಎಂದು ಗೋಪಾಲಯ್ಯ ತಿಳಿಸಿದರು.
ಆರ್‌ಸಿಬಿ (RCB) ಗೆದ್ದ ಸಂದರ್ಭದಲ್ಲಿ ಇಡೀ ರಾಜ್ಯಾದ್ಯಂತ ಪೊಲೀಸ್ ಭದ್ರತೆಯಲ್ಲಿ ಅಭಿಮಾನಿಗಳು ಸಂಭ್ರಮಿಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರವು ಗೌರವ ಕೊಡುವ ಸಂಬಂಧ ಎರಡು ಕಾರ್ಯಕ್ರಮಗಳನ್ನು ಏರ್ಪಡಿಸಿತ್ತು. ಈ ಕಾರ್ಯಕ್ರಮಗಳು ಬೇಡವೆಂದು ಪೊಲೀಸ್ ಇಲಾಖೆ ಪತ್ರದ ಮೂಲಕ ತಿಳಿಸಿದರೂ ಸಿಎಂ ರವರು ಕಾರ್ಯಕ್ರಮ ಮಾಡಬೇಕು. ಆಟಗಾರರಿಗೆ ಗೌರವ ಕೊಡಬೇಕು ಎಂದು ಸೂಚಿಸಿದರು. ಅದು ಅವರಿಗೆ ಗೌರವ ಕೊಡುವ ಕಾರ್ಯಕ್ರಮವಾಗಿರಲಿಲ್ಲ. ಆಟಗಾರರನ್ನು ಅವಮಾನಿಸುವ ಕಾರ್ಯಕ್ರಮವಾಗಿತ್ತು ಎಂದು ಗೋಪಾಲಯ್ಯ ಟೀಕಿಸಿದರು.
ಕಾಲ್ತುಳಿತವನ್ನು ಮರೆಮಾಚುವ ಸಲುವಾಗಿ ಮತ್ತೊಮ್ಮೆ ಜಾತಿಗಣತಿಯನ್ನು ಮಾಡಲು ಸರ್ಕಾರ ನಿರ್ಧರಿಸಿದೆ. ಅದನ್ನು ನಾವು ಸ್ವಾಗತ ಮಾಡುತ್ತೇವೆ. ಆದರೆ ಹಿಂದಿನ ಜನಗಣತಿಗೆ ರಾಜ್ಯದ ಜನರ ತೆರಿಗೆ ಹಣದಿಂದ 167 ಕೋಟಿ ಹಣ ವೆಚ್ಚ ಭರಿಸಿದ್ದು, ಅದರ ಲೆಕ್ಕವನ್ನು ಸಾರ್ವಜನಿಕರಿಗೆ ನೀಡಬೇಕು ಎಂದು ಕೆ. ಗೋಪಾಲಯ್ಯ ಅವರು ಆಗ್ರಹಿಸಿದರು.
ಒಂದು ಲಕ್ಷಕ್ಕಿಂತ ಹೆಚ್ಚಿನ ಅಭಿಮಾನಿಗಳು ಸೇರಿದ್ದರೂ ವಿಧಾನಸೌಧದ ಬಳಿ ಆಯೋಜಿಸಿದ್ದ ಕಾರ್ಯಕ್ರಮವನ್ನು ನೋಡಲು ಆಗಲಿಲ್ಲ. ಇದೊಂದು ಪ್ರಚಾರಕ್ಕೆಂದೇ ಮಾಡಿರುವ ಕಾರ್ಯಕ್ರಮವಾಗಿದೆ ಎಂದು ಅವರು ಆರೋಪಿಸಿದರು.
ಮಧ್ಯಾಹ್ನ ಸುಮಾರು 3 ಗಂಟೆಗೆ ಕಾಲ್ತುಳಿತದಿಂದ ಒಂದು ಸಾವಾಗಿದ್ದು, ಮುಖ್ಯಮಂತ್ರಿಗಳಿಗೆ ಆ ವಿಷಯವು ಸಂಜೆ 5 ಗಂಟೆಗೆ ತಿಳಿಯುತ್ತದೆ ಎಂದರೆ ಹೇಗೆ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದರು. ವಿಧಾನ ಸೌಧದ ಮುಂದೆ ಕಾರ್ಯಕ್ರಮ ಆಯೋಜಿಸುವ ಮೊದಲು ಎಲ್ಲಾ ಸಿದ್ಧತೆ ಮಾಡಿಕೊಂಡು ಕಾರ್ಯಕ್ರಮವನ್ನು ಆಯೋಜಿಸುವ ಬದಲು ತರಾತುರಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಈ ಮೂಲಕ 11 ಜನರ ಬಲಿಯನ್ನು ಕಾಂಗ್ರೆಸ್ ಸರ್ಕಾರವು ಪಡೆದಿದೆ ಎಂದು ಅವರು ಆರೋಪಿಸಿದರು. ಸರ್ಕಾರದ ವೈಫಲ್ಯಗಳನ್ನು ಮರೆಮಾಚುವ ಸಲುವಾಗಿ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಭದ್ರತೆಯ ವೈಫಲ್ಯವೆಂದು ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ಗೋಪಾಲಯ್ಯ ಆಕ್ಷೇಪಿಸಿದರು.
ಮಟನ್ ತರಲು ಹೋದ ಯುವಕನ ಮೇಲೆ ಬಿದ್ದ ಮರದ ಕೊಂಬೆ; ಅಪ್ಪನ ಹುಟ್ಟುಹಬ್ಬದ ದಿನವೇ ಮಗನ ಸ್ಥಿತಿ ಗಂಭೀರ


