ಬೆಂಗಳೂರು: ರಾಮನಗರದ ಜಿಲ್ಲಾ ದಿಶಾ ಸಮಿತಿಯಲ್ಲಿ ಜೆಡಿಎಸ್ ಮುಖಂಡ ಎಸ್. ಶಿವಣ್ಣ ನಾಗರಕಲ್ಲು ದೊಡ್ಡಿ ಅವರಿಗೆ ಸ್ಥಾನ ಲಭಿಸಿದೆ.
ಜೆಡಿಎಸ್ ಮತ್ತು ಬಿಜೆಪಿ ವತಿಯಿಂದ ದಿಶಾ ಸಮಿತಿಯ ಸದಸ್ಯ ಸ್ಥಾನ ನೀಡದ್ದಕ್ಕೆ ಎಸ್. ಶಿವಣ್ಣ ಅವರು ಮಾಜಿ ಪ್ರಧಾನಿ ದೇವೇಗೌಡರಿಗೆ, ಕೇಂದ್ರ ಸಚಿವ ಕುಮಾರಣ್ಣನವರಿಗೆ ಹಾಗೂ ರಾಮನಗರ ಸಂಸದರಾದ ಡಾಕ್ಟರ್ ಮಂಜುನಾಥ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ, ಶಿವಣ್ಣನವರಿಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.
ಅಂದಹಾಗೆ ಎಚ್‌ಡಿಕೆ ಮನವಿ ಮೇರೆಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಮುಡಾ ಮಾಜಿ ಅಧ್ಯಕ್ಷೆ ವಿದ್ಯಾ ನಾಗೇಂದ್ರ ಹಾಗೂ ಕೆ.ಆರ್.ಪೇಟೆಯ ನರಸನಾಯಕ ಅವರನ್ನು ಮಂಡ್ಯ ಜಿಲ್ಲೆಯ ದಿಶಾ ಸದಸ್ಯರನ್ನಾಗಿ ನೇಮಿಸಲಾಗಿದ್ದು, ರಾಮನಗರ ದಿಶಾ ಸಮಿತಿ ಸದಸ್ಯರನ್ನಾಗಿ ಶ್ರೀ ಶಿವಣ್ಣ, ರೇಖಾ ಎಸ್, ನರಸಿಂಹ ಮೂರ್ತಿ ಹಾಗೂ ರಾಜೇಶ್ ಎಂಬುವರಿಗೆ ಸ್ಥಾನ ನೀಡಲಾಗಿದೆ.
ಎಚ್ಡಿ ಕುಮಾರಸ್ವಾಮಿ ಮನವಿ ಮೇರೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ, ಕೃಷಿ ಹಾಗೂ ರೈತ ಕಲ್ಯಾಣ ಸಚಿವ ಶಿವರಾಜ್‌ಸಿಂಗ್ ಚೌಹಾಣ್ ಆದೇಶವನ್ನು ಹೊರಡಿಸಿದ್ದಾರೆ. ಸ್ಥಾನ ಪಡೆದ ಸದಸ್ಯರು ದಿಶಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಲಹೆ ನೀಡುವ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಚರ್ಚಿಸುವ ಅಧಿಕಾರವನ್ನು ಹೊಂದಿದ್ದಾರೆ.

ಏನಿದು ದಿಶಾ ಸಮಿತಿ?
ಅಂದಹಾಗೆ ದಿಶಾ (DISHA) ಅಂದರೆ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿಯಾಗಿದೆ. ಜಿಲ್ಲೆಯ ಪರಿಣಾಮಕಾರಿ ಮತ್ತು ಸಕಾಲಿಕ ಅಭಿವೃದ್ಧಿಯನ್ನು ಖಾತ್ರಿಪಡಿಸುವ ಸರ್ಕಾರಿ ಸಮಿತಿಯಾಗಿದೆ. ಜಿಲ್ಲಾ ಮಟ್ಟದಲ್ಲಿ ಚುನಾಯಿತ ಪ್ರತಿನಿಧಿಗಳ ನಡುವಿನ ಸಮನ್ವಯವನ್ನು ಸುಧಾರಿಸಲು ದಿಶಾ ಸಮಿತಿಗಳನ್ನು ರಚಿಸಲಾಗಿದೆ. ಇದರ ಸದಸ್ಯರು ಪ್ರಮುಖ ಕೇಂದ್ರೀಯ ಕಾರ್ಯಕ್ರಮಗಳು ಮತ್ತು ಯೋಜನೆಗಳ ಅನುಷ್ಠಾನವನ್ನು ಸಹ ಮೇಲ್ವಿಚಾರಣೆ ಮಾಡುತ್ತಾರೆ.
ಸರ್ಕಾರಿ ನೌಕರರ ವರ್ಗಾವಣೆಗೆ ಸಿಎಂ ಸಿದ್ದರಾಮಯ್ಯ ಅನುಮತಿ ಕಡ್ಡಾಯ: ಸರ್ಕಾರದಿಂದ ಮಾರ್ಗಸೂಚಿ ಪ್ರಕಟ.!


