BBMP
Loading ...

Trai

ನವದೆಹಲಿ: ಇಂಟರ್ನೆಟ್​ ಬಳಕೆ ಮಾಡದ ಮೊಬೈಲ್​ ಬಳಕೆದಾರರ ಆಯ್ಕೆಯ ಹಕ್ಕಿನ ಪರ ಬ್ಯಾಟ್​ ಬೀಸಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಡೇಟಾ ಪ್ಲಾನ್​ ಇಲ್ಲದ ಕೇವಲ ವಾಯ್ಸ್​ ಮತ್ತು ಎಸ್​ಎಂಎಸ್​ ಒಳಗೊಂಡ ಕಡಿಮೆ ಟಾರಿಫ್​ ಪ್ಲಾನ್​ ಆರಂಭಿಸುವಂತೆ ಎಲ್ಲ ಟೆಲಿಕಾಂ ಕಂಪನಿಗಳಿಗೆ ಆದೇಶ ಹೊರಡಿಸಿದೆ.

ಸರ್ಕಾರ ಹೊರಡಿಸಿರುವ ಆದೇಶದಿಂದ ಹೆಚ್ಚಾಗಿ ಗ್ರಾಮೀಣ ಭಾಗದ ಜನತೆಗೆ ಅನುಕೂಲಕರವಾಗಲಿದೆ. ಏಕೆಂದರೆ, ಹಳ್ಳಿಗಳಲ್ಲಿ ಬಹುತೇಕರು ಇಂದಿಗೂ ಇಂಟರ್ನೆಟ್​ ಬಳಸುವುದಿಲ್ಲ. ಕೆಲವರಿಗಂತೂ ಇಂಟರ್ನೆಟ್​ ಬಳಸುವುದು ಕೂಡ ಹೇಗೆಂದು ತಿಳಿದಿಲ್ಲ. ಅಲ್ಲದೆ, ಇನ್ನು ಕೀಪ್ಯಾಡ್​ ಮೊಬೈಲ್​ ಬಳಸುತ್ತಿರುವವರಿದ್ದಾರೆ. ಪ್ರತಿ ತಿಂಗಳು ರೀಚಾರ್ಜ್​ ಮಾಡಿಸಿಕೊಳ್ಳುವಾಗ ಇಂಟರ್ನೆಟ್​ ಬಳಸದಿದ್ದರೂ ಅನಿವಾರ್ಯವಾಗಿ ರೀಚಾರ್ಜ್​ ಮಾಡಿಸಲೇಬೇಕಿದೆ. ಇದನ್ನು ಮನಗಂಡಿರುವ ಟ್ರಾಯ್​ ಇಂಟರ್ನೆಟ್​ ಪ್ಲಾನ್​ ಬಿಟ್ಟು, ವಾಯ್ಸ್​ ಮತ್ತು ಎಸ್​ಎಂಎಸ್​ ಒಳಗೊಂಡ ಟಾರಿಫ್ ಪ್ಲಾನ್​ ಆರಂಭಿಸುವಂತೆ ಟ್ರಾಯ್​ ಆದೇಶಿಸಿದೆ.​

ಅನೇಕ ಮೊಬೈಲ್​ ಕಂಪನಿಗಳು ತಮ್ಮ ಪ್ರತಿ ಟಾರಿಫ್​ ಪ್ಲಾನ್​ನಲ್ಲಿ ಡೇಟಾ, ವಾಯ್ಸ್​ ಮತ್ತು ಎಸ್​ಎಂಎಸ್​ ಎಲ್ಲವನ್ನು ಒಟ್ಟಿಗೆ ಸೇರಿಸಿವೆ. ಇಂಟರ್ನೆಟ್​ ಬಳಸದವರು ಕೂಡ ರೀಚಾರ್ಜ್​ಗೆ ಪಾವತಿಸಬೇಕಾಗುತ್ತದೆ. ಈ ನಡೆಯನ್ನು ಟ್ರಾಯ್​ ವಿರೋಧಿಸಿದ್ದು, ಬದಲಾವಣೆ ಮಾಡಿಕೊಳ್ಳಲು ಸೂಚನೆ ನೀಡಿದೆ. ಟೆಲಿಕಾಂ ಬಳಕೆದಾರರ ರಕ್ಷಣಾ (12ನೇ ತಿದ್ದುಪಡಿ) ನಿಯಮಗಳು 2025ರ ಪ್ರಕಾರ ಬದಲಾವಣೆ ತರಲು ಟೆಲಿಕಾಂ ಕಂಪನಿಗಳಿಗೆ ಆದೇಶಿಸಿದೆ. ಆದರೆ, ಟ್ರಾಯ್​ ಆದೇಶಕ್ಕೆ ಟೆಲಿಕಾಂ ಕಂಪನಿಗಳು ಅಸಮಾಧಾನ ಹೊರಹಾಕಿವೆ. ಟ್ರಾಯ್​ನ ಈ ನಿರ್ಧಾರದಿಂದ ಕೇಂದ್ರ ಸರ್ಕಾರದ ಡಿಜಿಟಲ್​ ಇಂಡಿಯಾ ಯೋಜನೆಗೆ ಹಿನ್ನೆಡೆಯಾಗಲಿದೆ ಎಂದಿವೆ.

ಸೆಪ್ಟೆಂಬರ್-ನವೆಂಬರ್ 2022 ಅವಧಿಯಲ್ಲಿ ಗ್ರಾಹಕರ ಸಮೀಕ್ಷೆಯನ್ನು ನಡೆಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಟ್ರಾಯ್ ಹೇಳಿದೆ. ಅಲ್ಲದೆ, ಈ ವಿಚಾರದ ಕುರಿತು ಟೆಲಿಕಾಂ ಆಪರೇಟರ್‌ಗಳು, ಗ್ರಾಹಕರು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಚರ್ಚೆ ನಡೆಸಿದ್ದು, ಅದಕ್ಕೆ ಸಂಬಂಧಿಸಿದ ಸಮಾಲೋಚನಾ ಪತ್ರವನ್ನು ಸಹ ಟ್ರಾಯ್​ ಬಿಡುಗಡೆ ಮಾಡಿದೆ.

ಇಂದಿಗೂ 150 ಮಿಲಿಯನ್ ಮಂದಿ ಸಾಮಾನ್ಯ ಫೋನ್​ ಅನ್ನು ಬಳಸುತ್ತಿದ್ದಾರೆ. ಅವರು ಕೇವಲ ಧ್ವನಿ ಮತ್ತು ಎಸ್​ಎಂಎಸ್​ ಮಾತ್ರ ಬಳಸುತ್ತಿದ್ದಾರೆ ಎಂದು ಹೇಳಿರುವ ಟ್ರಾಯ್​, ಎಸ್​​ಎಂಎಸ್​ ಮತ್ತು ವಾಯ್ಸ್​ ಪ್ಲಾನ್​ ಅನ್ನು ಪ್ರತ್ಯೇಕಿಸಿದರೆ, ಅದರಿಂದ ಹಿರಿಯ ಗ್ರಾಹಕರಿಗೆ ಅದರಲ್ಲೂ ಗ್ರಾಮೀಣ ಭಾಗದ ಹಿರಿಯರಿಗೆ ಅನುಕೂಲವಾಗಲಿದೆ ಎಂದು ಟ್ರಾಯ್​ ತಿಳಿಸಿದೆ. ಟ್ರಾಯ್​ ಆದೇಶವನ್ನು ಟೆಲಿಕಾಂ ಕಂಪನಿಗಳು ಪಾಲಿಸಿದ್ದಲ್ಲಿ ಇಂಟರ್ನೆಟ್​ ಬಳಸದ ಮೊಬೈಲ್​ ಬಳಕೆದಾರರಿಗೆ ಅನುಕೂಲವಾಗಲಿದೆ.

ರಾಮನಗರ ಜಿಲ್ಲಾ ದಿಶಾ ಸಮಿತಿಯಲ್ಲಿ ಜೆಡಿಎಸ್​ ಮುಖಂಡ ಎಸ್​. ಶಿವಣ್ಣರಿಗೆ ಸದಸ್ಯ ಸ್ಥಾನ

Leave a Reply

Your email address will not be published. Required fields are marked *