Greater Bengaluru News9 : ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಬೆಂಗಳೂರಿನ ಜನತೆಗೆ ಉತ್ತಮ ಆಡಳಿತದ ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಒತ್ತು ನೀಡಬೇಕು. ಮುಂದೆ ನಡೆಯುವ ಚುನಾವಣೆಯಲ್ಲಿ ಐದು ಪಾಲಿಕೆಯಲ್ಲಿ ಪಕ್ಷ ಗೆಲುವು ಸಾಧಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಬೆಂಗಳೂರಿನ ಸಚಿವರು, ಕಾಂಗ್ರೆಸ್ ಶಾಸಕರಿಗೆ ಸೂಚಿಸಿರುವ ಸಿಎಂ ಸಿದ್ದರಾಮಯ್ಯ ಅವರು, ನಗರದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನ ಒದಗಿಸುವ ಭರವಸೆಯನ್ನೂ ನೀಡಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಬೆಂಗಳೂರಿನ ಸಚಿವರು, ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದ ಸಿಎಂ, ಶಾಸಕರ ನಿರೀಕ್ಷೆ, ಬೆಂಗಳೂರಿನ ಸಮಸ್ಯೆ, ಸವಾಲು, ಅಭಿವೃದ್ಧಿ ಕುರಿತಂತೆ ಸಮಾಲೋಚಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ಬಳಿಕ ಜನರಿಗೆ ಸಾಕಷ್ಟು ನಿರೀಕ್ಷೆಗಳಿವೆ. ನಾಗರಿಕ ಸೇವೆ-ಸೌಲಭ್ಯಗಳ ಜತೆಗೆ ಮೂಲಸೌಕರ್ಯವೂ ವೃದ್ಧಿಸುವ ಅಪೇಕ್ಷೆಯಲ್ಲಿದ್ದಾರೆ. ಆ ಹಿನ್ನೆಲೆಯಲ್ಲಿ ಸುಧಾರಿತ ಆಡಳಿತ ಸೇವೆ ಸಿಗುವಂತಾಗಬೇಕು. ಪಾಲಿಕೆಯಲ್ಲಿ ಜನಪ್ರತಿನಿಧಿಗಳಿಲ್ಲದ ಕಾರಣ ಜನರ ಸಮಸ್ಯೆ ಹಾಗೂ ನಿರೀಕ್ಷೆಗಳಿಗೆ ಸ್ಪಂದಿಸುವ ಮೂಲಕ ನೆರವಾಗಬೇಕು ಎಂದು ಸಿಎಂ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.
ಪಾಲಿಕೆ ಚುನಾವಣೆ ಬಗ್ಗೆ ಚರ್ಚೆ
ಹೊಸದಾಗಿ ರಚನೆಯಾಗಿರುವ ಐದು ಪಾಲಿಕೆಗಳ ಚುನಾವಣೆ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ಎಲ್ಲ ಪಾಲಿಕೆಗಳಲ್ಲೂ ಕಾಂಗ್ರೆಸ್ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಈಗಿನಿಂದಲೇ ಎಲ್ಲರೂ ಸಂಘಟಿತವಾಗಿ ಕಾರ್ಯ ನಿರ್ವಹಿಸಬೇಕು. ಸರಕಾರ ಹಾಗೂ ಜಿಬಿಎ ಪ್ರಾಧಿಕಾರದ ಸುಧಾರಣಾ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ವಿಶ್ವಾಸ ಹೆಚ್ಚಿಸಿಕೊಳ್ಳಲು ಒತ್ತು ನೀಡುವ ಬಗ್ಗೆಯೂ ಸಮಾಲೋಚನೆ ನಡೆಯಿತು ಎನ್ನಲಾಗಿದೆ.
ಪಾಲಿಕೆಗಳ ಉಸ್ತುವಾರಿಗೆ ಒತ್ತು
ಬೆಂಗಳೂರು ಪೂರ್ವ ಪಾಲಿಕೆಗೆ ಕೃಷ್ಣ ಬೈರೇಗೌಡ, ಪಶ್ಚಿಮಕ್ಕೆ ಬಿ.ಎಸ್. ಸುರೇಶ್, ಉತ್ತರಕ್ಕೆ ಕೆ.ಜೆ. ಜಾರ್ಜ್, ದಕ್ಷಿಣಕ್ಕೆ ರಾಮಲಿಂಗಾರೆಡ್ಡಿ ಹಾಗೂ ಬೆಂಗಳೂರು ಕೇಂದ್ರ ಪಾಲಿಕೆಗೆ ದಿನೇಶ್ ಗುಂಡೂರಾವ್, ಜಮೀರ್ ಅಹಮದ್ ಖಾನ್ ಅವರನ್ನು ಪಕ್ಷದ ವತಿಯಿಂದ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಸುಗಮ ಆಡಳಿತ ವ್ಯವಸ್ಥೆ ಕಲ್ಪಿಸಲು ಸಚಿವರು ಸಂಬಂಧಪಟ್ಟ ಪಾಲಿಕೆಗಳಲ್ಲಿ ನಿರಂತರವಾಗಿ ಮೇಲ್ವಿಚಾರಣೆ ನಡೆಸುವಂತೆಯೂ ಸಿಎಂ ಸೂಚನೆ ನೀಡಿದ್ದಾರೆ.
ಸಮಸ್ಯೆ- ಸವಾಲುಗಳ ಬಗ್ಗೆಯೂ ಚರ್ಚೆ
ಬೆಂಗಳೂರಿನಲ್ಲಿ ಮೂಲಸೌಕರ್ಯದ ಕೊರತೆ, ರಸ್ತೆ ಗುಂಡಿ, ಟ್ರಾಫಿಕ್ ದಟ್ಟಣೆ ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ಹಲವು ಶಾಸಕರು ಪ್ರಸ್ತಾಪಿಸಿದರು. ಮಳೆಗಾಲದಲ್ಲಿ ಉಂಟಾಗಬಹುದಾದ ಅನಾಹುತಗಳ ತಡೆಗೆ ಕೈಗೊಳ್ಳಬೇಕಾದ ಕ್ರಮಗಳು, ರಸ್ತೆಗಳ ಅಭಿವೃದ್ಧಿ, ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಪಟ್ಟ ಇಲಾಖೆ, ಸಂಸ್ಥೆಗಳ ನಡುವೆ ಸಮನ್ವಯದ ಕುರಿತಂತೆಯೂ ಚರ್ಚೆಯಾಯಿತು ಎಂದು ಗೊತ್ತಾಗಿದೆ.
ಶಾಸಕರ ಅಭಿಪ್ರಾಯ, ಅಳಲು ಆಲಿಸಿದ ಸಿಎಂ ಬೆಂಗಳೂರಿನ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ರೀತಿಯ ನೆರವು, ಅನುದಾನ ಒದಗಿಸಲಾಗುವುದು. ಸಚಿವರು, ಶಾಸಕರೆಲ್ಲಾ ಒಟ್ಟಾಗಿ ಕಾರ್ಯ ನಿರ್ವಹಿಸಿ ಪಕ್ಷ ಹಾಗೂ ಸರಕಾರದ ವರ್ಚಸ್ಸು ಹೆಚ್ಚಿಸುವ ಜತೆಗೆ ಬೆಂಗಳೂರಿನಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ತರಲು ಪ್ರಯತ್ನಿಸುವಂತೆ ಸಿಎಂ ಸೂಚಿಸಿದ್ದಾರೆ.
ಬೆಂಗಳೂರು ಉಸ್ತುವಾರಿ ಸಚಿವರಾದ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಬೆಂಗಳೂರಿನ ಸಚಿವರು, ಶಾಸಕರು ಪಾಲ್ಗೊಂಡಿದ್ದರು. ಸಚಿವ ಕೆ.ಜೆ.ಜಾರ್ಜ್ ಅವರು ಗೈರಾಗಿದ್ದರು. ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಎಸ್.ಟಿ. ಸೋಮಶೇಖರ್ ಭಾಗವಹಿಸಿದ್ದರು.


