Greater Bengaluru News9 : ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿಯಲ್ಲಿ 1200 ಚ.ಅಡಿ ವಿಸ್ತೀರ್ಣದವರೆಗಿನ ನಿವೇಶನಗಳಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ದಿಷ್ಟ ಮಹಡಿವರೆಗಿನ ಮಿತಿಯಲ್ಲಿ ನಿರ್ಮಾಣಗೊಂಡಿರುವ ಹಾಗೂ ಹೊಸದಾಗಿ ನಿರ್ಮಿಸಲಿರುವ ವಾಸದ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯುವುದರಿಂದ ವಿನಾಯಿತಿ ನೀಡುವ ಮಹತ್ವದ ತೀರ್ಮಾನ ಕೈಗೊಂಡಿರುವ ರಾಜ್ಯ ಸರಕಾರ, ಈ ಸಂಬಂಧ ಮಂಗಳವಾರ ಆದೇಶ ಹೊರಡಿಸಿದೆ. ಆದರೆ, ರೆವಿನ್ಯೂ ನಿವೇಶನ ಮತ್ತು ಬಿಬಿಎಂಪಿ ಹೊರತುಪಡಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿನ ನಿವೇಶನ ಹಾಗೂ ಕಟ್ಟಡಗಳ ವಿಚಾರದಲ್ಲಿ ಒಸಿ, ಸಿಸಿ ಗೊಂದಲ ಮಾತ್ರ ಹಾಗೇ ಮುಂದುವರಿದಿದೆ.
ಸದ್ಯ ಸರ್ಕಾರ ಹೊರಡಿಸಿರುವ ಆದೇಶದಂತಗೆ 1200 ಚದರಡಿ ವಿಸ್ತೀರ್ಣದವರೆಗಿನ ನಿವೇಶನದಲ್ಲಿ ನಕ್ಷೆ ಮಂಜೂರಾತಿ ಪಡೆದು ನಿರ್ಮಾಣಗೊಂಡಿರುವ ಮತ್ತು ನಿರ್ಮಿಸುವ ನೆಲಮಹಡಿ ಸಹಿತ ಎರಡು ಅಂತಸ್ತು ಅಥವಾ ತಳ ಮಹಡಿ (ಸ್ಟಿಲ್ಟ್) ಸಹಿತ ಮೂರು ಮಹಡಿ ವಾಸದ ಕಟ್ಟಡಕ್ಕೆ ಒಸಿ ಪಡೆಯುವುದರಿಂದ ವಿನಾಯಿತಿ ಸಿಗಲಿದೆ. ಜತೆಗೆ, ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕ ಪಡೆಯುವಲ್ಲಿನ ಅಡಚಣೆ ನಿವಾರಣೆಗೆ ದಾರಿ ಸುಗಮವಾಗಲಿದೆ. ಆದರೆ, ಸರ್ಕಾರದ ಪ್ರಕಾರ ಈಗಾಗಲೇ ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿ ಪಡೆದವರಿಗೆ ಮತ್ತು ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ನಕ್ಷೆ ಮಂಜೂರಾತಿ ಪಡೆದವರಿಗೆ ಮಾತ್ರ ಒಸಿ, ಸಿಸಿಯಿಂದ ವಿನಾಯಿತಿ ನೀಡಲಾಗಿದೆ. ಆದರೆ, ರೆವಿನ್ಯೂ ನಿವೇಶನ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ನಿವೇಶನ ಹಾಗೂ ಕಟ್ಟಡಗಳ ಬಗ್ಗೆ ಆದೇಶದಲ್ಲಿ ಯಾವುದೇ ಉಲ್ಲೇಖವಾಗಿಲ್ಲ. ಹೀಗಾಗಿ ಈ ವ್ಯಾಪ್ತಿಯಲ್ಲಿನ ಒಸಿ, ಸಿಸಿ ಬಗ್ಗೆ ಇರುವ ಗೊಂದಲ ಹಾಗೇ ಮುಂದುವರಿದಿದೆ.
ಅಂದಹಾಗೆ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಮಹಾನಗರ, ನಗರ, ಪಟ್ಟಣಗಳಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಆರಂಭಿಕ ಪ್ರಮಾಣ ಪತ್ರ (ಸಿಸಿ) ಹಾಗೂ ವಾಸ ಯೋಗ್ಯ ಪ್ರಮಾಣ ಪತ್ರ (ಒಸಿ) ಕಡ್ಡಾಯ ಮಾಡಿದ್ದ ರಾಜ್ಯ ಸರ್ಕಾರ ಈ ನಿಯಮವನ್ನು ಹಳ್ಳಿಗಳಿಗೂ ವಿಸ್ತರಿಸಿದೆ. ಸಿಸಿ, ಒಸಿ ಇಲ್ಲದಿದ್ದರೇ ನೀರು, ವಿದ್ಯುತ್, ಒಳಚರಂಡಿ ಸಂಪರ್ಕ ಸೇರಿ ಅಗತ್ಯ ಸೇವಾ ಸಂಪರ್ಕಗಳು ಸಿಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸುಪ್ರೀಂ ಕೋರ್ಟ್ ಆದೇಶದಂತೆ ಮಾರ್ಗಸೂಚಿ ಹೊರಡಿಸಿದೆ. ಅನಧಿಕೃತ ಕಟ್ಟಡ ನಿರ್ಮಾಣ, ವಿನ್ಯಾಸ ಉಲ್ಲಂಸಿ ನಡೆಯುವ ಕಾಮಗಾರಿ ತಡೆಗಟ್ಟಲು ಹಾಗೂ ಸರ್ಕಾರದ, ಸಾರ್ವಜನಿಕ ಸ್ವತ್ತಿನಲ್ಲಿ ನಿರ್ಮಿಸುತ್ತಿರುವ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವ ಸಂಬಂಧ ಸುಪ್ರೀಂ ಕೋರ್ಟ್ ಆದೇಶಿಸಿ ಮಾರ್ಗಸೂಚಿ ಹೊರಡಿಸಿದೆ. ಇದರ ಅನ್ವಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೋರ್ಟ್ ಆದೇಶ ಪಾಲಿಸುವಂತೆ ಸುತ್ತೋಲೆ ಹೊರಡಿಸಿದ್ದಾರೆ. ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರಲ್ಲಿ ಕಟ್ಟಡ ನಿರ್ಮಾಣ ಮತ್ತು ನಿಯಂತ್ರಣದ ಬಗ್ಗೆ ಉಲ್ಲೇಖಿಸಲಾಗಿದೆ. ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆದು ವಿಧಿವಿಧಾನಗಳನ್ನು ಪಾಲಿಸಬೇಕು. ಆದರೆ, ಸರ್ಕಾರ ಇದೀಗ ಬಿಬಿಎಂಪಿ ಅಥವಾ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಮಾತ್ರ ಒಸಿ, ಸಿಸಿ ವಿನಾಯಿತಿ ನೀಡಿದ್ದು, ಗ್ರಾಮ ಪಂಚಾಯಿತಿ ಮತ್ತು ರೆವಿನ್ಯೂ ನಿವೇಶನಗಳ ವಿಚಾರದಲ್ಲಿ ಯಾವುದೇ ನಿಲುವು ತೆಳೆದಿರುವುದು ಗೊಂದಲಕ್ಕೆ ಕಾರಣವಾಗಿದೆ.
ಪ್ರಸ್ತುತ ಆದೇಶ ಏನಿದೆ?
ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ-2024ರ ಅಧ್ಯಾಯ 7ರ ನಿಬಂಧನೆಗಳ ಅನ್ವಯ ಕಟ್ಟಡ ಮತ್ತು ನಗರ ಯೋಜನಾ ನಿಯಮಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆಯನ್ನು ಕಾರ್ಯಗತಗೊಳಿಸಲು ಲಭ್ಯವಿರುವ ಕಾರ್ಯಪಡೆಯೊಂದಿಗೆ ದೃಢವಾದ ಆಡಳಿತ ರಚನೆಯನ್ನು ವಿನ್ಯಾಸಗೊಳಿಸುವಂತೆ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ (ಜಿಬಿಎ, ಬೆಂನಪಾ-1) ಎನ್.ಕೆ. ಲಕ್ಷ್ಮೇಸಾಗರ್ ಅವರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಆದೇಶದಲ್ಲಿ ನಿರ್ದೇಶನ ನೀಡಿದ್ದಾರೆ. ಸ್ವಾಧೀನಾನುಭವ ಪತ್ರ ವಿನಾಯಿತಿ ನೀಡಿರುವ ವಾಸದ ಕಟ್ಟಡಗಳ ನಿರ್ಮಾಣಕ್ಕೆ ಆರಂಭಿಕ ಪ್ರಮಾಣ ಪತ್ರ (ಸಿಸಿ) ಪಡೆಯುವ ಅಗತ್ಯವಿಲ್ಲ ಎಂದು ಮೂಲಗಳು ಹೇಳಿವೆ. ಹಾಗಾಗಿ, ನಿವೇಶನದಾರರಿಗೆ ಒಸಿ ಮತ್ತು ಸಿಸಿ ಎರಡರಿಂದಲೂ ವಿನಾಯಿತಿ ಸಿಕ್ಕಂತಾಗಲಿದೆ.
ಗ್ರೇಟರ್ ಬೆಂಗಳೂರು ಪ್ರದೇಶದ ವ್ಯಾಪ್ತಿಯಲ್ಲಿ 1200 ಚ.ಅಡಿ ವಿಸ್ತೀರ್ಣ ಮೀರದಂತಹ ನಿವೇಶನಗಳಲ್ಲಿ ನಿರ್ಮಿಸುವ ಕಟ್ಟಡಗಳಿಗೆ ಪ್ರಾರಂಭಿಕ ಪ್ರಮಾಣಪತ್ರ (ಸಿಸಿ) ಹಾಗೂ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯುವುದರಿಂದ ವಿನಾಯಿತಿ ನೀಡುವ ಸಂಬಂಧ ಬಿಬಿಎಂಪಿಯ ನಗರ ಯೋಜನೆ ವಿಭಾಗವು ಈ ಹಿಂದೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ 2024ರ ಸೆಕ್ಷನ್ 241(7)ರಲ್ಲಿ ಸ್ವಾಧೀನಾನುಭವ ಪ್ರಮಾಣಪತ್ರದಿಂದ ವಿನಾಯಿತಿ ನೀಡುವ ಅಧಿಕಾರವನ್ನು ಸರಕಾರಕ್ಕೆ ನೀಡಲಾಗಿದೆ. ಈ ಅವಕಾಶವು ಬಿಬಿಎಂಪಿ ಕಾಯಿದೆ-2020, ಕೆಎಂಸಿ ಕಾಯಿದೆ 1976 ಹಾಗೂ ಕರ್ನಾಟಕ ಪುರಸಭೆಗಳ ಕಾಯಿದೆ 1964ರಲ್ಲಿ ಇರಲಿಲ್ಲ.
2025ರ ಜುಲೈ 3ರಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ-2024ರ ಸೆಕ್ಷನ್ 241(7)ರಲ್ಲಿನ ಅವಕಾಶದಡಿ 1200 ಚ.ಅಡಿ ವಿಸ್ತೀರ್ಣ ಮೀರದಂತಹ ನಿವೇಶನಗಳಲ್ಲಿ ನೆಲ ಮತ್ತು 2 ಅಂತಸ್ತು ಅಥವಾ ಸ್ಟಿಲ್ಟ್ ಮತ್ತು 3 ಅಂತಸ್ತಿನವರೆಗಿನ ಕಟ್ಟಡಗಳಿಗೆ ಒಸಿಯಿಂದ ವಿನಾಯಿತಿ ನೀಡಲು ತೀರ್ಮಾನಿಸಲಾಗಿತ್ತು.


