ಬೆಂಗಳೂರು: ಬಾಲಿವುಡ್ ಗಾಯಕ ಸೋನು ನಿಗಮ್ ವಿವಾದಾತ್ಮಕ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸುವಾಗ ಸೋನು ನಿಗಂ ಬಳಿ ಕನ್ನಡ ಹಾಡು ಹಾಡುವಂತೆ ಅಭಿಮಾನಿಗಳು ಒತ್ತಾಯಿಸಿದ್ರು. ಅದಕ್ಕೆ ಸೋನು ನಿಗಮ್ ಅವರು. ‘ಕನ್ನಡ ಕನ್ನಡ ಎನ್ನುವುದಕ್ಕೇ ಪಹಲ್ಗಾಮ್ ಘಟನೆ ನಡೆದಿದ್ದು’ ಎಂದು ಅವರು ಹೇಳಿದ್ದರು. ಈ ಹೇಳಿಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆ ಸೋನು ನಿಗಮ್ ಕ್ಷಮೆಯಾಚಿಸಿದ್ರು. ಇದೀಗ ಕರ್ನಾಟಕದಲ್ಲಿ ಬರುವ ಗಾಯಕರು, ಕಾರ್ಯಕ್ರಮ ನಿಯೋಜಿಸುವವರಿಗೆ ಬೆಂಗಳೂರು ಪೊಲೀಸರು ಖಡಕ್ ಸೂಚನೆ ನೀಡಲು ಮುಂದಾಗಿದ್ದಾರೆ. ಇನ್ಮುಂದೆ ಖಡಕ್ ಕಂಡೀಷನ್ ಅಪ್ಲೈ ಎಂದಿದ್ದಾರೆ.
ಹೊಸ ಮಾರ್ಗಸೂಚಿಗೆ ಚಿಂತನೆ
ಗಾಯಕ ಸೋನು ನಿಗಮ್ ವಿವಾದ ಬಳಿಕ ಎಚ್ಚೆತ್ತ ಬೆಂಗಳೂರು ಗ್ರಾಮಾಂತರ ಪೊಲೀಸರು ಹೊಸ ಚಿಂತನೆ ಆರಂಭಿಸಿದ್ದಾರೆ. ಬೆಂಗಳೂರಿನ ಗ್ರಾಮಾಂತರದಲ್ಲಿ ಆಯೋಜನೆಯಾಗುವ ಸಂಗೀತ ಕಾರ್ಯಕ್ರಮಗಳಿಗೆ ಹೊಸ ಮಾರ್ಗಸೂಚಿಯನ್ನು ತಯಾರಿಸಲು ನಿರ್ಧಾರ ಮಾಡಿದ್ದಾರೆ.
ಶೀಘ್ರವೇ ಹೊಸ ಮಾರ್ಗಸೂಚಿಗಳನ್ನು ರಚಿಸಲು ಗ್ರಾಮಾಂತರ ಪೊಲೀಸರು ನಿರ್ಧಾರ ಮಾಡಿದ್ದಾರೆ. ಸೂಚನೆಗಳ ಅವಶ್ಯಕತೆ ಏನು ಗೊತ್ತಾ? ಇನ್ನು ಮುಂದೆ ಯಾರೇ ಸಂಗೀತ ಕಾರ್ಯಕ್ರಮ ಆಯೋಜಿಸಿದ್ರೂ, ಪೊಲೀಸರ ಪರ್ಮಿಷನ್ ಕಡ್ಡಾಯವಾಗಿ ಪಡೆಯಬೇಕಾಗುತ್ತದೆ. ಈ ಪರ್ಮಿಷನ್ ಜೊತೆಗೆ ಕೆಲವೊಂದು ಸೂಚನೆಗಳನ್ನು ಮತ್ತು ಮಾರ್ಗಸೂಚಿಗಳನ್ನು ಗ್ರಾಮಾಂತರ ಪೊಲೀಸರು ನೀಡಲಿದ್ದಾರೆ.
ಯಾವುದೇ ರಾಜ್ಯದ ಗಾಯಕರು ಬಂದ್ರೂ, ಜನರು ಕನ್ನಡ ಹಾಡು ಕೇಳಿದರೆ ಹಾಡಲೇಬೇಕು. ಅನಗತ್ಯವಾಗಿ ಪ್ರೇಕ್ಷಕರೊಂದಿಗೆ ಕಿರಿಕ್ ಮಾಡುವಂತಿಲ್ಲ. ಕನ್ನಡ ಗೀತೆ ಕೇಳಿದರೆ ಕಡ್ಡಾಯವಾಗಿ ಹಾಡಲೇಬೇಕು. ಒಂದು ವೇಳೆ ಕನ್ನಡ ಗಾಯಕರು ಇಲ್ಲದಿದ್ದರೆ, ಅದಕ್ಕಾಗಿ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ಷರತ್ತು ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ.
ಜಾತಿ, ದೇಶ, ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡುವಂತಿಲ್ಲ. ಕನ್ನಡಕ್ಕೆ ಮೊದಲು ಪ್ರಾಮುಖ್ಯತೆ ನೀಡಲು ಪೊಲೀಸರು ಸೂಚನೆ ನೀಡಲು ನಿರ್ಧರಿಸಿದ್ದಾರೆ. ಈ ಎಲ್ಲಾ ಮಾರ್ಗಸೂಚಿಗಳನ್ನು ಪರ್ಮಿಷನ್ ಪಡೆಯುವ ಸಮಯದಲ್ಲಿ ಪಾಲಿಸಲು ಸೂಚಿಸಲಾಗುತ್ತದೆ. ಈ ಎಲ್ಲಾ ಮಾರ್ಗಸೂಚಿಗಳನ್ನು ಒಪ್ಪದಿದ್ದರೆ, ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗುವುದಿಲ್ಲ.
ಪೊಲೀಸರ ಕಂಡೀಷನ್ ಗಳಿಗೆ ಒಪ್ಪಿಕೊಂಡರೆ ಮಾತ್ರ ಪರ್ಮಿಷನ್_GRANTED. ಸೋನು ನಿಗಮ್ ಘಟನೆ ನಂತರ ಈ ಎಲ್ಲಾ ಮಾರ್ಗಸೂಚಿಗಳನ್ನು ಹೊರಡಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಶೀಘ್ರವೇ ಬೆಂಗಳೂರು ಗ್ರಾಮಾಂತರ ಎಸ್ ಪಿ ಸಿ ಕೆ ಬಾಬ ಈ ಮಾರ್ಗಸೂಚಿಗಳನ್ನು ನೀಡುವ ಸಾಧ್ಯತೆ ಇದೆ.


