Greater Bengaluru News9 : ನಗರ ಪ್ರದೇಶಗಳಲ್ಲಿ ಪ್ರತಿ ವಿದ್ಯಾರ್ಥಿಯಿಂದ 50 ಸಾವಿರ ರು.ಗಿಂತ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ಪಡೆಯಬೇಕು. ಒಂದು ವೇಳೆ ಸರ್ಕಾರಿ ಶಾಲೆ ದತ್ತು ಪಡೆಯದಿದ್ದರೆ ಆ ಖಾಸಗಿ ಶಾಲೆಗಳು ಪಡೆಯುವ ಶುಲ್ಕಕ್ಕೆ ಮಿತಿ (ಕ್ಯಾಪ್) ಹಾಕಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ಕೆಸಿಸಿಐ) ಗುರುವಾರ ಆಯೋಜಿಸಿದ್ದ ಜಾಗತಿಕ ಸಿಎಸ್ಆರ್ ಮತ್ತು ಸುಸ್ಥಿರ ಅಭಿವೃದ್ಧಿ ಶೃಂಗಸಭೆ ಉದ್ಘಾಟಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜ್ಯಕ್ಕೆ ಸಿಎಸ್ಆರ್ ನಿಧಿ ಅಡಿ ಕಾರ್ಪೋರೇಟ್ ಸಂಸ್ಥೆಗಳು ಸುಮಾರು 10 ಸಾವಿರ ಕೋಟಿ ರು. ನೀಡುತ್ತವೆ. ಅದರಲ್ಲಿ ಶೇ.50ರಷ್ಟು ಹಣವನ್ನು ಕಾರ್ಪೋರೇಟ್ ಸಂಸ್ಥೆಗಳು ದುರುಪಯೋಗ ಮಾಡಿಕೊಳ್ಳುತ್ತಿದ್ದು, ಸಮರ್ಪಕವಾಗಿ ನಿಧಿ ಬಳಕೆ ಮಾಡುತ್ತಿಲ್ಲ. ಹೀಗಾಗಿ ಸಿಎಸ್ಆರ್ ನಿಧಿ ಬಳಕೆ ಕುರಿತು ನಿಗಾ ವಹಿಸಲು ಹಿರಿಯ ಐಎಎಸ್ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದರು.
ನಗರ ಪ್ರದೇಶಗಳಲ್ಲಿ 50 ಸಾವಿರ ರು.ಗಿಂತ ಹೆಚ್ಚಿನ ಶುಲ್ಕ ಪಡೆಯುತ್ತಿರುವ ಖಾಸಗಿ ಶಾಲೆಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ಪಡೆಯಬೇಕು. ಆ ಶಾಲೆಗಳು ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಿಂತ ಉತ್ತಮ ಬೋಧಕ ವರ್ಗ ನಿಯೋಜಿಸಿದರೆ ಸಾಕು. ಒಂದು ವೇಳೆ ಸರ್ಕಾರಿ ಶಾಲೆ ದತ್ತು ಪಡೆಯದಿದ್ದರೆ ಆ ಶಾಲೆಗಳಿಗೆ ಶುಲ್ಕ ಮಿತಿ ಹಾಕಲಾಗುವುದು. ನಾವೂ ಶಿಕ್ಷಣ ಸಂಸ್ಥೆ ಹೊಂದಿದ್ದು, ಗ್ರಾಮೀಣ ಭಾಗದ ಸರ್ಕಾರಿ ಶಾಲೆ ದತ್ತು ಪಡೆಯುವಂತೆ ನನ್ನ ಮಗಳಿಗೆ ಸೂಚಿಸಿದ್ದೆ. ಅದರಂತೆ ಆಕೆ ಮೂರು ಶಾಲೆ ದತ್ತು ಪಡೆದಿದ್ದಾಳೆ ಎಂದು ಮಾಹಿತಿ ನೀಡಿದರು.
ಗ್ರಾಮೀಣ ಭಾಗದ ಮಕ್ಕಳಿಗೂ ನಗರ ಪ್ರದೇಶದಂತೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ನಮ್ಮ ಗುರಿ. ಅದಕ್ಕಾಗಿ ಹಲವು ನೀತಿ ರೂಪಿಸಲಾಗುತ್ತಿದೆ. ಅದರ ಭಾಗವಾಗಿ ಸಿಎಸ್ಆರ್ ನಿಧಿಯನ್ನು ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣ ಉತ್ತಮಗೊಳಿಸಲು ಬಳಸಲಾಗುವುದು. ಸಿಎಸ್ಆರ್ ನಿಧಿ ಅಡಿ ಕಾರ್ಪೋರೇಟ್ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು. ಜತೆಗೆ ಹೊಸದಾಗಿ ಶಾಲೆಗಳನ್ನು ನಿರ್ಮಿಸಬೇಕು. ಸರ್ಕಾರ ಈಗಾಗಲೇ ರಾಜ್ಯದಲ್ಲಿ 2 ಸಾವಿರ ಜಾಗಗಳನ್ನು ಗುರುತಿಸಿದ್ದು, ಪ್ರತಿ ಕಾರ್ಪೋರೇಟ್ ಸಂಸ್ಥೆ ಅಲ್ಲಿ ಶಾಲೆ ನಿರ್ಮಿಸಿ, ಅತ್ಯುತ್ತಮ ಮೂಲಸೌಕರ್ಯ ಒದಗಿಸಬೇಕು ಎಂದು ಸೂಚಿಸಿದರು.
ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗ:
ಸಿಎಸ್ಆರ್ ನಿಧಿಯನ್ನು ಮೊದಲು ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸಲಾಗುತ್ತದೆ. ನಂತರ ಆರೋಗ್ಯ ಸೇರಿ ಮತ್ತಿತರ ಕ್ಷೇತ್ರಗಳತ್ತ ಸಿಎಸ್ಆರ್ ನಿಧಿ ಬಳಸಲಾಗುವುದು. ನಮ್ಮ ಗ್ರಾಮೀಣ ಭಾಗದ ಮಕ್ಕಳು ಬೆಂಗಳೂರು ಸೇರಿ ಇತರ ನಗರದ ಮಕ್ಕಳೊಂದಿಗೆ ಸ್ಪರ್ಧಿಸುವಂತೆ ಮಾಡದೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುವಂತೆ ಅವರನ್ನು ತಯಾರು ಮಾಡಲಾಗುವುದು. ಜತೆಗೆ ಶಿಕ್ಷಣಕ್ಕೆ ನಗರಗಳತ್ತ ವಲಸೆ ಬರುವುದನ್ನು ತಪ್ಪಿಸುವುದು ನಮ್ಮ ಗುರಿ ಎಂದು ಹೇಳಿದರು.
ನಿರುದ್ಯೋಗ ಸಮಸ್ಯೆ ನೀಗಿಸಲು ಕ್ರಮ:
ರಾಜ್ಯದ ನಿರುದ್ಯೋಗ ಸಮಸ್ಯೆ ನೀಗಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಯುವ ಸೇತು ಹೆಸರಲ್ಲಿ ಉದ್ಯೋಗ ವಿನಿಮಯ ಕೇಂದ್ರ ಆರಂಭಿಸಲಾಗುತ್ತಿದೆ. ಅದರ ಮೂಲಕ ನಿರುದ್ಯೋಗಿ ಯುವ ಜನತೆಗೆ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ದೊರಕಿಸಿಕೊಡಲಾಗುವುದು. ಅದಕ್ಕೆ ಬೇಕಾಗುವ ತರಬೇತಿಯನ್ನೂ ಸರ್ಕಾರದಿಂದ ಕೊಡಲಾಗುತ್ತದೆ. ಅದರ ಜತೆಗೆ ನೇಮಕಾತಿಯಲ್ಲಿ ಶೇ.15ರಷ್ಟು ಮೀಸಲಾತಿ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ನೀಡಲಾಗುತ್ತಿದ್ದು, ಅದರಲ್ಲಿ ಶೇ. 7.5ರಷ್ಟನ್ನು ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ನೀಡಲಾಗುವುದು ಎಂದು ಕಾಯ್ದೆಯಲ್ಲಿ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಈ ಕುರಿತು ಮುಂದಿನ 100 ದಿನಗಳೊಳಗಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದರು.
ನಗರದ ಪ್ರದೇಶದ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಿಂತ ಉತ್ತಮ ಬೋಧಕ ವರ್ಗ ನಿಯೋಜಿಸಿದರೆ ಸಾಕು. ನಾವೂ ಶಿಕ್ಷಣ ಸಂಸ್ಥೆ ಹೊಂದಿದ್ದು, ಗ್ರಾಮೀಣ ಭಾಗದ ಸರ್ಕಾರಿ ಶಾಲೆ ದತ್ತು ಪಡೆಯುವಂತೆ ನನ್ನ ಮಗಳಿಗೆ (ಐಶ್ವರ್ಯಾ ಡಿಕೆಎಸ್ ಹೆಗ್ಡೆ) ಸೂಚಿಸಿದ್ದೆ. ಅದರಂತೆ ಆಕೆ ಮೂರು ಶಾಲೆ ದತ್ತು ಪಡೆದಿದ್ದಾಳೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.


