Greater Bengaluru News9 : ನಗರದಲ್ಲಿ ಫುಟ್‌ಪಾತ್‌ಗಳ ಒತ್ತುವರಿ ತೆರವು ಮಾಡುತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇದೀಗ ಬಹುಮಹಡಿ ಕಟ್ಟಡವೊಂದನ್ನು ನೆಲಸಮಗೊಳಿಸಲು ಮುಂದಾಗಿದೆ. ಅಪಾಯಕಾರಿಯಾಗಿರುವ 18 ಮಹಡಿಗಳ ಬೃಹತ್ ಅಪಾರ್ಟ್‌ಮೆಂಟ್ ಕಟ್ಟಡವನ್ನು ತೆರವುಗೊಳಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಬೆಂಗಳೂರು ಇತಿಹಾಸದಲ್ಲೇ ಅತ್ಯಂತ ಎತ್ತರದ ಅಪಾರ್ಟ್‌ಮೆಂಟ್ ಎನಿಸಿಕೊಂಡಿರುವ ಈ ಕಟ್ಟಡ ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ಜಿಬಿಎ ಅಧಿಕಾರಿಗಳು ದ್ವಂಸಗೊಳಿಸಲು ತೀರ್ಮಾನಿಸಿದ್ದಾರೆ.
ಹೌದು, ಬೆಂಗಳೂರಿನ ಕೂಡ್ಲು ಬಳಿ ಇರುವ ಎಸ್‌ಎನ್‌ಎನ್ ರಾಜ್ ಕಾರ್ಪ್ ಒಡೆತನದಲ್ಲಿ ನಿರ್ಮಾಣ ಆಗಿರುವ 18 ಮಹಡಿಯ ಬಿಲ್ಡಿಂಗ್ ಉದ್ಘಾಟನೆಗೂ ಮುನ್ನ ನೆಲ ಕಚ್ಚಲಿದೆ. ʼʼಸುಮಾರು 200 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡದಲ್ಲಿ ಸಮಸ್ಯೆ ಉಂಟಾಗಿದೆ. ಪ್ರಸ್ತುತ ಈ ಕಟ್ಟಡವು ಒಂದು ಬದಿಗೆ ವಾಲಿದ್ದು, ಭವಿಷ್ಯದಲ್ಲಿ ಭಾರಿ ದುರಂತ ಸಂಭವಿಸುವ ಭೀತಿ ಎದುರಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡಕ್ಕೆ ಸ್ಟ್ರಕ್ಚರಲ್ ಡ್ಯಾಮೇಜ್ ಎದುರಾಗಿದೆ. ಜತೆಗೆ ಒಂದು ಕಡೆಗೆ ವಾಲಿದೆ. ಭವಿಷ್ಯದಲ್ಲಿ ದುರಂತ ಉಂಟಾಗುವ ಭೀತಿ ಹಿನ್ನೆಲೆ ಕಟ್ಟಡ ಡೆಮಾಲಿಷನ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ. ಕಟ್ಟಡದ ಭದ್ರತೆ ಹಾಗೂ ಸಾರ್ವಜನಿಕರ ಜೀವ ರಕ್ಷಣೆಯ ಹಿತದೃಷ್ಟಿಯಿಂದ ಜಿಬಿಎ ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಹಾಗೂ ಎಸ್‌ಎನ್‌ಎನ್ ರಾಜ್ ಕಾರ್ಪ್ ಸಂಸ್ಥೆ ಮಾಲಕರ ನಡುವೆ ಈ ಬಗ್ಗೆ ಗುರುವಾರ ಉನ್ನತ ಮಟ್ಟದ ಸಭೆ ನಡೆದು, ತೆರವುಗೊಳಿಸಲು ತೀರ್ಮಾನಿಸಲಾಯಿತು.
ಎಸ್‌ಎನ್‌ಎನ್ ರಾಜ್ ಕಾರ್ಪ್ ಆಡಳಿತ ಮಂಡಳಿಯು ಇಡೀ ಡೆಮಾಲಿಷನ್ ಕಾರ್ಯಾಚರಣೆಗೆ ತಗುಲುವ ಸಂಪೂರ್ಣ ಖರ್ಚು-ವೆಚ್ಚವನ್ನು ಭರಿಸುವುದಾಗಿ ಒಪ್ಪಿಕೊಂಡಿದೆ. ʼʼನಿರ್ಮಾಣದ ಬಳಿಕ ಕಟ್ಟಡದಲ್ಲಿ ದೋಷ ಇರೋದು ಗೊತ್ತಾಗಿದೆ. ಈ ವಿಚಾರವನ್ನು ನಾವೇ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಈ ಕಟ್ಟಡದಲ್ಲಿ ಯಾರೂ ವಾಸಿಸುತ್ತಿಲ್ಲ. ಮಣ್ಣು ಪರೀಕ್ಷೆ ವೇಳೆ ಆದ ಯಡವಟ್ಟಿನಿಂದ ಈ ರೀತಿ ಆಗಿದೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಕಟ್ಟಡದ ತೆರವು ಮಾಡುತ್ತೇವೆʼʼ ಎಂದು ಎಸ್‌ಎನ್‌ಎನ್ ರಾಜ್ ಕಾರ್ಪ್ ಆಡಳಿತ ಮಂಡಳಿಯವರು ವಿವರಿಸಿದ್ದಾರೆ. ಆ ಮೂಲಕ ಬೆಂಗಳೂರಿನ ಅತ್ಯಂತ ಎತ್ತರದ ಅಪಾರ್ಟ್‌ಮೆಂಟ್ ಎನಿಸಿಕೊಂಡಿರುವ ಕಟ್ಟಡ ಇತಿಹಾಸ ಬರೆಯುವ ಮುನ್ನವೇ ನೆಲ ಕಚ್ಚಲಿದೆ.
ಕೆಲವು ವರ್ಷಗಳ ಹಿಂದೆ ಕೇರಳಂನ ಕೊಚ್ಚಿಯಲ್ಲಿ 4 ಬಹುಮಹಡಿ ಕಟ್ಟಡಗಳನ್ನು ನೆಲಸಮಗೊಳಿಸಲಾಗಿತ್ತು. ಇದೇ ಮಾದರಿಯನ್ನು ಬೆಂಗಳೂರಿನಲ್ಲೂ ಬಳಸಲಾಗುತ್ತ ಎನ್ನುವ ಕುತೂಹಲ ಮೂಡಿದೆ. ಕೊಚ್ಚಿ ಮರಡ್ನಲ್ಲಿ ಅನಧಿಕೃತವಾಗಿ ನಿರ್ವಿುಸಲಾಗಿದ್ದ ಬಹುಮಹಡಿ ಕಟ್ಟಡಗಳನ್ನು ಧ್ವಂಸಗೊಳಿಸಲಾಗಿತ್ತು. ಆ ಮೂಲಕ ದೇಶದಲ್ಲಿ ಮೊದಲ ಬಾರಿಗೆ 4 ಗಗನಚುಂಬಿ ಕಟ್ಟಡಗಳನ್ನು ನಿಯಂತ್ರಿತ ಸ್ಪೋಟಕ ಬಳಸಿ ಕೆಡವಲಾಗಿತ್ತು. ಅಕ್ಕ ಪಕ್ಕದ ಯಾವುದೇ ಕಟ್ಟಡಗಳಿಗೆ ಸ್ವಲ್ಪವೂ ಹಾನಿಯಾಗದಂತೆ ಸುಧಾರಿತ ಕ್ರಮದ ಮೂಲಕ ಧ್ವಂಸಗೊಳಿಸಲಾಗಿತ್ತು. 4 ಕಟ್ಟಡಗಳ ತ್ಯಾಜ್ಯ ಒಂದೂ ಕಾಲು ಲಕ್ಷ ಟನ್ ಮೀರಿತ್ತು.


