Greater Bengaluru News9 : ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಚೆನ್ನಮ್ಮ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ಅವರು, ಕುಟುಂಬದವರು ಸೋಮವಾರ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿದ್ದು, ಸರ್ಕಾರದ ಪರವಾಗಿ ಅಗತ್ಯ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
“ಕರ್ನಾಟಕ ಸರ್ಕಾರದ ವತಿಯಿಂದ ಅವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಗುವುದು. ಕುಟುಂಬದವರು ಸೋಮವಾರ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿದ್ದು, ಸರ್ಕಾರದ ಪರವಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ” ಎಂದು ಹೇಳಿದರು.
ಮಾಜಿ ಪ್ರಧಾನಮಂತ್ರಿಯವರ ಧರ್ಮಪತ್ನಿ ಹಾಗೂ ಕೇಂದ್ರ ಸಚಿವರ ತಾಯಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಗೌರವ ನೀಡಲು ತೀರ್ಮಾನಿಸಿದೆ ಎಂದು ತಿಳಿಸಿದರು.
“ದೇವೇಗೌಡ ಅವರ ರಾಜಕೀಯ ಜೀವನದ ಪ್ರತಿಯೊಂದು ಹಂತದಲ್ಲೂ ಚೆನ್ನಮ್ಮ ಅವರು ಬೆಂಬಲವಾಗಿ ನಿಂತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಕುಟುಂಬದ ಎಲ್ಲ ಸದಸ್ಯರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಡಿ.ಕೆ. ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದರು.


