Greater Bengaluru News9 : ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರು ಬದುಕಿನಲ್ಲಿ ಹಲವು ಕಠಿಣ ಸವಾಲುಗಳನ್ನು ಎದುರಿಸಿ, ಎರಡು ಬಾರಿ ಸಾವಿನ ದವಡೆಯಿಂದ ಪಾರಾಗಿದ್ದರು. 2001ರಲ್ಲಿ ನಡೆದ ಆ್ಯಸಿಡ್ ದಾಳಿ ಹಾಗೂ 2023ರ ಕೋವಿಡ್ ಸೋಂಕಿನಿಂದ ಅವರು ಚೇತರಿಸಿಕೊಂಡಿದ್ದರು.
2001ರಲ್ಲಿ ದೇವಾಲಯದಲ್ಲೇ ನಡೆದಿತ್ತು ಆ್ಯಸಿಡ್ ದಾಳಿ
2001ರ ಫೆಬ್ರವರಿ 21ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ಶಿವ ದೇವಾಲಯದಲ್ಲಿ ಚೆನ್ನಮ್ಮ ಅವರ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಶಿವರಾತ್ರಿ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಲು ಚೆನ್ನಮ್ಮ ಅವರು ಸೊಸೆ ಭವಾನಿ ರೇವಣ್ಣ ಅವರೊಂದಿಗೆ ದೇವಸ್ಥಾನಕ್ಕೆ ತೆರಳಿದ್ದರು. ಆ ಸಂದರ್ಭದಲ್ಲಿ ದೇವೇಗೌಡರ ಕುಟುಂಬದ ಸಂಬಂಧಿಕ ಎಚ್.ಡಿ. ಲೋಕೇಶ್ ಎಂಬಾತ ಪೂಜಾ ಸಾಮಗ್ರಿಗಳ ನಡುವೆ ಆ್ಯಸಿಡ್ ಬಾಟಲಿ ಇಟ್ಟುಕೊಂಡು ಬಂದು, ಚೆನ್ನಮ್ಮ ಹಾಗೂ ಭವಾನಿ ರೇವಣ್ಣ ಅವರ ಮೇಲೆ ಏಕಾಏಕಿ ಎರಚಿದ್ದ.
ದಾಳಿಯಲ್ಲಿ ಚೆನ್ನಮ್ಮ ಅವರಿಗೆ ಗಂಭೀರ ಗಾಯಗಳಾಗಿದ್ದು, ಮುಖ, ಕತ್ತು, ಎದೆ, ಬೆನ್ನು ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದವು. ಕೂದಲು ಕೂಡ ಸುಟ್ಟು ಹೋಗಿತ್ತು. ಅವರನ್ನು ತಕ್ಷಣ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುಮಾರು ಎರಡು ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದರು. ಸಾವು-ಬದುಕಿನ ನಡುವೆ ಹೋರಾಡಿದ ಚೆನ್ನಮ್ಮ ಅವರು ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಮನೆಗೆ ಮರಳಿದ್ದರು. ಆದರೆ ಆ್ಯಸಿಡ್ ದಾಳಿಯ ಗಾಯದ ಗುರುತುಗಳು ಜೀವನಪೂರ್ತಿ ಉಳಿದಿದ್ದವು.
ಆರೋಪಿಗೆ ಶಿಕ್ಷೆ, ಬಳಿಕ ಕ್ಷಮಿಸಿದ ಚೆನ್ನಮ್ಮ
ಪ್ರಕರಣದಲ್ಲಿ ಆರೋಪಿ ಲೋಕೇಶ್ ಬಂಧನಕ್ಕೊಳಗಾಗಿದ್ದು, ಹಾಸನ ಸೆಷನ್ಸ್ ಕೋರ್ಟ್ 8 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ ಹೈಕೋರ್ಟ್ ಶಿಕ್ಷೆಯನ್ನು 6 ವರ್ಷಕ್ಕೆ ಇಳಿಸಿತ್ತು. ತಮ್ಮ ಮೇಲೆ ಆ್ಯಸಿಡ್ ದಾಳಿ ನಡೆಸಿದ ವ್ಯಕ್ತಿಯನ್ನೂ ಚೆನ್ನಮ್ಮ ಅವರು ಕ್ಷಮಿಸಿದ್ದರು ಎನ್ನಲಾಗಿದೆ. ಕುಟುಂಬದ ಮನವಿಯ ಮೇರೆಗೆ ಮಾನವೀಯ ದೃಷ್ಟಿಯಿಂದ ಕ್ಷಮೆ ತೋರಿಸಿದ್ದರು.
ಕೋವಿಡ್ ಸೋಂಕಿನಿಂದಲೂ ಚೇತರಿಕೆ
ಇನ್ನು 2023ರಲ್ಲಿ ಚೆನ್ನಮ್ಮ ಅವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಅದೇ ಸಮಯದಲ್ಲಿ ದೇವೇಗೌಡರಿಗೂ ಸೋಂಕು ತಗುಲಿತ್ತು. ಇಬ್ಬರೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಬದುಕಿನುದ್ದಕ್ಕೂ ಹಲವು ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿದ ಚೆನ್ನಮ್ಮ ಅವರು ಇದೀಗ ಇಹಲೋಕ ತ್ಯಜಿಸಿದ್ದು, ಅವರ ಜೀವನ ಹೋರಾಟದ ಕಥೆ ಅನೇಕರಿಗೆ ಸ್ಫೂರ್ತಿಯಾಗಿದೆ.


