ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಕಟ್ಟಡಗಳ ನಿರ್ವಣಕ್ಕೆ ತಡೆಹಾಕುವ ನಿಟ್ಟಿನಲ್ಲಿ ಸರ್ಕಾರ ಕೆಲವು ಕಠಿಣ ನಿಯಮ ರೂಪಿಸಿದ ಬೆನ್ನಲ್ಲೇ, ವಸತಿ ಸೇರಿ ಎಲ್ಲ ಬಗೆಯ ಬಿಲ್ಡಿಂಗ್ಗಳಿಗೂ ಅನ್ವಯವಾಗುವಂತೆ ನಕ್ಷೆ ಮಂಜೂರಾತಿ, ಆರಂಭಿಕ ಪ್ರಮಾಣಪತ್ರ (ಸಿಸಿ) ಹಾಗೂ ಸ್ವಾಧೀನಾನುಭವ ಪ್ರಮಾಣಪತ್ರ (ಒಸಿ) ಪಡೆಯದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸದಿರಲು ವಿದ್ಯುತ್ ವಿತರಣಾ ಕಂಪನಿಗಳು (ಎಸ್ಕಾಂ) ನಿರ್ಧರಿಸಿವೆ. ಇದು ಕಟ್ಟಡ ಮಾಲೀಕರಿಗೆ ಸಂಕಷ್ಟ ತಂದೊಡ್ಡಿದೆ.
ಈ ನಿಯಮವು ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಅನ್ವಯವಾಗಲಿದೆ. ಇಂಥದ್ದೊಂದು ಕಠಿಣ ನಿಯಮವುಳ್ಳ ಆದೇಶವನ್ನು ಆಯಾ ಎಸ್ಕಾಂಗಳ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರು ಕೆಳಹಂತದ ಅಧಿಕಾರಿಗಳಿಗೆ ರವಾನಿಸಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ. ವಿಶೇಷವೆಂದರೆ ಹೊಸ ಕಟ್ಟಡಗಳ ಜತೆಗೆ ಹಾಲಿ ನಿರ್ಮಾಣ ಹಂತದಲ್ಲಿರುವ ಬಿಲ್ಡಿಂಗ್ಗಳಿಗೂ ಆದೇಶ ಅನ್ವಯವಾಗಲಿದೆ.
ಕಳೆದ ಡಿ.17ರಂದು ಸುಪ್ರೀಂಕೋರ್ಟ್, ಅನಧಿಕೃತ ಕಟ್ಟಡ ಮತ್ತು ನಕ್ಷೆ ಉಲ್ಲಂಘಿಸಿ ನಿರ್ವಿುಸುವ ಬಿಲ್ಡಿಂಗ್ಗಳಿಗೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಬಹುದೆಂದು ಆದೇಶ ನೀಡಿತ್ತು. ಇದನ್ನಾಧರಿಸಿ ಕಳೆದ ಜ.9ರಂದೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮುಖ್ಯ ಆಯುಕ್ತರು ಬೆಸ್ಕಾಂ ಹಾಗೂ ಜಲಮಂಡಳಿಗೆ ಪತ್ರ ಬರೆದು ಸಿಸಿ, ಒಸಿ ಪಡೆಯದ ಕಟ್ಟಡಗಳಿಗೆ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸದಂತೆ ಮನವಿ ಮಾಡಿದ್ದರು. ಇದೀಗ ಈ ನಿಯಮ ಜಾರಿಗೆ ಸರ್ಕಾರಿ ಸಂಸ್ಥೆಗಳು ಮುಂದಡಿ ಇಟ್ಟಿವೆ.
ನಕ್ಷೆ ಮಂಜೂರಾತಿ ಪಡೆಯದೆ ಕಟ್ಟಡ ನಿರ್ವಿುಸುತ್ತಿದ್ದಲ್ಲಿ ಅಂತಹ ಬಿಲ್ಡಿಂಗ್ಗಳಿಗೆ ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ ಸಿಗುವುದಿಲ್ಲ. ಈ ಹಿಂದೆ ಒಸಿ ಪಡೆಯದಿದ್ದಲ್ಲಿ ಕಾಯಂ ಆಗಿ ವಿದ್ಯುತ್ ಸರಬರಾಜು ನೀಡುವ ವೇಳೆ ಕಠಿಣ ನಿಯಮ ಪಾಲಿಸಲಾಗುತ್ತಿತ್ತು. ಒಮ್ಮೆ ಕಟ್ಟಡ ನಿರ್ವಿುಸಿದ ಮೇಲೆ ಅದು ಅಕ್ರಮ ಬಿಲ್ಡಿಂಗ್ ಆಗಿದ್ದಲ್ಲಿ ಅದನ್ನು ಒಡೆದುಹಾಕಲು ಸಾಧ್ಯವಾಗುತ್ತಿರಲಿಲ್ಲ. ನೋಟಿಸ್ ಜಾರಿ ಮಾಡಿದಲ್ಲಿ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತರಲಾಗುತ್ತಿತ್ತು. ಹೀಗಾಗಿ ಅನಧಿಕೃತ ಕಟ್ಟಡಗಳಿಗೆ ತಡೆಹಾಕಲು ಸಾಧ್ಯವಾಗುತ್ತಿರಲಿಲ್ಲ.
ಕಟ್ಟಡ ನಿರ್ವಿುಸಲು ನಕ್ಷೆ ಮಂಜೂರಾತಿ, ಸಿಸಿ ಹಾಗೂ ಒಸಿ ಪಡೆಯದಿದ್ದಲ್ಲಿ ನೀರಿನ ಸಂಪರ್ಕವೂ ಸಿಗದು. ಸುಪ್ರೀಂಕೋರ್ಟ್ ಆದೇಶ ವಿದ್ಯುತ್ ಹಾಗೂ ನೀರಿನ ಸಂಪರ್ಕ – ಎರಡೂ ಸೌಲಭ್ಯಕ್ಕೆ ಅನ್ವಯವಾಗಲಿದೆ. ಸಂಸ್ಥೆಗಳು ಬೇರೆ ಬೇರೆ ಆಗಿರುವುದರಿಂದ ಎಸ್ಕಾಂಗಳು ವಿದ್ಯುತ್ ಸಂಪರ್ಕ ಕಡಿತ ಮಾಡುವ ಅಧಿಕಾರ ಹೊಂದಿದ್ದರೆ, ಜಲಮಂಡಳಿ ಅಥವಾ ಜಲ ಪೂರೈಸುವ ಏಜೆನ್ಸಿ ನೀರಿನ ಸಂಪರ್ಕ ಕಟ್ ಮಾಡಬಹುದಾಗಿದೆ.
ಭಾರತೀಯ ವಿದ್ಯುಚ್ಛಕ್ತಿ ಕಾಯ್ದೆಯ ನಿಯಮ 43ರ ಅನ್ವಯ ನಾಗರಿಕನೊಬ್ಬ ಹೊಸದಾಗಿ ಮನೆ ಕಟ್ಟಲು ಎಸ್ಕಾಂಗೆ ಅರ್ಜಿ ಸಲ್ಲಿಸಿದರೆ ಅದನ್ನು ಮಾನ್ಯ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದಿದೆ. ಅಂದರೆ ತಾತ್ಕಾಲಿಕ ಸಂಪರ್ಕ ನೀಡಿ ನಂತರ ನಿಯಮ ಪೂರೈಸಿದರೆ ಕಾಯಂ ಸಂಪರ್ಕ ಕಲ್ಪಿಸಬಹುದಾಗಿದೆ. ಆದರೀಗ, ತಾತ್ಕಾಲಿಕ ಸಂಪರ್ಕ ಪಡೆಯಲು ಎಸ್ಕಾಂಗಳು ಕಠಿಣ ನಿಯಮ ರೂಪಿಸಿವೆ.
ಎಸ್ಕಾಂಗಳ ಆದೇಶದಿಂದ ಕಟ್ಟಡ ನಿರ್ವಣಕ್ಕೆ ಅಡ್ಡಿಯಾಗುತ್ತಿರುವ ಕಾರಣ ಕೆಲವೊಂದು ಅಂಶಗಳನ್ನು ಮಾರ್ಪಡಿಸಬೇಕು. ಇದನ್ನಾಧರಿಸಿ ಸರ್ಕಾರ ಸುಪ್ರೀಂಗೆ ಮನವರಿಕೆ ಮಾಡಿಕೊಟ್ಟು ನಾಗರಿಕರಿಗೆ ಬಿಲ್ಡಿಂಗ್ ನಿರ್ವಿುಸಲು ಅನುಕೂಲ ಮಾಡಿಕೊಡುವುದರಿಂದ ಒಳಿತಾಗಲಿದೆ. ಹಾಗಾಗಿ ಶೀಘ್ರವೇ ಸರ್ಕಾರಕ್ಕೆ ಮನವಿ ಸಲ್ಲಿಸಲು ರಾಜ್ಯ ಗುತ್ತಿಗೆದಾರರ ಸಂಘ ಮುಂದಾಗಿದೆ.
ಅನುಕೂಲವೇನು?
ಅನಧಿಕೃತ ಕಟ್ಟಡಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ. ನಕ್ಷೆ ಮಂಜೂರಾತಿಯಂತೆ ಕಟ್ಟಡ ನಿರ್ವಿುಸಬಹುದು. ನಗರ ಯೋಜನೆ ನಿಯಮ ಪಾಲಿಸಿ ಬಿಲ್ಡಿಂಗ್ ನಿರ್ಮಾಣವಾಗಲಿದೆ. ಸ್ಥಳೀಯ ಸಂಸ್ಥೆಗಳಿಂದ ಕಟ್ಟಡದ ತೆರಿಗೆ ವಸೂಲಿ ಸುಲಭವಾಗಲಿದೆ. ಮಾಲೀಕತ್ವ ತಗಾದೆ ಕಡಿಮೆಯಾಗಲಿದ್ದು, ವ್ಯಾಜ್ಯ ಪರಿಹಾರ ಸುಲಭವಾಗಲಿದೆ.
ಅನನುಕೂಲವೇನು?
ಸಾರ್ವಜನಿಕರಿಗೆ ಸುಲಭ/ತ್ವರಿತ ಪ್ರಮಾಣಪತ್ರ ಸಿಗುವುದಿಲ್ಲ. ಅಂದುಕೊಂಡ ಸಮಯದೊಳಗೆ ಬಿಲ್ಡಿಂಗ್ ಕಟ್ಟಲಾಗದು. ನಿರ್ಮಾಣ ಸಂಸ್ಥೆ, ಗುತ್ತಿಗೆದಾರರಿಂದ ಹೆಚ್ಚಿನ ಶುಲ್ಕ ವಸೂಲಿಯಾಗಬಹುದು. ಸರ್ಕಾರಿ ಕಟ್ಟಡ ಸೇರಿ ಎಲ್ಲೆಡೆ ಕಾರ್ವಿುಕರ ಕೊರತೆ ಆಗಲಿದೆ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಹೆಚ್ಚುವ ಸಾಧ್ಯತೆ ಇದೆ.
ರಾಜ್ಯದ ಶಾಲೆಗಳಿಗೆ ಏಪ್ರಿಲ್ 11 ರಿಂದ ಬೇಸಿಗೆ ರಜೆ ಘೋಷಣೆ : ಮೇ 29ಕ್ಕೆ ಶಾಲೆಗಳು ಪುನರಾರಂಭ


