ಬೆಂಗಳೂರು: ಡಿಸಿಎಂ ಡಿಕೆಶಿವಕುಮಾರ್ ತಾಕೀತಿನ ಬೆನ್ನಲ್ಲೇ ಅಲರ್ಟ್ ಆಗಿದ್ದ ಬಿಬಿಎಂಪಿ ರಸ್ತೆ ಗುಂಡಿ ಮುಚ್ಚುವ ಕೆಲಸದಲ್ಲಿ ನಿರತವಾಗಿತ್ತು. ಆದರೆ ಸಂಪೂರ್ಣವಾಗಿ ನಗರದ ರಸ್ತೆ ಗುಂಡಿಗಳನ್ನು ಮುಚ್ಚಲು ಪಾಲಿಕೆಗೆ ಸಾಧ್ಯವಾಗಿಲ್ಲ. ಹಾಗಾದ್ರೆ ಒಂದು ವಾರದಲ್ಲಿ ಪಾಲಿಕೆ ಮುಚ್ಚಿದ ಗುಂಡಿಗಳಷ್ಟು? ಇದಕ್ಕೆ ಎಷ್ಟು ಹಣ ಖರ್ಚು ಮಾಡಲಾಗಿದೆ?
ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆಶಿ ಸೆಪ್ಟೆಂಬರ್ 8ರಂದು ಬಿಬಿಎಂಪಿ ಸಭೆ ನಡೆಸಿ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದರು. ಈ ಬೆನ್ನಲ್ಲೇ ರಸ್ತೆಗಿಳಿದ ಬಿಬಿಎಂಪಿ ಕಳೆದ ಒಂದು ವಾರದಿಂದ ನಿರಂತರವಾಗಿ ಗುಂಡಿಗಳಿಗೆ ತೇಪೆ ಹಾಕುತ್ತಲೇ ಇದೆ. ಇದಕ್ಕೂ ಮೊದಲು ನಗರದಲ್ಲಿ ಇರೋದು ಕೇವಲ ಎರಡು ಸಾವಿರ ಗುಂಡಿಗಳು ಎಂದಿದ್ದ ಪಾಲಿಕೆ ಇದೀಗ ಒಂದೇ ಒಂದು ವಾರದಲ್ಲಿ ಬರೋಬ್ಬರಿ ಆರು ಸಾವಿರ ಗುಂಡಿಗಳನ್ನು ಮುಚ್ಚಿರೋದಾಗಿ ಹೇಳಿದೆ. ಈ ಮೂಲಕ ಮತ್ತೊಂದು ಬಿಬಿಎಂಪಿಯ ಸುಳ್ಳು ಗುಂಡಿ ಲೆಕ್ಕ ಅನಾವರಣಗೊಂಡಿದೆ.
ಬಿಬಿಎಂಪಿ ಚೀಫ್ ಕಮೀಷನರ್ ಹೇಳೋದೇನು?
ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಚೀಫ್ ಕಮೀಷನರ್ ತುಷಾರ್ ಗಿರಿನಾಥ್, “ಡಿಸಿಎಂ ಗುಂಡಿ ಮುಚ್ಚಲು ಎರಡು ವಾರಗಳ ಟೈಮ್ ಕೊಟ್ಟಿದರು, ಸಿಎಂ ನಗರ ಪ್ರದಕ್ಷಿಣೆ ಬಂದಾಗ 20ರ ಒಳಗೆ ಮುಚ್ಚಿ ಎಂದಿದ್ದರು. ನಾವು 17ರೊಳಗೆ ಗುಂಡಿ ಮುಚ್ಚಬೇಕು ಎಂದ್ಕೊಂಡಿದ್ದೆವು. ಈಗ ನೋಡಿದ್ರೆ ಇನ್ನೂ ಎರಡು ದಿನ ಬೇಕು. ನಿತ್ಯ ಗುಂಡಿ ಗಮನ ಆ್ಯಪ್‌ನಲ್ಲಿ ಒಂದು ಸಾವಿರ ಕೇಸ್ ಬರ್ತಿದೆ. ನಾವು 800 ಗುಂಡಿಗಳನ್ನು ನಿತ್ಯ ಮುಚ್ಚುವ ಸಾಮರ್ಥ್ಯ ಹೊಂದಿದ್ದೇವೆ. ಗುಂಡಿ ಗಮನ ಆ್ಯಪ್ ಬರೋದನ್ನ ಬಿಟ್ಟು ನಾವೇ ಪತ್ತೆ ಹಚ್ಚಿ ಮುಚ್ಚುತ್ತಿದ್ದೇವೆ” ಎಂದಿದ್ದಾರೆ.
ಗುಂಡಿ ಮುಚ್ಚಲು ಪಾಲಿಕೆ ಖರ್ಚು ಮಾಡಿದ್ದೆಷ್ಟು !?
ಕಳೆದೊಂದು ವಾರದಲ್ಲಿ ಗುಂಡಿ ಮುಚ್ಚಲು ಪಾಲಿಕೆ ಸಮರೋಪಾದಿಯಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದೆ. ಈ ಅವಧಿಯಲ್ಲಿ ಗುಂಡಿ ಮುಚ್ಚಲು ಪಾಲಿಕೆ ಖರ್ಚು ಮಾಡಿದ್ದು ಬರೋಬ್ಬರಿ 15 ಕೋಟಿ ಎನ್ನಲಾಗಿದೆ. ಪ್ರತಿ ವಾರ್ಡ್ ಗೆ ಗುಂಡಿ ಮುಚ್ಚಲು ಪಾಲಿಕೆ ಕೊಟ್ಟಿದ್ದು ತಲಾ 15 ಲಕ್ಷ. ಅದರಂತೆ 225 ವಾರ್ಡ್‌ಗಳಿಗೆ 33 ಕೋಟಿ 75 ಲಕ್ಷ ಗುಂಡಿ ಮುಚ್ಚಲು ಅನುದಾನ ನೀಡಲಾಗಿದೆ. ಈ ಪೈಕಿ ಕಳೆದೊಂದು ವಾರದಿಂದ ಯುದ್ಧೋಪಾದಿಯಲ್ಲಿ ಗುಂಡಿ ಮುಚ್ಚಿರುವ ಪಾಲಿಕೆ 15 ಕೋಟಿ ವೆಚ್ಚದಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಿದೆ. ಒಂದು ವಾರದಲ್ಲಿ ಇಷ್ಟೊಂದು ದೊಡ್ಡ ಮೊತ್ತ ಕೆಲಸ ಆಗಿದ್ದು ಅನುಮಾನ ಎನ್ನುತ್ತಿದ್ದಾರೆ ಸಾರ್ವಜನಿಕರು.
ಒಟ್ಟಾರೆ ಡಿಕೆಶಿ ಸೂಚನೆ ಬೆನ್ನಲ್ಲೇ ಅಲರ್ಟ್ ಆಗಿದ್ದ ಪಾಲಿಕೆ ಗುಂಡಿ ಮುಚ್ಚುವ ಕಾರ್ಯಕ್ಕೆ ವೇಗ ನೀಡಿದೆ. ಕಳೆದೊಂದು ವಾರದಿಂದ ಸಮರೋಪಾದಿಯಲ್ಲಿ ಕೆಲಸ ಮಾಡಿದ್ದ ಪಾಲಿಕೆ, ಈಗ ಬಹುತೇಕ ಗುಂಡಿಗಳು ಮುಚ್ಚಿರೋದಾಗಿ ತಿಳಿಸಿದೆ. ಆದರೆ ಈಗ ಮುಚ್ಚಿರುವ ಗುಂಡಿಗಳೆಲ್ಲಾ ಎಷ್ಟು ದಿನ ಬಾಳಿಕೆ ಬರುತ್ತೆ ಎನ್ನುವುದೇ ಈಗಿರುವ ಯಕ್ಷ ಪ್ರಶ್ನೆ.
ಶಾಸಕ ಮುನಿರತ್ನಗೆ ಮತ್ತೊಂದು ಶಾಕ್: ಅತ್ಯಾಚಾರ ಆರೋಪ ಮಾಡಿದ ಮಹಿಳೆ, ಎಫ್ಐಆರ್ ದಾಖಲು


