Greater Bengaluru News9 : ಮುಖ್ಯಮಂತ್ರಿ ಬದಲಾವಣೆ ವಿಚಾರ ರಾಜ್ಯ ರಾಜಕೀಯದಲ್ಲಿ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಕಾಂಗ್ರೆಸ್ ಹೈಕಮಾಂಡ್ ಖಡಕ್ ಸೂಚನೆಯಂತೆ ಒಗ್ಗಟ್ಟಿನ ಮಂತ್ರ ಜಪಿಸಿರುವ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವೆ ಕುರ್ಚಿ ಕಾಳಗ ನಡೆಯುತ್ತಲೇ ಇದ್ದು, ಸದ್ಯ ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯ ಮಾತುಗಳು ಮತ್ತೆ ಮುನ್ನಲೆಗೆ ಬಂದಿದೆ.
ಎಸ್, ಹೈಕಮಾಂಡ್ ಸೂಚನೆಯಂತೆ ಇಷ್ಟು ದಿನ ತಣ್ಣಗಿದ್ದ ಪವರ್ಶೇರಿಂಗ್ವಿಚಾರದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಹೊತ್ತಲ್ಲೆ ಕಾಂಗ್ರೆಸ್ನಾಯಕ ರಾಹುಲ್ಗಾಂಧಿ ರಾಜ್ಯ ನಾಯಕರನ್ನ ಭೇಟಿಯಾಗಿದ್ದಾರೆ. ತಮಿಳುನಾಡಿಗೆ ತೆರಳುವ ಮಾರ್ಗಮಧ್ಯೆ ಮೈಸೂರಿಗೆ ಆಗಮಿಸಿದ್ದ ರಾಹುಲ್ಗಾಂಧಿಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಭೇಟಿಯಾಗಿ 5 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಮೊದಲು ಸಿಎಂ ಸಿದ್ದರಾಮಯ್ಯರನ್ನ ಸೈಡ್ ಕರೆದುಕೊಂಡು ಹೋಗಿ ಚರ್ಚಿಸಿದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ರನ್ನೂ ಪ್ರತ್ಯೇಕವಾಗಿ ಸೈಡ್ ಗೆ ಕರೆದೊಯ್ದು ಚರ್ಚಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುಪ್ತವಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿ ವಿಮಾನದಿಂದ ಇಳಿದು ಹೆಲಿಕಾಪ್ಟರ್ ಹತ್ತುವ ಮುನ್ನ ಈ ಗುಪ್ತ ಚರ್ಚೆ ನಡೆದಿದ್ದು, ಇದರ ಉದ್ದೇಶ ಏನು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಮೈಸೂರಿನಲ್ಲಿ ಡಿ.ಕೆ.ಶಿವಕುಮಾರ್ ಮತ್ತು ರಾಹುಲ್ ಗಾಂಧಿ ಪ್ರತ್ಯೇಕವಾಗಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಈ ಗುಪ್ತ ಮಾತುಕತೆ ವೇಳೆ ಡಿ.ಕೆ.ಶಿವಕುಮಾರ್ ಮತ್ತು ರಾಹುಲ್ ಗಾಂಧಿ ಮಾತನಾಡುತ್ತಿರುವ ಫೋಟೋಗಳು ಲಭ್ಯವಾಗಿದ್ದು, ಚರ್ಚೆಯ ವಿಷಯವೇನು ಎಂಬುದರ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.


