BBMP
Loading ...

BBMP

Greater Bengaluru News9 : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯ ಐದು ಪಾಲಿಕೆಗಳಿಗೆ ಚುನಾವಣೆ ಸನ್ನಿಹಿತವಾಗುತ್ತಿದೆ. ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯ ಡೆಡ್ಲೈನ್ ನಿಗದಿ ಪಡಿಸಿದೆ. ಈ ಹಿನ್ನಲೆಯಲ್ಲಿ, ಪ್ರಮುಖ ಮೂರು ಪಾರ್ಟಿಗಳು ಚುನಾವಣಾ ಸಿದ್ದತೆಯನ್ನು ಆರಂಭಿಸಿದೆ.

ಜೂನ್ ಮಾಸಾಂತ್ಯದೊಳಗೆ ನಡೆಯಬೇಕಾಗಿರುವ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ (EVM) ನಲ್ಲಿ ನಡೆಸಲಾಗುತ್ತೋ ಅಥವಾ ಮತಪತ್ರಗಳಲ್ಲಿ ( Ballot Paper ) ನಡೆಸಲಾಗುತ್ತದೋ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗಾಗಿ, ರಾಜ್ಯ ಚುನಾವಣಾ ಆಯೋಗತೆಗೆದುಕೊಳ್ಳುವ ಅಂತಿಮ ನಿರ್ಧಾರ ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯ ಚುನಾವಣಾ ಆಯೋಗವು, ಸರ್ವೋಚ್ಚ ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದೆ. ಟಾಪ್ ಕೋರ್ಟ್ ಆದೇಶದಂತೆ ಚುನಾವಣೆ ನಡೆಸಲು ಆಯೋಗ ಸಿದ್ದವಾಗಿದೆ ಎಂದು ಆಯುಕ್ತರಾದ ಜಿಎಸ್ ಸಂಗರೇಶಿ ತಿಳಿಸಿದ್ದಾರೆ. ಆದರೆ, ಚುನಾವಣೆ ಇವಿಎಂನಲ್ಲೋ ಅಥವಾ ಬ್ಯಾಲಟ್ ಪೇಪರ್’ನಲ್ಲೋ ಎನ್ನುವುದರ ಬಗ್ಗೆ ಅವರು ಮಾಹಿತಿಯನ್ನು ಹಂಚಿಕೊಂಡಿಲ್ಲ.

ಸರ್ಕಾರದ ಮೂಲಗಳ ಪ್ರಕಾರ, ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣೆಗಳ ರೀತಿಯಲ್ಲೇ ಬೆಂಗಳೂರು ಮಹಾನಗರದ ಚುನಾವಣೆಯನ್ನೂ ಮತಪತ್ರಗಳ ಮೂಲಕ ನಡೆಸಲು ಹೆಚ್ಚಿನ ಒಲವಿದೆ. ಇವಿಎಂಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎನ್ನುವುದು ಸರ್ಕಾರದ ನಂಬಿಕೆಯಾಗಿದೆ.

ಬೆಂಗಳೂರು ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಮತ್ತು ಕೇಂದ್ರ ಈ ಐದು ಪಾಲಿಕೆಗಳ ಒಟ್ಟು 369 ವಾರ್ಡ್’ಗಳಿಗೆ ಚುನಾವಣೆ ನಡೆಯಬೇಕಿದೆ. 2020ರ ಚುನಾವಣೆಯಲ್ಲಿ 198 ವಾರ್ಡ್’ಗಳಿದ್ದವು ಮತ್ತು ಇವಿಎಂನಲ್ಲಿ ಚುನಾವಣೆ ನಡೆದಿತ್ತು. ಜನವರಿ 29, 2021ರಂದು, ಅಂದಿನ ಬಿಜೆಪಿ ಸರ್ಕಾರ ವಾರ್ಡ್ ಮರುವಿಂಗಡಿಸಿ 243ಕ್ಕೆ ಏರಿಸಿತ್ತು.

ಸಿದ್ದರಾಮಯ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ’ಗ್ರೇಟರ್ ಬೆಂಗಳೂರು ಗವರ್ನೆನ್ಸ್ ಆಕ್ಟ್ -2024’ ಪ್ರಕಾರ, ಐದು ಪಾಲಿಕೆಗಳ ಚುನಾವಣೆಗಳನ್ನು ಬ್ಯಾಲಟ್ ಪೇಪರ್ ಅಥವಾ ಇವಿಎಂ ಮೂಲಕ ನಡೆಸಲು ಅವಕಾಶವಿದೆ. ಆದರೆ, ಚುನಾವಣಾ ಆಯೋಗ ಈ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ.

ರಾಹುಲ್ ಗಾಂಧಿಯವರ ವೋಟ್ ಚೋರಿ ಅಭಿಯಾನದ ನಂತರ ಇವಿಎಂ ಸೇಫೋ ಅಥವಾ ಹಿಂದಿನ ರೀತಿಯಲ್ಲಿ ಬ್ಯಾಲಟ್ ಪೇಪರ್ ಪದ್ದತಿಯೇ ಉತ್ತಮವೋ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ. ಬೆಂಗಳೂರಿನ ಮತದಾರರು ಕೂಡಾ ತಮ್ಮ ಹಕ್ಕನ್ನು ಚಲಾಯಿಸಲು ಯಾವ ವಿಧಾನವನ್ನು ಆಯೋಗ ಅಂತಿಮಗೊಳಿಸುತ್ತದೆ ಎನ್ನುವ ಕಾತುರದಲ್ಲಿದ್ದಾರೆ.

ಜಿಬಿಎ ಚುನಾವಣೆಗೆ ಕಳೆದ ಅಕ್ಟೋಬರ್’ನಲ್ಲೇ ಬಿಜೆಪಿಯು ಸಂಯೋಜಕರ ತಂಡವನ್ನು ನೇಮಿಸಿತ್ತು. ಇನ್ನು, ಕಾಂಗ್ರೆಸ್ ಕೂಡಾ ಸ್ಪರ್ಧಾಂಕ್ಷಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಇನ್ನು, ಈ ಸಂಬಂಧ, ಹತ್ತಕ್ಕೂ ಹೆಚ್ಚು ಪೂರ್ವಭಾವಿ ಸಭೆಯನ್ನು ನಡೆಸಿದೆ.

Leave a Reply

Your email address will not be published. Required fields are marked *