BBMP
Loading ...

WhatsApp-Image-2026-05-28-at-4.30.31-PM

Greater Bengaluru News9: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‌ಪಿ) ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬಳಿಕ ಡಿ.ಕೆ. ಶಿವಕುಮಾರ್ ಮುಂದಿನ ಸಿಎಂ ಆಗುವುದು ಬಹುತೇಕ ಖಚಿತವಾಗಿತ್ತು. ಆದರೆ ಕಾಂಗ್ರೆಸ್ ಪಕ್ಷದ ಸಂವಿಧಾನಾತ್ಮಕ ಪ್ರಕ್ರಿಯೆಯಂತೆ ಶಾಸಕಾಂಗ ಪಕ್ಷದ ಸಭೆ ನಡೆಸಿ ನಾಯಕನ ಆಯ್ಕೆಯನ್ನು ಅಧಿಕೃತಗೊಳಿಸಲಾಗಿದೆ.

ಸಭೆಯಲ್ಲಿ ನೂತನ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಈ ನಿರ್ಣಯವನ್ನು ಹಿರಿಯ ನಾಯಕ ಜಿ. ಪರಮೇಶ್ವರ್ ಅನುಮೋದಿಸಿದರು. ಬಳಿಕ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಶಾಸಕರು ಸರ್ವಾನುಮತದಿಂದ ತೀರ್ಮಾನವನ್ನು ಅಂಗೀಕರಿಸಿದರು.

ಸಭೆಗೆ ಕಾಂಗ್ರೆಸ್‌ನ ಹಿರಿಯ ನಾಯಕರು ಹಾಗೂ ವೀಕ್ಷಕರಾಗಿ ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭಾಗವಹಿಸಿದ್ದರು.

ಸಭೆಗೆ ಆಗಮಿಸುವ ಮೊದಲು ವಿಧಾನಸೌಧದಲ್ಲಿರುವ ಅಜ್ಜಯ್ಯನ ಸನ್ನಿಧಿಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಿಎಲ್‌ಪಿ ಸಭೆಯಲ್ಲಿ ಪಾಲ್ಗೊಂಡ ಅವರು, ಎಲ್ಲ ಶಾಸಕರ ಬಳಿಗೂ ತೆರಳಿ ಹಸ್ತಲಾಘವ ಮಾಡುವ ಮೂಲಕ ಆತ್ಮೀಯತೆ ಪ್ರದರ್ಶಿಸಿದ್ದು ಗಮನ ಸೆಳೆಯಿತು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಕಳೆದ ಮೂರು ವರ್ಷಗಳ ಕಾಲ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಡಿ.ಕೆ. ಶಿವಕುಮಾರ್, ಇದೇ ಅವಧಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದರು. ಇದೀಗ ಅವರು ರಾಜ್ಯದ ಉನ್ನತ ಹುದ್ದೆಗೆ ಏರಿರುವುದು ಕಾಂಗ್ರೆಸ್‌ನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

ಇದೇ ವೇಳೆ ನೂತನ ಮುಖ್ಯಮಂತ್ರಿ ಆಗಿ ಡಿ.ಕೆ. ಶಿವಕುಮಾರ್ ಅವರು ಜೂನ್ 3ರಂದು ಪ್ರಮಾಣವಚನ ಸ್ವೀಕರಿಸುವುದು ಖಚಿತವಾಗಿದೆ. ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಸ್ವಾಮೀಜಿಗಳ ಮಾರ್ಗದರ್ಶನ ಹಾಗೂ ಶುಭ ಮುಹೂರ್ತದ ಆಧಾರದ ಮೇಲೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಬುಧವಾರ ಸಂಜೆ ನಡೆಯಲಿರುವ ಸರಳ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಲೋಕಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಯಾವುದೇ ಆಡಂಬರಕ್ಕೆ ಅವಕಾಶ ನೀಡದೇ ಸರಳವಾಗಿ ಪ್ರತಿಜ್ಞಾವಿಧಿ ನೆರವೇರಿಸಲಾಗುವುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಈಗಾಗಲೇ ಅಧಿಕೃತ ಮಾಹಿತಿ ನೀಡಿದ್ದು, ನೂತನ ಸರ್ಕಾರ ರಚನೆಗೆ ಅಗತ್ಯ ಸಿದ್ಧತೆಗಳು ಆರಂಭಗೊಂಡಿವೆ.

Leave a Reply

Your email address will not be published. Required fields are marked *